ADVERTISEMENT

ನಾಲ್ಕು ಕಡೆ ಶ್ರೇಷ್ಠತಾ ಕೇಂದ್ರ ಸ್ಥಾಪನೆಗೆ ನಿರ್ಧಾರ

ಸೀಮೆನ್ಸ್‌ ಇಂಡಸ್ಟ್ರಿ ಸಾಫ್ಟ್‌ವೇರ್‌ ಇಂಡಿಯಾ ಕಂಪೆನಿ ಜೊತೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 9 ಜೂನ್ 2017, 19:30 IST
Last Updated 9 ಜೂನ್ 2017, 19:30 IST
ಸುಮನ್‌ ಬೋಸ್‌ ಮತ್ತು ಬಿ.ಎನ್‌. ಗದಗ್‌  ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು . ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದರು 	– ಪ್ರಜಾವಾಣಿ ಚಿತ್ರ
ಸುಮನ್‌ ಬೋಸ್‌ ಮತ್ತು ಬಿ.ಎನ್‌. ಗದಗ್‌ ಒಪ್ಪಂದ ಪತ್ರ ವಿನಿಮಯ ಮಾಡಿಕೊಂಡರು . ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಐಟಿಐ, ಡಿಪ್ಲೊಮಾ ಮತ್ತು ಎಂಜಿನಿಯರಿಂಗ್‌ ಮುಗಿಸಿದವರಿಗೆ ಅಂತರರಾಷ್ಟ್ರೀಯ ಗುಣಮಟ್ಟದ ಕೈಗಾರಿಕಾ ತರಬೇತಿ ನೀಡಲು ರಾಜ್ಯದ ನಾಲ್ಕು ಕಡೆ ಶ್ರೇಷ್ಠತಾ ಕೇಂದ್ರ ತೆರೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಸಂಬಂಧ ‘ಸೀಮೆನ್ಸ್‌ ಇಂಡಸ್ಟ್ರಿ ಸಾಫ್ಟ್‌ವೇರ್ ಇಂಡಿಯಾ ಕಂಪೆನಿ’ ಜೊತೆ   ವಿಧಾನಸೌಧದಲ್ಲಿ ಶುಕ್ರವಾರ ಒಪ್ಪಂದ ಮಾಡಿಕೊಳ್ಳಲಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಒಪ್ಪಂದ ಪತ್ರಕ್ಕೆ ಅಧಿಕಾರಿಗಳು ಸಹಿ ಹಾಕಿದರು.

‘ಬೆಂಗಳೂರಿನಲ್ಲಿ ವೈಮಾನಿಕ ತರಬೇತಿ ಕೇಂದ್ರ, ಮೈಸೂರಿನಲ್ಲಿ ಆಟೋಮೊಬೈಲ್, ಕಲಬುರ್ಗಿಯಲ್ಲಿ ಸಾಮಾನ್ಯ ಎಂಜಿನಿಯರಿಂಗ್‌ ಮತ್ತು ದಾಂಡೇಲಿಯಲ್ಲಿ ನವೀಕರಿಸಬಹುದಾದ ಇಂಧನ  ತರಬೇತಿ ಕೇಂದ್ರಗಳು ಸ್ಥಾಪನೆಯಾಗಲಿವೆ. ಪ್ರತಿ ಕೇಂದ್ರಕ್ಕೆ ₹ 500 ಕೋಟಿ ವೆಚ್ಚ ಆಗಲಿದೆ.
ಒಟ್ಟು  ₹ 2031.80 ಕೋಟಿ ಮೊತ್ತದ ಯೋಜನೆ ಇದಾಗಿದೆ. ರಾಜ್ಯ ಸರ್ಕಾರ ‘ಕೌಶಲ ಕರ್ನಾಟಕ’ ಯೋಜನೆಯಡಿ ಶೇ 10ರಷ್ಟು (₹ 219.32 ಕೋಟಿ)  ಅನುದಾನ ನೀಡಲಿದ್ದು, ಸೀಮೆನ್ಸ್‌ ಕಂಪೆನಿ ಶೇ 90ರಷ್ಟು (₹ 18 22.48 ಕೋಟಿ) ಹಣಕಾಸು ಒದಗಿಸಲಿದೆ’ ಎಂದು  ಸಿದ್ದರಾಮಯ್ಯ ವಿವರಿಸಿದರು.

ADVERTISEMENT

ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ ಮಾತನಾಡಿ, ‘ಪ್ರತಿ ವರ್ಷ ವಿದ್ಯಾಭ್ಯಾಸ ಮುಗಿಸಿ 11 ಲಕ್ಷ ಜನ ಉದ್ಯೋಗ ಅರಸಿ ಬರುತ್ತಿದ್ದಾರೆ. ಅವರು ಜಾಗತಿಕ ಮಟ್ಟದಲ್ಲಿ ಉದ್ಯೋಗ ಪಡೆಯಲು ಅನುಕೂಲ ಆಗುವಂತೆ  ಉಚಿತ ತರಬೇತಿ ನೀಡುವ ಉದ್ದೇಶದಿಂದ ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ’ ಎಂದು ಹೇಳಿದರು.

ಸೀಮನ್ಸ್‌ ಕಂಪೆನಿ ಜೊತೆ ಮೂರು ವರ್ಷದ ಅವಧಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿವರ್ಷ 25,000 ದಿಂದ 30,000 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.  ತರಬೇತಿಗಾಗಿ ಈಗಾಗಲೇ 6 ಲಕ್ಷ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು.

ಮುಖ್ಯಾಂಶಗಳು

* ಬೆಂಗಳೂರು, ಮೈಸೂರು, ಕಲಬುರ್ಗಿ, ದಾಂಡೇಲಿಯಲ್ಲಿ ಶ್ರೇಷ್ಠತಾ ಕೇಂದ್ರ
*  ₹ 2,031 ಕೋಟಿ ಮೊತ್ತದ ಯೋಜನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.