ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 19:30 IST
Last Updated 17 ಏಪ್ರಿಲ್ 2018, 19:30 IST
ಪ್ರಶ್ನೋತ್ತರ
ಪ್ರಶ್ನೋತ್ತರ   

ಹೆಸರು ಬೇಡ, ವಿಜಯಪುರ
ನಾನು ಮ್ಯೂಚುವಲ್ ಫಂಡ್‌ನಲ್ಲಿ ಹಣ ಹೂಡಬೇಕೆಂದಿದ್ದೇನೆ. ಈ ಹೂಡಿಕೆಯ ವಿಚಾರದಲ್ಲಿ ನನಗೆ ಅನುಭವ ಇಲ್ಲ. ಮ್ಯೂಚುವಲ್ ಫಂಡ್ ಏಜೆಂಟ್ ಮುಖಾಂತರ ಹಣ ಹೂಡಿದರೆ ಅವರಿಗೆ ಎಷ್ಟು ಕಮಿಷನ್ ಬರುತ್ತದೆ. ಈ ಹೂಡಿಕೆಯಲ್ಲಿ ವೃದ್ಧಿಯಾದಂತಹ ಹಣಕ್ಕೆ ತೆರಿಗೆ ಕಟ್ಟಬೇಕೇ? 

ಉತ್ತರ: ಹಣ ಹೂಡಲು ಹಲವಾರು ದಾರಿಗಳಿದ್ದು, ಮ್ಯೂಚುವಲ್ ಫಂಡ್ ಕೂಡಾ ಒಂದು ಹೂಡಿಕೆಯಾಗಿದೆ. ಇದು ಷೇರು ಮಾರುಕಟ್ಟೆಯ ಇನ್ನೊಂದು ಮುಖ. ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಲು ಸಾಧ್ಯವಾಗಲಾರದವರು ಮ್ಯೂಚುವಲ್ ಫಂಡ್ ಮೂಲಕ ಷೇರು ಮಾರುಕಟ್ಟೆ ಪ್ರವೇಶಿಸುವ ಅವಕಾಶ ಇಲ್ಲಿದೆ.

ಗ್ರಾಹಕರಿಂದ ಕ್ರೋಡೀಕರಿಸಿದ ಮೊತ್ತವನ್ನು ಮ್ಯೂಚುವಲ್‌ ಫಂಡ್ ಕಂಪನಿಗಳು, ಉತ್ತಮ ಷೇರುಗಳಲ್ಲಿ ವಿನಿಯೋಗಿಸಿ, ಲಾಭ ಬಂದಲ್ಲಿ ಲಾಭಾಂಶ ರೂಪದಲ್ಲಿ ಗ್ರಾಹಕರಿಗೆ ಹಂಚುತ್ತವೆ. ಆದರೆ, ಇಲ್ಲಿ ಹೂಡಿದ ಹಣ ಷೇರು ಮಾರುಕಟ್ಟೆಯಲ್ಲಿ ಏರಿಳಿತದ ಮೇಲೆ ಅವಲಂಬಿಸಿರುವುದರಿಂದ, ನಿಖರವಾಗಿ ಲಾಭ ಬಂದೇ ಬರುತ್ತದೆ ಎನ್ನುವುದನ್ನು ಪರಿಣತರಿಂದಲೂ ಹೇಳಲು ಅಸಾಧ್ಯ.

