ADVERTISEMENT

ಬಡ್ಡಿರಹಿತ ಶಿಕ್ಷಣ ಸಾಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಬಡ ಕುಟುಂಬದಲ್ಲಿ ಜನಿಸಿದ ಪ್ರತಿಭಾವಂತ ಮಕ್ಕಳು, ಉನ್ನತ ವ್ಯಾಸಂಗದಿಂದ ವಂಚಿತರಾಗಿರುತ್ತಾರೆ. ಇದನ್ನು ಮನಗಂಡ ಕೇಂದ್ರ ಸರಕಾರ `ಮಾದರಿ ಶಿಕ್ಷಣ ಸಾಲ~ ಯೋಜನೆ ಜಾರಿಗೆ ತಂದಿದೆ.

ಪ್ರಧಾನಿ ಡಾ. ಮನಮೋಹನ್‌ಸಿಂಗ್ ಅಧ್ಯಕ್ಷತೆಯಲ್ಲಿ 2009ರಲ್ಲಿ ನಡೆದಿದ್ದ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯಲ್ಲಿ, `ಮಾದರಿ ಶಿಕ್ಷಣ ಸಾಲ~ದ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯ ವಿಶೇಷತೆ  ಏನೆಂದರೆ ಇದೊಂದು `ಬಡ್ಡಿರಹಿತ ಶಿಕ್ಷಣ ಸಾಲ~ವಾಗಿದೆ.

* ಏನಿದು ಬಡ್ಡಿರಹಿತ ಶಿಕ್ಷಣ ಸಾಲ?
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಉನ್ನತ ಶಿಕ್ಷಣ ಇಲಾಖೆ, ಕೇಂದ್ರ ಸರಕಾರ ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷ 2009-2010ರಿಂದ, ಅಂದರೆ 1.4.2009 ಹಾಗೂ ನಂತರ ಪಡೆದ     `ಮಾದರಿ ಶಿಕ್ಷಣ ಸಾಲ~ದ ಮೊತ್ತಕ್ಕೆ ಶಿಕ್ಷಣ ಪಡೆಯುವ ಅವಧಿಗೆ (moratorium period)  ಬಡ್ಡಿ ಪಾವತಿಸುವ ಅವಶ್ಯಕತೆ ಇರುವುದಿಲ್ಲ.

* ಈ ಸಾಲ, ಯಾವ ಶಿಕ್ಷಣ ಕೋರ್ಸುಗಳಿಗೆ ದೊರೆಯುತ್ತದೆ?
ತಾಂತ್ರಿಕ ಹಾಗೂ ವೃತ್ತಿಪರ(technical   professional cource)ಕೋರ್ಸುಗಳಿಗೆ ಪಡೆಯಬಹುದಾಗಿದೆ. ವಿದ್ಯಾರ್ಥಿ 12ನೇ ತರಗತಿ ನಂತರ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐ), ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸ್ವಾಮ್ಯದ ಶಿಕ್ಷಣ ಸಂಸ್ಥೆಗಳು ನಡೆಸುವ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಪಡೆಯುವಲ್ಲಿ ಇಂತಹ ಕೋರ್ಸ್ ಅಧ್ಯಯನ ನಡೆಸುವ ವಿದ್ಯಾರ್ಥಿಗಳು `ಮಾದರಿ ಶಿಕ್ಷಣ ಸಾಲ~ ಪಡೆಯಬಹುದಾಗಿದೆ. ಈ ಬಡ್ಡಿರಹಿತ ಸಾಲ, ವಿದೇಶದಲ್ಲಿ ಓದುವ ಕೋರ್ಸುಗಳಿಗೆ ಅನ್ವಯಿಸುವುದಿಲ್ಲ.

*ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಾರ್ಷಿಕ ಆದಾಯ ಎಷ್ಟರ ತನಕ ಇರಬಹುದು. ಈ ಸಾಲ ಪಡೆಯಲು ಜಾತಿ, ಪಂಗಡ, ಗ್ರಾಮೀಣ ಪ್ರದೇಶದವರು, ಹೀಗೆ ಏನಾದರೂ ಮೀಸಲಾತಿಗಳಿವೆಯೇ?

ಆರ್ಥಿಕವಾಗಿ ಹಿಂದುಳಿದ ಕುಟುಂಬದ ಒಟ್ಟು ವಾರ್ಷಿಕ ಆದಾಯ(gross income)4.50 ಲಕ್ಷ ಅಥವಾ ಅದರೊಳಗಿರಬೇಕು. ಈ ಸಾಲ ಪಡೆಯಲು, ಜಾತಿ, ಪಂಗಡ, ಗ್ರಾಮೀಣ ಪ್ರದೇಶದಲ್ಲಿ ಜನಿಸೊರಬೇಕು ಎನ್ನುವ ಯಾವ ನಿಬಂಧನೆ ಇರುವುದಿಲ್ಲ.

*ಮಾದರಿ ಶಿಕ್ಷಣ ಸಾಲದ ಗರಿಷ್ಠ ಮಿತಿ ಎಷ್ಟು ಹಾಗೂ ಒಬ್ಬ ವಿದ್ಯಾರ್ಥಿ ಎಷ್ಟು ಸಲ ಇಂತಹ ಸಾಲ ಪಡೆಯಬಹುದು?

ಮಾದರಿ ಶಿಕ್ಷಣ ಸಾಲದ ಗರಿಷ್ಠ ಮಿತಿ ರೂ 10 ಲಕ್ಷ ಮಾತ್ರ. ಒಬ್ಬ ವಿದ್ಯಾರ್ಥಿ, ಜೀವನದಲ್ಲಿ ಒಮ್ಮೆ ಮಾತ್ರ ಪಡೆಯಬಹುದು. ಇದೇ ವೇಳೆ ವಿದ್ಯಾರ್ಥಿ ಮಧ್ಯದಲ್ಲಿಯೇ ಶಿಕ್ಷಣ ತೊರೆದರೆ ಅಥವಾ ದುರ್ನಡತೆಯಿಂದ ಕಾಲೇಜಿನಿಂದ ಹೊರಗೆ ಹಾಕಿದರೆ, ಪಡೆದ ಸಾಲಕ್ಕೆ ಬಡ್ಡಿ ತೆರಬೇಕಾಗುತ್ತದೆ. ಅನಾರೋಗ್ಯದಿಂದ ಕೋರ್ಸು ಮುಂದುವರಿಸಲಾಗದಿದ್ದರೆ, ಸರಕಾರಿ ವೈದ್ಯರಿಂದ ಸರ್ಟಿಫಿಕೇಟು ಪಡೆದು, ಬಡ್ಡಿರಹಿತ ಸಾಲ ಪಡೆಯಬಹುದು.

* ಬಡ್ಡಿರಹಿತ ಸಾಲ ಯಾವಾಗ ಮರುಪಾವತಿ ಮಾಡಬೇಕು?
ಬಡ್ಡಿರಹಿತ ಸಾಲ, ತಾಂತ್ರಿಕ ಅಥವಾ ವೃತ್ತಿಪರ ಶಿಕ್ಷಣದ ಅವಧಿ ಜತೆಗೆ ಹೆಚ್ಚುವರಿಯಾಗಿ ಒಂದು ವರ್ಷ, ಅಥವಾ ಶಿಕ್ಷಣದ ಅವಧಿ ಮುಗಿದು ಕೆಲಸಕ್ಕೆ ಸೇರಿ ಅಥವಾ ಸ್ವಂತ ಉದ್ಯೋಗ ಪ್ರಾರಂಭಿಸಿ ಆರು ತಿಂಗಳೊಳಗೆ

