ADVERTISEMENT

ನಾರಾಯಣ ಪರಂಪರೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 10:57 IST
Last Updated 21 ಆಗಸ್ಟ್ 2019, 10:57 IST

ರಚ್ಚೆಮಳೆಯಂಥ ಮಾತು. ಪ್ರತಿ ನುಡಿಯಲ್ಲೂ ಆತ್ಮವಿಶ್ವಾಸ. ‘ನನ್ನ ಶಿಸ್ತನ್ನು ಬೇರೆಯವರ ಕಾರಣಕ್ಕೆ ಯಾಕೆ ಹಾಳುಮಾಡಿಕೊಳ್ಳಬೇಕು’ ಎಂಬ ದಿಟ್ಟ ಪ್ರಶ್ನೆ. ಹೀಗೆ ಕಂಡಿದ್ದು ನಿರ್ದೇಶಕ ಎಸ್.ನಾರಾಯಣ್.

ತಮ್ಮದೇ ನಿರ್ಮಾಣದ ‘ವೀರ ಪರಂಪರೆ’ ಚಿತ್ರವನ್ನು ಇನ್ನೇನು ತೆರೆಗೆ ತರುವ ಸಿದ್ಧತೆ ನಡೆಸಿರುವ ಅವರು ಹೇಳಿಕೊಳ್ಳಲು ಕೆಲವು ಕಥೆಗಳಿದ್ದವು. ಈ ಚಿತ್ರ ಆದದ್ದು, ಚಿತ್ರೀಕರಣದ ಸಂದರ್ಭದಲ್ಲಿ ನಡೆದದ್ದು ಒಂದೆರಡಲ್ಲ ಎಂದು ತಮ್ಮದೇ ಶೈಲಿಯಲ್ಲಿ ಹಾಸ್ಯ ಬೆರೆಸಿ ನಾರಾಯಣ್ ಮಾತಿಗೆ ಕೂತರು.

‘ವೀರ ಪರಂಪರೆ’ಯ ಹುಟ್ಟಿಗೆ ಮೂಲ ಕಾರಣ ಸುದೀಪ್. ‘ಸ್ವಾಮಿ’ ಎಂಬ ರೀಮೇಕ್ ಚಿತ್ರಕ್ಕೆ ನಾರಾಯಣ್ ಮೊದಲು ಕೈಹಾಕಿದ್ದರು. ‘ಒಂದು ಸ್ವಮೇಕ್ ಮಾಡಿ. ಮೂರು ತಿಂಗಳಾದ ಮೇಲೆ ಶೂಟಿಂಗ್ ಶುರುಮಾಡೋಣ. ತಪ್ಪು ತಿಳಿಯಬೇಡಿ’ ಎಂದು ನಮ್ರವಾಗಿ ಕೇಳಿಕೊಂಡಿದ್ದು ಸುದೀಪ್. ನಾಯಕನೊಬ್ಬನ ಇಂಥ ಪ್ರೀತಿಯ ಒತ್ತಾಯವನ್ನು ಖುಷಿಯಿಂದಲೇ ಒಪ್ಪಿಕೊಂಡ ನಾರಾಯಣ್ ಕಥೆ ಬರೆಯಲು ಕೂತಾಗ ಇನ್ನೊಂದು ಪಾತ್ರ ಹುಟ್ಟಿತು. ಅದೇ ವರದೇಗೌಡನ ಪಾತ್ರ. ಅದನ್ನು ಅಂಬರೀಷ್ ಮಾತ್ರ ಅಭಿನಯಿಸಲು ಸಾಧ್ಯ ಅನ್ನಿಸಿದ್ದೇ ಅವರ ಮನೆಗೆ ಹೋಗಿ ಅಪ್ಪಣೆ ಪಡೆದು ಬಂದರು.