ಇದೇ ಕಾರಣದಿಂದಾಗಿ ‘Mutual Fund investments are subject to market risk’ ಎಂಬುದಾಗಿ ತಿಳಿಸುತ್ತಾರೆ. ನಿಮ್ಮ ಉಳಿತಾಯದ ಶೇ 5 ರಿಂದ 10 ಮಾತ್ರ ಇಲ್ಲಿ ವಿನಿಯೋಗಿಸಿರಿ. ಲಾಭ ಬಂದಲ್ಲಿ ಇನ್ನೂ ಸ್ವಲ್ಪ ಹೆಚ್ಚಿನ ಹಣ ಹೂಡಿರಿ. ಏಜೆಂಟರಿಗೆ ಅವರು ಕೆಲಸ ಮಾಡಿದ್ದಕ್ಕೆ ಕೊಡುವ ಕಮಿಷನ್ ಆಗಿರುವುದರಿಂದ ಅದು ಒಂದು ಮುಖ್ಯವಾದ ವಿಚಾರವಲ್ಲ. ಮ್ಯೂಚುವಲ್‌ ಫಂಡ್‌ನಿಂದ ಪಡೆಯುವ ಡಿವಿಡೆಂಡ್ ಸೆಕ್ಷನ್ 10 (35) ಆಧಾರದ ಮೇಲೆ ಆದಾಯ ತೆರಿಗೆ ವಿನಾಯ್ತಿ ಇದೆ.
***
ರಾಜು, ಹುಕ್ಕೇರಿ
ನನ್ನ ಸಂಬಳ ₹ 10,000. ನನಗೆ ನನ್ನ ತಂದೆಯ ನಿವೃತ್ತಿಯಿಂದ ಬರುವ ಹಣದಲ್ಲಿ ₹ 4 ಲಕ್ಷ ಕೊಡುವವರಿದ್ದಾರೆ. ನಾನು ಅದನ್ನು ಎಸ್.ಬಿ.ಐ. ದಲ್ಲಿ ಎಫ್.ಡಿ ಮಾಡಬೇಕೆಂದಿದ್ದೇನೆ. ನನ್ನ ಸಂಬಳ ಹಾಗೂ ಬಡ್ಡಿ ಸೇರಿಸಿದರೆ ವಾರ್ಷಿಕ ಆದಾಯ ₹ 2.50 ಲಕ್ಷದೊಳಗಿರುತ್ತದೆ. ತೆರಿಗೆ ಕಟ್ಟಬೇಕೇ, ರಿಟರ್ನ್ ಫೈಲ್ ಮಾಡಬೇಕೇ. ಬ್ಯಾಂಕಿನಲ್ಲಿ ₹ 10,000ಕ್ಕೂ ಮಿಕ್ಕಿದ ಬಡ್ಡಿಗೆ ಟಿಡಿಎಸ್ ಮಾಡುತ್ತಾರಂತೆ. ಪರಿಹಾರ ಏನು?

ಉತ್ತರ: ನಿಮ್ಮ ವಾರ್ಷಿಕ ಸಂಬಳ ಹಾಗೂ ಠೇವಣಿ ಮೇಲಿನ ಬಡ್ಡಿ ₹ 2.50 ಲಕ್ಷದೊಳಗಿರುವಲ್ಲಿ ನಿಮಗೆ ತೆರಿಗೆ ಬರುವುದಿಲ್ಲ ಹಾಗೂ ರಿಟರ್ನ್ ತುಂಬುವ ಅವಶ್ಯಕತೆಯೂ ಇಲ್ಲ.

ADVERTISEMENT

ನೀವು ಪ್ರತೀ ಏಪ್ರಿಲ್‌ನಲ್ಲಿ 15ಜಿ ನಮೂನೆ ಫಾರಂ ಬ್ಯಾಂಕಿಗೆ ಸಲ್ಲಿಸಿದರೆ, ವಾರ್ಷಿಕ ಬಡ್ಡಿ ₹ 10,000 ದಾಟಿದರೂ, ಟಿಡಿಎಸ್ ಮಾಡುವುದಿಲ್ಲ. 15ಜಿ ಕೊಡದಿರುವಲ್ಲಿ ಸೆಕ್ಷನ್ 194ಎ ಆಧಾರದ ಮೇಲೆ ಬಂದಿರುವ ಬಡ್ಡಿಯಲ್ಲಿ ಶೇ 10 ಟಿಡಿಎಸ್ ಮಾಡಿ ಬ್ಯಾಂಕಿನವರು ಆದಾಯ ತೆರಿಗೆ ಇಲಾಖೆಗೆ ರವಾನಿಸಬೇಕಾಗುತ್ತದೆ.