(ಇವುಗಳಲ್ಲಿ ಯಾವುದು ಮೊದಲೋ ಅದನ್ನು ಆರಿಸಿಕೊಳ್ಳಬೇಕು) ಸಾಲ ಮರುಪಾವತಿಸಲು ಪ್ರಾರಂಭಿಸಬೇಕು. ಸಾಲ ಮರುಪಾವತಿಸಲು ಗರಿಷ್ಠ ಏಳು ವರ್ಷಗಳ ಅವಧಿ ಇರುತ್ತದೆ. ಮಾಸಿಕ ಕಂತುಗಳಿಂದ ಸಾಲ ಮರುಪಾವತಿ ಮಾಡಬೇಕು.

* ಬಡ್ಡಿರಹಿತ ಸಾಲವು ಅಧ್ಯಯನ ಮುಗಿದು, ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿದ ಆರು ತಿಂಗಳೊಳಗೆ ಮಾತ್ರ ಸೀಮಿತವೇ ಅಥವಾ ಮುಂದೆಯೂ ದೊರೆಯುತ್ತದೆಯೇ?
ಸಾಲಗಾರನು ಸಾಲ ಮರುಪಾವತಿ ಮುಂದೂಡಲು ಕಾನೂನಿನ ಮೇರೆಗೆ ಕೊಟ್ಟ ಅವಧಿ (period of moratorium)ಮೇಲೆ ವಿವರಿಸಲಾಗಿದೆ. ಆ ಅವಧಿ ತನಕ ಮಾತ್ರ ಶಿಕ್ಷಣ ಸಾಲಕ್ಕೆ ಬಡ್ಡಿ ಇರುವುದಿಲ್ಲ.

ಈ ಅವಧಿ ಮುಗಿದ ತಾರೀಕಿನಿಂದ ಬಡ್ಡಿ ತೆರಬೇಕಾಗುತ್ತದೆ. ಶಿಕ್ಷಣ ಸಾಲದ ಮೊತ್ತ ಹಾಗೂ ಸಾಲ ಪಡೆದ ವ್ಯಕ್ತಿ ಮರುಪಾವತಿಸಲು ಕೇಳುವ ವರ್ಷಗಳು, ಇವುಗಳನ್ನು ಅವಲಂಬಿಸಿ, ಕಂತು ಬಡ್ಡಿ ಸೇರಿಸಿ, ಪ್ರತಿ ತಿಂಗಳು ಸಾಲಕ್ಕೆ ಹಣ ತುಂಬುತ್ತಾ ಬರಬೇಕು. 

* ಬಡ್ಡಿ ರಹಿತ ಶಿಕ್ಷಣ ಸಾಲ ಎಲ್ಲಿ ಪಡೆಯಬಹುದು?
ಭಾರತೀಯ ಬ್ಯಾಂಕುಗಳ ಒಕ್ಕೂಟ (ಐ.ಬಿ.ಎ.) ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್, ಬಡ್ಡಿ ರಹಿತ ಮಾದರಿ ಶಿಕ್ಷಣ ಸಾಲದ ನೀತಿಯನ್ನು ತಯಾರಿಸಿ, ರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುವ ಎಲ್ಲಾ ಶಡ್ಯೂಲ್ಡ್ ಬ್ಯಾಂಕುಗಳಿಗೆ ಸುತ್ತೋಲೆಯ ಮುಖಾಂತರ, ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ, ಬಡ್ಡಿ ರಹಿತ ಸಾಲ ನೀಡುವಂತೆ ನಿರ್ದೇಶನ ನೀಡಿವೆ.

*ಬಡ್ಡಿ ರಹಿತ ಶಿಕ್ಷಣ ಸಾಲ ವಿತರಿಸುವ ಬ್ಯಾಂಕುಗಳಿಗೆ ಯಾರು ಶಿಕ್ಷಣ ಸಾಲದ ಬಡ್ಡಿ ತುಂಬಿಕೊಡುತ್ತಾರೆ ?