ADVERTISEMENT

ಎರಡೂವರೆ ತಿಂಗಳು ಪಟ್ಟಾಗಿ ಕೂತು ಸ್ಕ್ರಿಪ್ಟ್ ಬರೆದದ್ದಾಯಿತು. ದಿಢೀರನೆ ಅಂಬರೀಷ್ ಕರೆದರು. ಸಂಭಾವನೆ ವಿಷಯ ಮಾತಾಡಲು ಇರಬೇಕು ಎಂದುಕೊಂಡು ಹೋದ ನಾರಾಯಣ್‌ಗೆ ಅಲ್ಲಿ ಆದದ್ದು ಅಚ್ಚರಿ. ತಾವು ನಟಿಸಲು ಸಾಧ್ಯವಿಲ್ಲ ಎಂದು ಅಂಬರೀಷ್ ಹೇಳಿದ್ದೇ ಇದಕ್ಕೆ ಕಾರಣ. ಹತ್ತು ನಿಮಿಷ ಮೌನ. ಆಮೇಲೆ ಅಂಬರೀಷ್ ‘ಯಾಕೆ ಡಲ್ಲಾಗಿಬಿಟ್ಟಿರಿ’ ಎಂದರು. ಅದಕ್ಕೆ ನಾರಾಯಣ್, ‘ಎರಡೂವರೆ ತಿಂಗಳ ಕೆಲಸ ವೇಸ್ಟ್ ಆಯಿತು. ಹೊಸ ಸ್ಕ್ರಿಪ್ಟ್ ಬರೆಯಬೇಕಲ್ಲ’ ಎಂದು ಯೋಚಿಸುತ್ತಿರುವುದಾಗಿ ಹೇಳಿದ ಮೇಲೆ ಅಂಬರೀಷ್ ಮನಸ್ಸು ಬದಲಾಯಿತು. ಮೊದಲು ಅವರು ಕಥೆಯನ್ನೇ ಕೇಳಲಿಲ್ಲವಂತೆ.

ಗೋಕಾಕ್‌ನಲ್ಲಿ ಚಿತ್ರೀಕರಣ. ಅಲ್ಲಿಗೆ ಹೋದಮೇಲೆ ನಾರಾಯಣ್ ಕಥೆ ಹೇಳಿದ್ದು. ಬೆಂಗಳೂರಲ್ಲೇ ಹೇಳಿದ್ದಿದ್ದರೆ ಒಪ್ಪಿಕೊಳ್ಳುತ್ತಲೇ ಇರಲಿಲ್ಲ ಎಂದು ಅಂಬರೀಷ್ ಇನ್ನೊಂದು ಬಾಂಬ್ ಹಾಕಿದ್ದು ಅಲ್ಲೇ. ತಮ್ಮ ಅಶಿಸ್ತಿನಿಂದ ಶಿಸ್ತಿನ ನಿರ್ದೇಶಕರಿಗೆ ತೊಂದರೆ ಆಗಬಾರದು ಎಂಬ ಉದ್ದೇಶಕ್ಕಷ್ಟೆ ಅಂಬರೀಷ್ ಹಾಗೆ ಮಾತಾಡಿದ್ದು. ಚಿತ್ರೀಕರಣ ಶುರುವಾದ ಮೇಲೆ ಅಂಬರೀಷ್ ಜೀವನಶೈಲಿಯೇ ಬದಲಾಯಿತಂತೆ. ಬೆಳಿಗ್ಗೆ ಎಂಟು ಗಂಟೆಗೆಲ್ಲಾ ಲೊಕೇಷನ್‌ಗೆ ಹಾಜರ್. ರಾತ್ರಿ ಹತ್ತಕ್ಕೆ ಮಲಗುವುದನ್ನು ಮರೆತೇಹೋಗಿದ್ದ ಅಂಬರೀಷ್ ಗೋಕಾಕ್‌ನಲ್ಲಿ ಆ ವೇಳೆಗೆ ನಿದ್ರೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡರು. ಬೆಳಿಗ್ಗೆ ಐದಕ್ಕೇ ಎದ್ದು ತಯಾರಾಗುವುದೂ ರೂಢಿಯಾಯಿತು. ಇದು ನಾರಾಯಣ್ ಹೇಳಿದ ಮೊದಲ ಕಥೆ.

