ADVERTISEMENT

ಪೆಟ್ರೋಲಿಯಂ ಉತ್ಪನ್ನದ ಹಡಗು ಮಾರಿಷಸ್‌ಗೆ ತೆರಳಲು ಅಸ್ತು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 19:30 IST
Last Updated 11 ಡಿಸೆಂಬರ್ 2017, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವ್ಯಾಜ್ಯವೊಂದರಲ್ಲಿ ಜಪ್ತಿಯಾಗಿ ಮಂಗಳೂರು ಬಂದರಿನಲ್ಲಿ ನಿಂತಿರುವ 40 ಸಾವಿರ ಟನ್‌ ಪೆಟ್ರೋಲಿಯಂ ಉತ್ಪನ್ನ ಹೊಂದಿದ ಹಡಗು ಮಾರಿಷಸ್‌ಗೆ ತೆರಳಲು ಹೈಕೋರ್ಟ್ ಹಸಿರು ನಿಶಾನೆ ತೋರಿದೆ.

ಈ ಕುರಿತಂತೆ ಮಾರಿಷಸ್‌ನ ಬೆಟಾಮಿಕ್ಸ್ ಲಿಮಿಟೆಡ್‌ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಮತ್ತು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ಪ್ರತಿವರ್ಷ ಭಾರತದ ಮೂಲಕ ಮಾರಿಷಸ್‌ಗೆ 11,50,000 ಟನ್‌ ಪೆಟ್ರೋಲಿಯಂ ಉತ್ಪನ್ನಗಳನ್ನು ರಫ್ತು ಮಾಡಬೇಕಿದೆ. ಮೂರು ವರ್ಷಗಳ ಕಾಲದ ಈ ಪೂರೈಕೆಗೆ 2016ರಲ್ಲಿ ಒಪ್ಪಂದವಾಗಿದೆ. ಆದರೆ, ಸದ್ಯ  ಪೂರೈಕೆ ಸ್ಥಗಿತಗೊಂಡಿರುವುದರಿಂದ ಮಾರಿಷಸ್‌ನಲ್ಲಿ ತೀವ್ರ ತೊಂದರೆ ಉಂಟಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

‘ಮಾರಿಷಸ್‌ ಮತ್ತು ಭಾರತ ಸರ್ಕಾರದ ಮಧ್ಯೆ ಉತ್ತಮ ರಾಜತಾಂತ್ರಿಕ ಸಂಬಂಧವಿದ್ದು, ಮಾರಿಷಸ್‌ಗೆ ಸಾಗಿಸಬೇಕಾದ 40 ಸಾವಿರ ಟನ್‌ ಪೆಟ್ರೋಲಿಯಂ ಉತ್ಪನ್ನಗಳನ್ನು ಹೊಂದಿದ ಹಡಗು ಮಂಗಳೂರು ಬಂದರಿನಲ್ಲಿ ನಿಂತಿದೆ. ಆ ಹಡಗು ಕೂಡಲೇ ಅಲ್ಲಿಂದ ತೆರಳಲು ಆದೇಶಿಸಬೇಕು’ ಎಂದು ಕೋರಿದರು.

ಈ ಕುರಿತು  ವಿದೇಶಾಂಗ ಸಚಿವಾಲಯದ ಪ್ರಮಾಣ ಪತ್ರವನ್ನು ಸಲ್ಲಿಸಿದರು. ಇದನ್ನು ಮಾನ್ಯ ಮಾಡಿದ ನ್ಯಾಯಪೀಠ ತೈಲಭರಿತ ಹಡಗು ರವಾನೆಗೆ ಅಸ್ತು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.