ನಾರಾಯಣ, ಸಿರ್ಸಿ
ನಾನು ನಿವೃತ್ತ ಕೇಂದ್ರ ಸರ್ಕಾರಿ ನೌಕರ. ಸ್ವಂತ ಮನೆ ಇಲ್ಲ. ಬಾಡಿಗೆ ಮನೆಯಲ್ಲಿ ವಾಸ. ನಿವೃತ್ತಿಯಿಂದ ₹ 25 ಲಕ್ಷ ಬಂದಿದೆ. ಇಬ್ಬರು ಮಕ್ಕಳು. ಮಗ ಡಿಪ್ಲೊಮೊ ಹಾಗೂ ಮಗಳು ಬಿ.ಎಡ್. ಮುಂದೆ ಮನೆ ಕಟ್ಟಲು ಹಾಗೂ ಮಗಳ ಮದುವೆ ಸಲುವಾಗಿ ಬಂದಿರುವ ಹಣದ ನಿರ್ವಹಣೆ ವಿಚಾರದಲ್ಲಿ ನೀವು ನನಗೆ ಸಲಹೆ ನೀಡಬೇಕಾಗಿ ವಿನಂತಿ. ನನ್ನ ಹೆಂಡತಿ ಕಡೆಯಿಂದ ಸ್ವಲ್ಪ ಜಾಗ ಬಂದಿದೆ.

ಉತ್ತರ: ನೀವು ಕೇಂದ್ರ ಸರ್ಕಾರದ ನಿವೃತ್ತ ನೌಕರರಾದ್ದರಿಂದ ನಿಮಗೆ ಪಿಂಚಣಿ ಬರುತ್ತದೆ. ಈ ಹಣದಿಂದ ನಿಮಗೆ ಇರುವ ಜಾಗದಲ್ಲಿ ಒಂದು ಸಣ್ಣ ಮನೆಯನ್ನು ಗರಿಷ್ಠ ₹ 10 ಲಕ್ಷದೊಳಗೆ ಕಟ್ಟಿಕೊಳ್ಳಿ. ಉಳಿದ ₹ 15 ಲಕ್ಷದಲ್ಲಿ ಮಗಳ ಮದುವೆ ಸಲುವಾಗಿ ಗರಿಷ್ಠ ₹ 3 ಲಕ್ಷ ತೆಗೆದಿಡಿ. ಇನ್ನುಳಿದ ₹ 12 ಲಕ್ಷ ಅಂಚೆ ಕಚೇರಿ ಸೀನಿಯರ್ ಸಿಟಿಜನ್ ಠೇವಣಿಯಲ್ಲಿ ಇರಿಸಿರಿ. ಈ ಠೇವಣಿ ನಿಮ್ಮ ಹಾಗೂ ನಿಮ್ಮ ಹೆಂಡತಿ ಹೆಸರಿನಲ್ಲಿ ಜಂಟಿಯಾಗಿ ಇರಿಸಿರಿ ಹಾಗೂ ಮಗನಿಗೆ ನಾಮ ನಿರ್ದೇಶನ ಮಾಡಿರಿ.

ಲಕ್ಷ್ಮೀ, ಊರು ಬೇಡ
ನಾನು ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ವಿ.ಆರ್.ಎಸ್. ತೆಗೆದುಕೊಂಡಿದ್ದೇನೆ. ನನ್ನ ವಿ.ಆರ್.ಎಸ್. ಹಾಗೂ ಆರ್.ಡಿ. ಮುಕ್ತಾಯದಿಂದ ₹ 20 ಲಕ್ಷ ಹಣ ಬರಲಿಕ್ಕಿದೆ. ನನ್ನ ಯಜಮಾನರ ಮರಣದಿಂದಾಗಿ ಫ್ಯಾಮಿಲಿ ಪೆನ್ಷನ್  ₹ 6,000 ಬರುತ್ತದೆ. ಈ ಹಣ ಎಲ್ಲಿ ಯಾವ ಬ್ಯಾಂಕ್‌ನಲ್ಲಿ ಇರಿಸಲಿ. ನನಗೆ ಬೇರೆ ಯಾರೂ ಇಲ್ಲ. ಠೇವಣಿಯನ್ನು ನನ್ನ ಸಹೋದರರ ಮೂವರು ಗಂಡು ಮಕ್ಕಳ ಹೆಸರಿನಲ್ಲಿ ನಾಮನಿರ್ದೇಶನ ಮಾಡ ಬೇಕೆಂದಿದ್ದೇನೆ.