ಇದೊಂದು, ಕೇಂದ್ರ ಸರ್ಕಾರದ ಬಡ್ಡಿ ರಿಯಾಯ್ತಿ (interest subsidy)ಯೋಜನೆಯಾಗಿದೆ. ಬ್ಯಾಂಕುಗಳ ಮುಖ್ಯ ಆದಾಯವೇ `ಬಡ್ಡಿ~ ಯಾಗಿದ್ದು, ಬಡ್ಡಿರಹಿತಸಾಲ, ಗರಿಷ್ಠ  ರೂ 10 ಲಕ್ಷಗಳತನಕ ಹೇಗೆ ಕೊಡಲು ಸಾಧ್ಯ ಎನ್ನುವುದು ಜನಸಾಮಾನ್ಯರ ಪ್ರಶ್ನೆ.

ಈ ಹಿಂದೆ ವಿವರಿಸಿದಂತೆ, ಆರ್ಥಿಕವಾಗಿ ಹಿಂದುಳಿದ ಕುಟುಂಬದಲ್ಲಿ ಜನಿಸಿದ ಪ್ರತಿಭಾವಂತ ಮಕ್ಕಳು, ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಸುಲಭ್ಯವಾಗಿ ಪಡೆಯಲು, ಭಾರತ ಸರ್ಕಾರ ತಂದಿರುವ ಬಡ್ಡಿ ಸಬ್ಸಿಡಿ ಯೋಜನೆ ಇದಾಗಿರುತ್ತದೆ.

ರಾಷ್ಟ್ರೀಕೃತ ಬ್ಯಾಂಕ್ ಕೆನರಾ ಬ್ಯಾಂಕ್ `ನೋಡಲ್ ಬ್ಯಾಂಕ್~ ಆಗಿ ನಾಮ ನಿರ್ದೇಶನ ಮಾಡಿ, ಈ ಬ್ಯಾಂಕಿನ ಮುಖಾಂತರ ಶಿಕ್ಷಣ ಸಾಲ ವಿತರಿಸಿದ ಎಲ್ಲಾ ಬ್ಯಾಂಕುಗಳು ಸಾಲದ ಬಡ್ಡಿಯನ್ನು ಕಾಲಕಾಲಕ್ಕೆ ಪಡೆಯುತ್ತಿರುತ್ತವೆ.  ಕೇಂದ್ರ ಸರ್ಕಾರ ಕೆನರಾ ಬ್ಯಾಂಕಿಗೆ ಈ ಹಣ ಒದಗಿಸುತ್ತದೆ.


* ಶಿಕ್ಷಣ ಸಾಲದ ಬಡ್ಡಿರಹಿತ ಅವಧಿ ಮುಗಿದ ನಂತರ, ಸಾಲದ ಮೊತ್ತಕ್ಕೆ ಎಲ್ಲಾ ಬ್ಯಾಂಕುಗಳಲ್ಲಿ ಒಂದೇ ಬಡ್ಡಿದರ ವಿಧಿಸುತ್ತಾರೆಯೇ?
ಶಿಕ್ಷಣ ಸಾಲದ ಬಡ್ಡಿ ದರ ಎಲ್ಲ ಬ್ಯಾಂಕುಗಳಲ್ಲಿ ಒಂದೇ ತರಹ ಇರುವುದಿಲ್ಲ. ಆದರೆ, ಉಳಿದ ಸಾಲಗಳಿಗಿಂತ ತುಂಬಾ ಕಡಿಮೆ ಇರುತ್ತದೆ. ಶಿಕ್ಷಣ ಸಾಲ `ಆದ್ಯತಾ ರಂಗ~ದ ಒಳಗೆ ಬರುವುದರಿಂದ  ಬ್ಯಾಂಕುಗಳು ಅತಿ ಕಡಿಮೆ ಬಡ್ಡಿ ವಿಧಿಸುವ ಬಡ್ಡಿ ದರ ವಿಧಿಸುತ್ತವೆ.

