ADVERTISEMENT

ತಂಬಾಕು ಉತ್ಪನ್ನ: ಪ್ಲಾಸ್ಟಿಕ್ ಬಳಕೆಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2011, 18:30 IST
Last Updated 7 ಫೆಬ್ರುವರಿ 2011, 18:30 IST

ನವದೆಹಲಿ (ಪಿಟಿಐ): ಪರಿಸರಕ್ಕೆ ಹಾನಿಯುಂಟುಮಾಡುವ ಪಾಲಿಮರ್‌ಗಳ ಬಳಕೆಯ ನಿಯಂತ್ರಣಕ್ಕಾಗಿ ಇರುವ ಕಾನೂನನ್ನು ಜಾರಿಗೊಳಿಸದೇ ಇರುವುದುಕ್ಕೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ನಂತರ ಎಚ್ಚೆತ್ತಿರುವ ಪರಿಸರ ಸಚಿವಾಲಯ, ಗುಟ್ಕಾ ಸೇರಿದಂತೆ ಇತರ ತಂಬಾಕು ಉತ್ಪನ್ನಗಳನ್ನು ಹಾಕಲು ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಿ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಹೊಸದಾಗಿ ಜಾರಿಗೆ ಬಂದಿರುವ ಪ್ಲಾಸ್ಟಿಕ್ ತ್ಯಾಜ್ಯ (ಆಡಳಿತ ಮತ್ತು ನಿರ್ವಹಣೆ) ನಿಯಮಗಳು-2011, ಆಹಾರ ಪದಾರ್ಥಗಳನ್ನು ಹಾಕಲು ಮರುಬಳಕೆಯ ಪ್ಲಾಸ್ಟಿಕ್ ಬಳಸುವುದಕ್ಕೂ ನಿಷೇಧ ಹೇರುತ್ತದೆ.

ತಂಬಾಕು ಉತ್ಪನ್ನಗಳನ್ನು ಹಾಕಲು ಪ್ಲಾಸ್ಟಿಕ್ ಬಳಸುವುದಕ್ಕೆ ನಿಯಂತ್ರಣ ಹೇರುವ ಕಾನೂನುನನ್ನು ಜಾರಿಗೊಳಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಕಾಲಾವಕಾಶ ನೀಡಲು ಸುಪ್ರೀಂಕೋರ್ಟ್ ಫೆಬ್ರುವರಿ 2ರಂದು ನಿರಾಕರಿಸಿತ್ತು. ಅಲ್ಲದೇ ಇನ್ನು ಎರಡು ದಿನಗಳಲ್ಲಿ ಈ ಸಂಬಂಧ ಅಧಿಸೂಚನೆಯನ್ನು ಹೊರಡಿಸಬೇಕು ಎಂದೂ ಅದು ಸೂಚಿಸಿತ್ತು.

ಸುಪ್ರೀಂಕೋರ್ಟ್‌ನ ಸೂಚನೆ ಮೇರೆಗೆ ಕೇಂದ್ರ ಸರ್ಕಾರ ಈ ಹೊಸ ಅಧಿಸೂಚನೆ ಹೊರಡಿಸಿದೆ. ಆದಾಗ್ಯೂ, ದೇಶಾದ್ಯಂತ ಪ್ಲಾಸ್ಟಿಕ್‌ಬಳಕೆಗೆ ನಿಷೇಧ ಹೇರುವುದು ಅಪ್ರಾಯೋಗಿಕ ಮತ್ತು ಅಪೇಕ್ಷಣೀಯವಲ್ಲದ್ದು ಎಂದು ಪರಿಸರ ಸಚಿವ ಜೈರಾಂ ರಮೇಶ್ ಹೇಳಿದ್ದಾರೆ. 1999ರ ಮರುಬಳಕೆಯ ಪ್ಲಾಸಿಕ್ ಉತ್ಪಾದನೆ ಮತ್ತು ಉಪಯೋಗ ನಿಯಮಗಳಿಗೆ  (2003ರಲ್ಲಿ ತಿದ್ದುಪಡಿಗೊಂಡಿದೆ) ಪ್ರತಿಯಾಗಿ ಹೊಸ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.