ಉತ್ತರ: ನಿಮ್ಮ ಹಾಗೂ ನಿಮ್ಮ ಪತಿಯ ಫ್ಯಾಮಿಲಿ ಪೆನ್ಷನ್ ನಿಂದಾಗಿ ನಿಮ್ಮ ಜೀವನ ಸುಖವಾಗಿ ಸಾಗಬಹುದು. ನಿಮಗೆ ಬರಲಿರುವ ₹ 20 ಲಕ್ಷ ವಿಂಗಡಿಸಿ, 3 ಠೇವಣಿ, ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ಮಾಡಿ, ನೀವು ಬಯಸುವ ನಿಮ್ಮ ಅಣ್ಣನ ಮಕ್ಕಳ ಹೆಸರಿನಲ್ಲಿ ನಾಮನಿರ್ದೇಶನ ಮಾಡಿರಿ. ಬ್ಯಾಂಕ್ ಅಥವಾ ಅಂಚೆಕಚೇರಿ ಠೇವಣಿ ಹೊರತುಪಡಿಸಿ ಬೇರಾವ ಹೂಡಿಕೆ ಮಾಡದಿರಿ. ಹೆಚ್ಚಿನ ವರಮಾನ, ಕಮಿಷನ್, ಉಡುಗೊರೆ ಆಮಿಷಕ್ಕೆ ಬಲಿಯಾಗಿ ಅಭದ್ರವಾದ ಅಥವಾ ಊಹಾಪೋಹಗಳಿಂದ ಕೂಡಿದ ಹೂಡಿಕೆ ಮಾಡಿ ಅಸಲನ್ನೇ ಕಳೆದು ಕೊಳ್ಳಬೇಡಿ.  ಈ ಹಣ ಸುರಕ್ಷಿತವಾಗಿ ಇರಿಸಿ, ಜೀವನದ ಅಂತ್ಯದವರೆಗೂ ಬರುವ ವರಮಾನ ಪಡೆದು ಸುಖವಾಗಿ ಬಾಳಿರಿ.

ಕೆ.ಆರ್. ಕುಮಾರಸ್ವಾಮಿ, ಕನಕಪುರ
ನನ್ನ ವಯಸ್ಸು 72. ನನ್ನ ತಂದೆಯ ಉಯಿಲಿನ ಪ್ರಕಾರ ನನಗೆ 15 ನಿವೇಶನಗಳು ಬಂದಿವೆ. 5 ನಿವೇಶನಗಳನ್ನು ನಾನು ನನ್ನ ಹೆಣ್ಣು ಮಕ್ಕಳಿಗೆ ದಾನವಾಗಿ ಕೊಟ್ಟಿದ್ದೇನೆ.  6 ನಿವೇಶನ ಮಾರಾಟ ಮಾಡಿದ್ದೇನೆ. ಈ ಹಣದಿಂದ ಹೆಣ್ಣು ಮಕ್ಕಳ ಮದುವೆ ಮಾಡಿದ್ದೇನೆ. ಉಳಿದ 4 ನಿವೇಶನ ಮಾರಾಟ ಮಾಡಿ ಬ್ಯಾಂಕಿಗೆ ಹಾಕಬೇಕೆಂದಿದ್ದೇನೆ. ಎಲ್ಲಾ ನಿವೇಶನ ಭೂಪರಿವರ್ತನೆಯಾಗಿದೆ. ಎಲ್.ಐ.ಸಿ.ಯಿಂದ ₹ 1,62,500 ಬಂದಿದೆ. ಇದನ್ನು ಬ್ಯಾಂಕಿಗೆ ಹಾಕಿರುತ್ತೇನೆ. ಈ ಹಣ ನನಗೂ ನನ್ನ ಪತ್ನಿಯ ಜೀವನಕ್ಕೆ ಬೇಕಾಗಿದೆ. ನನಗೆ ತೆರಿಗೆ ಬರುತ್ತದೆಯೇ? 