* ಆದಾಯದ ದೃಢೀಕರಣ ಪತ್ರ ಯಾರಿಂದ ಪಡೆಯಬಹುದು?
ಈ ವಿಚಾರದಲ್ಲಿ ಕೇಂದ್ರ ಸರ್ಕಾರ ಮಾನವ ಸಂಪನ್ಮೂಲ ಸಚಿವಾಲಯ ಎಲ್ಲಾ ರಾಜ್ಯಗಳಿಗೂ ಸುತ್ತೋಲೆ ಕಳಿಸಿ   ಕುಟುಂಬದ ಸಾಮಾಜಿಕ ಹಿನ್ನೆಲೆ  ಲೆಕ್ಕಕ್ಕೆ ತೆಗೆದುಕೊಳ್ಳದೆ ಕೇವಲ ವಾರ್ಷಿಕ ಆದಾಯ  ಪರಿಗಣಿಸಿ, ಸರ್ಟಿಫಿಕೇಟು ವಿತರಿಸಲು ಆದೇಶಿಸಿದೆ.  ತಾಲ್ಲೂಕು ತಹಸೀಲ್ದಾರ್‌ರಿಂದ  ಆದಾಯ ಸರ್ಟಿಫಿಕೇಟ್ ಪಡೆಯಬಹುದು.

ಸಾಮಾಜಿಕ ಹಿನ್ನೆಲೆ ಇಲ್ಲದೆ, ಬರೇ ಆದಾಯವನ್ನು ಪರಿಗಣಿಸಿ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳು ಪಡೆಯುವ ಶಿಕ್ಷಣ ಹೊರತುಪಡಿಸಿ ಕೂಡಾ, ಬೇರೆ ಬೇರೆ ಪಂಗಡದ ಕುಟುಂಬಗಳಲ್ಲಿ ಜನಿಸಿದ ಮಕ್ಕಳು ಬಡ್ಡಿ ರಹಿತ ಶಿಕ್ಷಣ ಸಾಲ ಪಡೆಯಬಹುದಾಗಿದೆ.

ಶಿಕ್ಷಣ ಸಾಲ ದುರುಪಯೋಗ ಆಗಬಾರದು ಎನ್ನುವ ದೃಷ್ಟಿಯಿಂದ ಬ್ಯಾಂಕುಗಳು ಮಂಜೂರು ಮಾಡಿದ ಸಾಲದ ಹಣ ಅವಶ್ಯಕತೆಗನುಗುಣವಾಗಿ ಬಿಡುಗಡೆ   ಮಾಡಲಾಗುತ್ತದೆ. ಕಾಲೇಜು ಶುಲ್ಕ, ಪುಸ್ತಕ ಖರೀದಿ, ಉಪಕರಣ ಖರೀದಿ ಹಾಗೂ ಹಾಸ್ಟೆಲ್ ಬಿಲ್ ಮುಂತಾದವುಗಳನ್ನು ಭರಿಸಲು,   ನೇರವಾಗಿ ಹಣ ರವಾನಿಸಲಾಗುತ್ತದೆ. 

ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಇರದ ಬಡಕುಟುಂಬದಲ್ಲಿ ಜನಿಸಿದ ಪ್ರತಿಭಾವಂತ ಮಕ್ಕಳು ಇಂತಹ ವಿಶೇಷ ಸೌಲತ್ತಿನಿಂದ ವಂಚಿತರಾಗಿರುತ್ತಾರೆ. ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುವ ಬಹಳಷ್ಟು ಸಿಬ್ಬಂದಿ ವರ್ಗದವರಿಗೂ ಈ ವಿಚಾರದಲ್ಲಿ ಸರಿಯಾದ ಮಾಹಿತಿ ಇಲ್ಲದಿರುವುದು ಸೋಜಿಗ!
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.