ADVERTISEMENT

ನೋಟು ವಿನಿಮಯ: ಷೆಲ್‌ ಕಂಪೆನಿ ಖಾತೆ ಬಳಕೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 19:30 IST
Last Updated 6 ಅಕ್ಟೋಬರ್ 2017, 19:30 IST

ನವದೆಹಲಿ: ನೋಟು ರದ್ದತಿ ಬಳಿಕ ಷೆಲ್‌ ಕಂಪೆನಿಗಳ ಶೂನ್ಯ ಖಾತೆಗಳಲ್ಲಿ ಭಾರಿ ಪ್ರಮಾಣದಲ್ಲಿ ನಗದು ಜಮಾ ಮಾಡಿ, ಹಿಂದಕ್ಕೆ ಪಡೆಯಲಾಗಿದೆ.

ದೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ತೆರಿಗೆ ವಂಚಕ ಕಂಪೆನಿಗಳಿವೆ (ಷೆಲ್‌ ಕಂಪೆನಿಗಳು). ನೋಟು ರದ್ದತಿಗೂ ಮುನ್ನ (ನವೆಂಬರ್‌ 8) 5,800 ಕಂಪೆನಿಗಳ ಖಾತೆಗಳಲ್ಲಿ ಹಣವೇ ಇರಲಿಲ್ಲ. ನವೆಂಬರ್ 8ರ ನಂತರ ಆ ಕಂಪೆನಿಗಳ ಖಾತೆಗಳಿಗೆ ₹4,552 ಕೋಟಿ ನಗದು ಜಮಾ ಆಗಿದ್ದು, ₹4,552 ಕೋಟಿ ತೆಗೆಯಲಾಗಿದೆ.

ಕೇವಲ 13 ಬ್ಯಾಂಕ್‌ಗಳು ಸರ್ಕಾರಕ್ಕೆ ನೀಡಿರುವ ಮಾಹಿತಿಯಿಂದ ಇದು ತಿಳಿದುಬಂದಿದೆ.  ಕೆಲವು ಕಂಪೆನಿಗಳ ಹೆಸರಿನಲ್ಲಿ 100ಕ್ಕೂ ಹೆಚ್ಚು ಖಾತೆಗಳಿವೆ. ಒಂದು ಕಂಪೆನಿ ಹೆಸರಿನಲ್ಲಿ 2,134 ಖಾತೆಗಳಿವೆ ಎಂಬ ಮಾಹಿತಿ ದೊರೆತಿದೆ ಎಂದು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯ ಹೇಳಿದೆ.

ADVERTISEMENT

ಹಣಕಾಸು ಲೆಕ್ಕಪತ್ರ ಸಲ್ಲಿಸದ ಮತ್ತು ಇತರ ನಿಯಂತ್ರಣ ನಿಯಮಗಳನ್ನು ಪಾಲಿಸದ 2 ಲಕ್ಷಕ್ಕೂ ಅಧಿಕ ಕಂಪೆನಿಗಳ ನೋಂದಣಿಯನ್ನು ಸೆಪ್ಟೆಂಬರ್‌ನಲ್ಲಿ ರದ್ದು ಮಾಡಲಾಗಿದೆ. ಇದೀಗ ಈ ಕಂಪೆನಿಗಳ ಖಾತೆಗಳ ಪರಿಶೀಲನೆ ನಡೆಸಲಾಗುತ್ತಿದೆ.

2016ರ ನವೆಂಬರ್‌ 8ರಂದು ಒಂದು ಬ್ಯಾಂಕ್‌ನಲ್ಲಿ 429 ಕಂಪೆನಿಗಳು ಹೊಂದಿದ್ದ ಖಾತೆಗಳಲ್ಲಿ ನಗದು ಇರಲಿಲ್ಲ. ಆದರೆ ನವೆಂಬರ್ 8ರ ಬಳಿಕ ಆ ಖಾತೆಗಳಲ್ಲಿ ₹11 ಕೋಟಿ ಜಮಾ ಮಾಡಿ ಅದನ್ನು ಹಿಂದಕ್ಕೆ ಪಡೆಯಲಾಗಿದೆ. ಸರ್ಕಾರ ಈ ಖಾತೆಗಳನ್ನು ಸ್ಥಗಿತಗೊಳಿಸಿದಾಗ ಅವುಗಳಲ್ಲಿ ₹42 ಸಾವಿರ ಮಾತ್ರ ಇತ್ತು. 

ಇನ್ನೊಂದು ಬ್ಯಾಂಕ್‌ನಲ್ಲಿ 3000 ಕಂಪೆನಿಗಳು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಹೊಂದಿರುವುದು ಪತ್ತೆಯಾಗಿದೆ. ಈ ಖಾತೆಗಳಲ್ಲಿಯೂ ಒಟ್ಟಾರೆ ₹13 ಕೋಟಿ ನಗದು ಇತ್ತು. ಈ ಖಾತೆಗಳಿಗೂ ₹3,800 ಕೋಟಿ ಜಮಾ ಆಗಿದ್ದು, ಅಷ್ಟೇ ಮೊತ್ತವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.