ADVERTISEMENT

ದ್ವಿಚಕ್ರ ವಾಹನ ರೂ 800 ತುಟ್ಟಿ

ಬೆಲೆ ಏರಿಸಿದ ಹೋಂಡಾ, ಬಜಾಜ್, ಟಿವಿಎಸ್

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2013, 19:59 IST
Last Updated 17 ಏಪ್ರಿಲ್ 2013, 19:59 IST

ನವದೆಹಲಿ/ಗುಡಗಾಂವ್(ಪಿಟಿಐ): ದ್ವಿಚಕ್ರ ವಾಹನ ಪ್ರಿಯರಿಗೆ ಕಹಿ ಸುದ್ದಿ. ಬೇವು-ಬೆಲ್ಲದ ಹಬ್ಬ `ಯುಗಾದಿ' ಸಂಭ್ರಮ ಮುಗಿಯಲಿ ಎಂದು ಕಾಯುತ್ತಿದ್ದಂತೆ ಇದ್ದ ಪ್ರಮುಖ ದ್ವಿಚಕ್ರ ವಾಹನ ಕಂಪೆನಿಗಳು ಮೋಟಾರ್ ಬೈಕ್ ಮತ್ತು ಸ್ಕೂಟರ್‌ಗಳನ್ನು ಬೆಲೆಯನ್ನುರೂ200ರಿಂದ 800ರವರೆಗೂ ಏರಿಸಿವೆ.

ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯ (ಎಚ್‌ಎಂಎಸ್‌ಐ), ಬಜಾಜ್ ಆಟೊ ಮತ್ತು ಟಿವಿಎಸ್ ಮೋಟಾರ್ ಕಂಪೆನಿ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಏರಿಕೆ ಪ್ರಕಟಿಸಿವೆ. `ಎಚ್‌ಎಂಎಸ್‌ಐ' ತನ್ನ ಎಲ್ಲ ಮಾದರಿಯ ದ್ವಿಚಕ್ರವಾಹನಗಳ ಬೆಲೆಯನ್ನು ಏಪ್ರಿಲ್ 1ರಿಂದಲೂ ಜಾರಿಗೆ ಬರುವಂತೆರೂ200ರಿಂದ 800ರವರೆಗೆ ಏರಿಸಿದೆ.

`ಡೀಸೆಲ್ ಬೆಲೆ ಏರಿದ್ದರಿಂದ ಕಚ್ಚಾ ಸಾಮಗ್ರಿ ಮತ್ತು ದೇಶದ ವಿವಿಧೆಡೆಗೆ ದ್ವಿಚಕ್ರ ವಾಹನಗಳ ಸಾಗಣೆ ವೆಚ್ಚ ದುಬಾರಿಯಾಗಿದೆ. ಜತೆಗೆ ವಾಹನ ವಿಮಾ ಶುಲ್ಕದಲ್ಲಿಯೂ ಹೆಚ್ಚಳವಾಗಿದೆ. ಹಾಗಾಗಿ ವಾಹನಗಳ ಬೆಲೆ ಏರಿಕೆ ಅನಿವಾರ್ಯವಾಯಿತು' ಎಂದು `ಎಚ್‌ಎಂಎಸ್‌ಐ' ಉಪಾಧ್ಯಕ್ಷ ವೈ.ಎಸ್.ಗುಲೇರಿಯಾ ಇಲ್ಲಿ ಬುಧವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಏಪ್ರಿಲ್ 12ರಿಂದ ಜಾರಿಗೆ ಬರುವಂತೆ ದ್ವಿಚಕ್ರ ವಾಹನಗಳ ಬೆಲೆಯನ್ನುರೂ300ರಿಂದ 500ರಷ್ಟು ಏರಿಸಲಾಗಿದೆ ಎಂದಿರುವ  `ಬಜಾಜ್ ಆಟೊ' ಅಧ್ಯಕ್ಷ ಕೆ.ಶ್ರೀನಿವಾಸ್, `ಸಾಗಣೆ ವೆಚ್ಚದಲ್ಲಿ ಹೆಚ್ಚಳವಾಗಿದ್ದೇ ಇದಕ್ಕೆ ಕಾರಣ' ಎಂದು ಸ್ಪಷ್ಟಪಡಿಸಿದ್ದಾರೆ. ದ್ವಿಚಕ್ರ ವಾಹನಗಳ ಬೆಲೆಯನ್ನು ಏ. 4ರಿಂದಲೇ ಶೇ 0.25ರಿಂದ ಶೇ 0.50ರಷ್ಟು ಏರಿಸಲಾಗಿದೆ ಎಂದು `ಟಿವಿಎಸ್ ಮೋಟಾರ್ ಕಂಪೆನಿ'  ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.