ಉತ್ತರ: ನೀವು ನಿಮ್ಮ ತಂದೆಯವರಿಂದ ಬಂದಿರುವ ಭೂಪರಿವರ್ತನೆಯಾಗಿರುವ 15 ನಿವೇಶನಗಳಲ್ಲಿ 5 ನಿವೇಶನ ನಿಮ್ಮ ಹೆಣ್ಣು ಮಕ್ಕಳಿಗೆ ದಾನವಾಗಿ ಕೊಟ್ಟಿರುವುದಕ್ಕೆ ನಿಮಗಾಗಲೀ ನಿಮ್ಮ ಹೆಣ್ಣು ಮಕ್ಕಳಿಗಾಗಲೀ ಕ್ಯಾಪಿಟಲ್ ಗೇನ್‌ ಟ್ಯಾಕ್ಸ್ ಬರುವುದಿಲ್ಲ. ನಿವೇಶನ ದಾನಪತ್ರದ ಮುಖಾಂತರ, ಸಬ್‌ರಿಜಿಸ್ಟಾರ್ ಕಚೇರಿಯಲ್ಲಿ ನೋಂದಾಯಿಸಿರಬೇಕೆಂದು ಭಾವಿಸುತ್ತೇನೆ. ಇನ್ನು 6 ನಿವೇಶನ ಮಾರಾಟ ಮಾಡಿ ಹೆಣ್ಣು ಮಕ್ಕಳ ಮದುವೆ ಮಾಡಿದರೂ ಭೂಪರಿವರ್ತನೆಯಾದ ಸ್ಥಳವಾದ್ದರಿಂದ ಶೇ 20ರಷ್ಟು ಕ್ಯಾಪಿಟಲ್ ಗೇನ್ ಟ್ಯಾಕ್ಸ್ ಬರುತ್ತದೆ. ಉಳಿದ 4 ನಿವೇಶನ ಮಾರಾಟ ಮಾಡಿ ಬರುವ ಹಣಕ್ಕೂ ಶೇ 20 ರಷ್ಟು ಕ್ಯಾಪಿಟಲ್‌ ಗೇನ್ ಟ್ಯಾಕ್ಸ್ ಬರುತ್ತದೆ. ತೆರಿಗೆ ಉಳಿಸಲು, ಬರುವ ಹಣದ ಗರಿಷ್ಠ ಮಿತಿ ₹ 50 ಲಕ್ಷ. National highway authority of India ಅಥವಾ Rural electrification corporation ನಲ್ಲಿ ಐದು ವರ್ಷಗಳ ಅವಧಿಗೆ ಇಡಬೇಕಾಗುತ್ತದೆ. ಉಳಿದ ನಾಲ್ಕು ನಿವೇಶನ ಮಾರಾಟ ಮಾಡಬೇಡಿ. ಮುಂದೆ ನಿಮಗೆ ಆಸ್ತಿ ಮಾಡಲು ಸಾಧ್ಯವಾಗಲಾರದು.