ಎರಡನೆಯದ್ದು ಸುದೀಪ್‌ಗೆ ಸಂಬಂಧಿಸಿದ್ದು. ಅವರು ಮುಂಗೋಪಿ, ನಿರ್ದೇಶಕರ ಕೆಲಸದಲ್ಲೂ ಮೂಗುತೂರಿಸುತ್ತಾರೆ ಎಂಬ ಆರೋಪಗಳನ್ನು ಕೇಳಿದ್ದ ನಾರಾಯಣ್‌ಗೆ ಕೆಲವೇ ದಿನಗಳಲ್ಲಿ ಅವು ಸುಳ್ಳು ಆರೋಪ ಎನಿಸಿದೆ. ಅದಕ್ಕೆ ಕಾರಣ ಸುದೀಪ್ ಶ್ರದ್ಧೆ. ಬೆಳಿಗ್ಗೆ ಐದು ಐದೂವರೆಗೆ ಲೊಕೇಷನ್‌ನಲ್ಲಿ ಇರುತ್ತಿದ್ದ ಸುದೀಪ್ ನಿರ್ದೇಶನದ ವಿಷಯದಲ್ಲಿ ಮೂಗು ತೂರಿಸಲೇ ಇಲ್ಲವಂತೆ. ಕನ್ನಡ ಚಿತ್ರರಂಗಕ್ಕೆ ಅತ್ಯಗತ್ಯವಾದ ನಟ ಸುದೀಪ್. ಆತ ನಿಜವಾದ ಕಲಾವಿದ ಎಂದು ನಾರಾಯಣ್ ಗುಣವಿಶೇಷಣಗಳನ್ನು ಬೆರೆಸಿ ಮಾತಾಡಲು ಅವರ ಅನುಭವವೇ ಕಾರಣ.
ನಾರಾಯಣ್ ಪತ್ನಿ ಮಾಡಿಕೊಂಡು ಬರುತ್ತಿದ್ದ ಸೀಗಡಿ, ಮೀನು ಸಾರಿನ ರುಚಿ ನೆನಪಿಸಿಕೊಂಡು ಬಾಯಲ್ಲಿ ನೀರೂರಿಸಿದ್ದು ನಾಯಕಿ ಐಂದ್ರಿತಾ. ಬಹುಕಾಲದ ನಂತರ ಮುಖ್ಯ ಪಾತ್ರದಲ್ಲಿ ನಟಿಸಿರುವ ವಿಜಯಲಕ್ಷ್ಮಿ ಸಿಂಗ್ ಕೂಡ ಮಾತಾಡಿದರು. ಕಪ್ಪು ಮೇಕಪ್ ಹಚ್ಚಿಕೊಂಡು ಕಷ್ಟಪಟ್ಟು ನಟಿಸಿದ ಕ್ಷಣಗಳನ್ನು ನೆನಪಿಸಿಕೊಂಡರು.

ಸೆನ್ಸಾರ್ ಮಂಡಳಿ ಈಗಾಗಲೇ ಚಿತ್ರವನ್ನು ವೀಕ್ಷಿಸಿದ್ದು, ಬಹುಶಃ ಮುಂದಿನ ವಾರ ಚಿತ್ರ ತೆರೆಕಾಣಲಿದೆ. ಮುಹೂರ್ತದ ದಿನವೇ ಬಿಡುಗಡೆಯ ದಿನಾಂಕವನ್ನೂ ಪ್ರಕಟಿಸುವ ಜಾಯಮಾನದ ನಾರಾಯಣ್‌ಗೆ ಉದ್ಯಮದ ಇತರರ ಅಶಿಸ್ತಿನಿಂದ ಕಿರಿಕಿರಿಯೂ ಆಗುತ್ತಿದೆ. ಯಾವ ದೊಡ್ಡ ಚಿತ್ರ ಬಂದರೂ ಧೃತಿಗೆಡದಂತೆ ಇರುವ ಮನಸ್ಥಿತಿಯನ್ನು ನಮ್ಮವರು ರೂಢಿಸಿಕೊಳ್ಳಬೇಕು ಎಂಬುದು ಅವರ ಕಿವಿಮಾತು.

ಎಲ್ಲರ ಮಾತೂ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಶುರುವಾದದ್ದು ಸುದೀಪ್ ಫೋನ್ ಇನ್ ಕಾರ್ಯಕ್ರಮ. ಫೋನ್‌ನಲ್ಲೇ ಅವರು ‘ವೀರ ಪರಂಪರೆ’ ಅದ್ಭುತ ಚಿತ್ರ ಎಂದು ಬಾಯಿತುಂಬಾ ಹೊಗಳಿದರು. ದೀಢೀರ್ ಗೋಷ್ಠಿ ಅದಾಗಿದ್ದರಿಂದ ಅಂಬರೀಷ್ ಬಂದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.