ಮುಂಬೈ (ಪಿಟಿಐ): `ಬ್ಯಾಂಕುಗಳ ಮೂಲಕ ಚಿನ್ನದ ನಾಣ್ಯ ಮಾರಾಟ ಮಾಡುವುದಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ~ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸ್ಪಷ್ಟಪಡಿಸಿದೆ.
`ಬ್ಯಾಂಕುಗಳ ಮೂಲಕ ನಡೆಯುವ ಚಿನ್ನದ ನಾಣ್ಯದ ಮಾರಾಟವು ತುಂಬಾ ಚಿಕ್ಕ ಪ್ರಮಾಣದಲ್ಲಿದೆ. ಇದರ ಮೇಲೆ ನಿಯಂತ್ರಣ ಹೇರುವ ಯೋಚನೆ ಸದ್ಯಕ್ಕಿಲ್ಲ~ ಎಂದು `ಆರ್‌ಬಿಐ~ ಗವರ್ನರ್ ಡಿ. ಸುಬ್ಬರಾವ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಚಿನ್ನದ ಆಮದು ಹೆಚ್ಚುತ್ತಿರುವುದು ವಿದೇಶಿ ವಿನಿಮಯ ಸಂಗ್ರಹದ ಮೇಲೆ ಒತ್ತಡ ಬೀರಿದೆ. ಈ ನಿಟ್ಟಿನಲ್ಲಿ ಚಿನ್ನದ ನಾಣ್ಯ ಮಾರಾಟದ ಮೇಲೆ ನಿಯಂತ್ರಣ ಹೇರಲಾಗುವುದೇ ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಅವರು ಈ ಮೇಲಿನಂತೆ ಉತ್ತರಿಸಿದರು. ನಾಣ್ಯ ಮಾರಾಟ ಮಾತ್ರವಲ್ಲ, ಬ್ಯಾಂಕುಗಳು ನೀಡುವ ಚಿನ್ನದ ಸಾಲದ ಮೇಲೆ ಕೂಡ `ಆರ್‌ಬಿಐ~ ನಿರ್ಬಂಧ ವಿಧಿಸುತ್ತಿಲ್ಲ.
ಇಂದು ಲಕ್ಷಾಂತರ ಕುಟುಂಬಗಳು `ಚಿನ್ನ~ವನ್ನೇ ನೆಚ್ಚಿಕೊಂಡಿವೆ ಎಂದರು. `ಚಿನ್ನದ ಬೇಡಿಕೆ ಮತ್ತು ಬೆಲೆ ಇಳಿಯಲು, ದೇಶದಲ್ಲಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದಲಾವಣೆ ಆಗಬೇಕು~ ಎಂದು ಇತ್ತೀಚೆಗೆ `ಆರ್‌ಬಿಐ~ ಡೆಪ್ಯುಟಿ ಗವರ್ನರ್ ಕೆ.ಸಿ ಚಕ್ರವರ್ತಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.