ಹರೀಶ್. ಎಚ್.ಎನ್., ಕುಂದೂರು, ಹೊನ್ನಾಳಿ
ನನಗೆ 2 ವರ್ಷದ ಹೆಣ್ಣು ಮಗಳಿದ್ದು ಅವಳ ಹೆಸರಿನಲ್ಲಿ ಪ್ರತೀ ತಿಂಗಳು ₹ 2,000 ಉಳಿತಾಯ ಯೋಜನೆಯಲ್ಲಿ ತೊಡಗಿಸಬೇಕೆಂದಿದ್ದೇನೆ. ಮದುವೆ, ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವ, ಆರ್ಥಿಕವಾಗಿ ಲಾಭವಾಗುವ ಸಲಹೆ ಇದೆಯೇ? 

ಉತ್ತರ: ನಿಮ್ಮ ಚಿಕ್ಕ ಮಗುವಿಗೆ ಭಾರತ ಸರ್ಕಾರ ಪ್ರಾಯೋಜಿಸಿದ ‘ಸುಕನ್ಯಾ ಸಮೃದ್ಧಿ ಯೋಜನೆ’ ಹೇಳಿ ಮಾಡಿಸಿದಂತಿದೆ. ಖಾತೆ ಪ್ರಾರಂಭಿಸಿದ 14 ವರ್ಷಗಳ ತನಕ ಹಣ ಜಮಾ ಮಾಡಬಹುದು. ವಾರ್ಷಿಕ ಕನಿಷ್ಠ ₹ 100, ಗರಿಷ್ಠ

₹ 1.50 ಲಕ್ಷ ತುಂಬಬಹುದು. ಠೇವಣಿ ಮೊತ್ತದ ಶೇ 50ನ್ನು ಮಗಳಿಗೆ 18 ವರ್ಷ ತುಂಬಿದಾಗ ಮದುವೆ ಅಥವಾ ವಿದ್ಯಾಭ್ಯಾಸಕ್ಕೆ ಹಿಂಪಡೆಯಬಹುದು. ಖಾತೆಯ ಪೂರ್ಣಾವಧಿಯು ಖಾತೆ ಪ್ರಾರಂಭಗೊಂಡ ದಿನದಿಂದ 21 ವರ್ಷಗಳೊಳಗಿರುತ್ತದೆ. ನಿಮ್ಮ ಚಿಕ್ಕ ಕಂದನಿಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಸಿದ್ದೇಶ್, ಚಿತ್ರದುರ್ಗ
ನನ್ನ ವಯಸ್ಸು 27. ಅವಿವಾಹಿತ. ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ. ಒಟ್ಟು ವೇತನ ₹ 35,861. ಕಡಿತ ಕೆ.ಜಿ.ಐ.ಡಿ. ₹ 2200, ಎನ್.ಪಿ.ಎಸ್. ₹ 3352. ಕಡಿತದ ನಂತರ ಕೈಗೆ ಬರುವ ಮೊತ್ತ ₹ 29,929. ಕೆಲಸಕ್ಕೆ ಸೇರಿದ 15 ತಿಂಗಳಿಂದ ₹ 2.50 ಲಕ್ಷ ಉಳಿತಾಯ ಮಾಡಿದ್ದೇವೆ. ಈ ಹಣ ಎಲ್ಲಿ  ಹೇಗೆ ತೊಡಗಿಸಲಿ. ನನ್ನ ಮಾಸಿಕ ವೇತನದಲ್ಲಿ ₹ 20,000 ನನ್ನ ಖರ್ಚಿಗೆ ಉಳಿಸಿಕೊಂಡಲ್ಲಿ ಉಳಿದ ₹ 9,929 ಯಾವುದರಲ್ಲಿ ವಿನಿಯೋಗಿಸಲಿ. ತೆರಿಗೆ ಉಳಿಸಲು ಹಾಗೂ 3–4 ವರ್ಷಗಳಲ್ಲಿ ಸ್ಥಳ ಖರೀದಿಸಲು ನೆರವಾಗಲು ಸಲಹೆ ನೀಡಿ. 

ಉತ್ತರ: ಕೆ.ಜಿ.ಐ.ಡಿ. ಹಾಗೂ ಎನ್.ಪಿ.ಎಸ್. ನಿಂದ ₹ 5,552 ಕಳೆದು ₹ 29,929 (ಸಮೀಪದಲ್ಲಿ ₹ 30,000) ನಿಮ್ಮ ಕೈಸೇರುತ್ತದೆ. ನೀವು ಅವಿವಾಹಿತರಾಗಿರುವುದರಿಂದ ನಿಮ್ಮ ತಿಂಗಳ ಖರ್ಚಿಗೆ ಗರಿಷ್ಠ ₹ 15,000 ಮಾತ್ರ ಇರಿಸಿ, ಉಳಿದ ₹ 15,000 ಈ ಕೆಳಗಿನಂತೆ ಪ್ರತೀ ತಿಂಗಳು ಉಳಿಸಲು ಪ್ರಾರಂಭಿಸಿರಿ.

₹ 5,000 ಪಿಪಿಎಫ್, ₹ 2000 ಎಲ್.ಐ.ಸಿ., ಜೀವನ ಆನಂದ ಪಾಲಿಸಿ ಹಾಗೂ ₹ 8000 ಆರ್.ಡಿ. 3 ವರ್ಷಗಳ ಅವಧಿಗೆ. ಪಿಪಿಎಫ್ ಹಾಗೂ ಎಲ್.ಐ.ಸಿ. ತೆರಿಗೆ ಉಳಿಸಲು ಅನುಕೂಲವಾಗುತ್ತದೆ. ಜೊತೆಗೆ ಉತ್ತಮ ಹೂಡಿಕೆ ಕೂಡಾ. ನೀವು ಮೂರು ವರ್ಷಗಳಲ್ಲಿ ವಿವಾಹಿತರಾಗುತ್ತೀರಿ, ಇದಕ್ಕಾಗಿ ₹ 8,000 ಆರ್.ಡಿ. ಮುಡುಪಾಗಿಡಿ. ಮದುವೆ ನಂತರ, ನಿಮ್ಮ ಮುಂದಿನ ಆರ್ಥಿಕ ಪರಿಸರ ಗಮನಿಸಿ ಸ್ವಲ್ಪ ಸಾಲ ಮಾಡಿ, 30X40 ಅಳತೆಯ ನಿವೇಶನ ಕೊಂಡುಕೊಳ್ಳಿ. ನಿಮಗೆ ಶುಭವಾಗಲಿ.

ಸ್ವಾಮಿ, ಚಿತ್ರದುರ್ಗ
ನಾನು ಡಿ ಗ್ರೂಫ್ ಹುದ್ದೆಗೆ ಅಯ್ಕೆಯಾಗಿದ್ದೇನೆ. ನನ್ನ ಮೂಲ ಸಂಬಳ ₹ 6100–14900. ಕುಟುಂಬಕ್ಕೆ ಸಹಾಯ ಹಾಗೂ ನನ್ನ ಭವಿಷ್ಯಕ್ಕೆ ಸಲಹೆ ಮಾಡಿ

ಉತ್ತರ: ನಿಮ್ಮ ಮೂಲ ವೇತನ ಹಾಗೂ ತುಟ್ಟಿಭತ್ಯೆ ಸೇರಿಸಿ ₹ 10,000ದ ವರೆಗೆ ತಿಂಗಳ ಸಂಬಳ ಬರುವ ನಿರೀಕ್ಷೆ ಇದೆ. ಇದೇ ವೇಳೆ ವೇತನ ಪರಿಷ್ಕರಣೆ ನಡೆಯುತ್ತಿದ್ದು, ಹೆಚ್ಚಿನ ಸಂಬಳ ಪಡೆಯಲಿದ್ದೀರಿ. ಕೆಲಸಕ್ಕೆ ಸೇರುವಾಗಲೇ ಉಳಿತಾಯದ ಗೀಳು ಇರುವಲ್ಲಿ, ಹಣ ಉಳಿಸುವುದು ಜೀವನದಲ್ಲಿ ಎಂದಿಗೂ ಸಮಸ್ಯೆಯಾಗಲಾರದು. ನಿಮ್ಮ ಕುಟುಂಬ ಅಂದರೆ ಹೆತ್ತವರಿಗೆ ತಿಂಗಳಿಗೆ ಕನಿಷ್ಠ ₹ 2000 ಕೊಟ್ಟು ಉಳಿಯುವ ಹಣದಲ್ಲಿ ಕೆ.ಜಿ.ಐ.ಡಿ. ಅಥವಾ ಎಲ್.ಐ.ಸಿ.ಯಲ್ಲಿ ತಿಂಗಳಿಗೆ ₹ 2000 ತುಂಬಿರಿ. ನಿಮ್ಮ ಖರ್ಚಿಗೆ ₹ 5000–7000 ಇಟ್ಟುಕೊಂಡು (ಸಂಬಳ ಪರಿಷ್ಕರಣೆ ನಂತರ) ಉಳಿಯುವ ಹಣವನ್ನು 10 ವರ್ಷಗಳ ಆರ್.ಡಿ. ಮಾಡಿರಿ. ಹೀಗೆ ಬರುವ ಸಂಬಳದಲ್ಲಿ ಪ್ರಾರಂಭದಿಂದಲೇ ಉಳಿತಾಯ ಮಾಡುತ್ತಾ ಬಂದಲ್ಲಿ ಮುಂದೆ ನೀವು ನಿವೇಶನ– ಮನೆ ಮಾಡಲು ಅನುಕೂಲವಾಗುತ್ತದೆ.

ಹೆಸರು ಬೇಡ, ತುಮಕೂರು
ನನ್ನ ತಂದೆಯವರ ನಿಧನದಿಂದಾಗಿ ವಿಮೆ ₹ 5 ಲಕ್ಷ ಬಂದಿದ್ದು, ಇನ್ನೂ ₹ 5 ಲಕ್ಷ ಡಿ.ಸಿ.ಆರ್.ಜಿ. ಮುಖಾಂತರ  ಬರುವುದಿದೆ. ಎಲ್ಲಿ ಹೂಡಲಿ ಹಾಗೂ ತೆರಿಗೆ ಮುಕ್ತ ಹೂಡಿಕೆ ಹೇಗೆ?

ಉತ್ತರ: ನಿಮ್ಮ ತಂದೆಯವರ ನಿಧನದಿಂದಾಗಿ ಬಂದಿರುವ ₹ 5 ಲಕ್ಷ ಹಾಗೂ ಬರಲಿರುವ ₹ 5 ಲಕ್ಷ (ಒಟ್ಟಿನಲ್ಲಿ ₹ 10 ಲಕ್ಷ) ನಿಮ್ಮ ತಾಯಿ ಹಾಗೂ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಠೇವಣಿ ಮಾಡಿರಿ. ಭದ್ರತೆ, ದ್ರವ್ಯತೆ ಹಾಗೂ ನಿಶ್ಚಿತ ವರಮಾನದ ದೃಷ್ಟಿಯಿಂದ ಈ ಹೂಡಿಕೆಗೆ ಮಿಗಿಲಾದ ಹೂಡಿಕೆ ಬೇರೊಂದಿಲ್ಲ. ಹೀಗೆ ಹಣ ವಿಂಗಡಿಸಿ ಇಡುವುದರಿಂದಲೂ, ಇದೊಂದು ದೊಡ್ಡ ಮೊತ್ತವಲ್ಲವಾದ್ದರಿಂದಲೂ, ತೆರಿಗೆ ಬರುವುದಿಲ್ಲ. ಹೆಚ್ಚಿನ ಬಡ್ಡಿ ಆಮಿಷಕ್ಕೆ ಒಳಗಾಗಿ ಬಂದಿರುವ ಮೊತ್ತ ಬೇರೆ ಕಡೆ ವಿನಿಯೋಗಿಸಬೇಡಿ. ಅಸಲು ಕಳೆದು ಕೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.