ADVERTISEMENT

ಬಡ್ಡಿ ದರ ಕಡಿತ:ಆರ್‌ಬಿಐ ಸುಳಿವು

​ಪ್ರಜಾವಾಣಿ ವಾರ್ತೆ
Published 9 ಜನವರಿ 2013, 19:59 IST
Last Updated 9 ಜನವರಿ 2013, 19:59 IST
ಬಡ್ಡಿ ದರ ಕಡಿತ:ಆರ್‌ಬಿಐ ಸುಳಿವು
ಬಡ್ಡಿ ದರ ಕಡಿತ:ಆರ್‌ಬಿಐ ಸುಳಿವು   

ನವದೆಹಲಿ (ಪಿಟಿಐ): ಹಣದುಬ್ಬರ ಗರಿಷ್ಠ ಮಟ್ಟದಲ್ಲಿದ್ದರೂ ಸದ್ಯದ ಸಮಗ್ರ ಆರ್ಥಿಕ ಪರಿಸ್ಥಿತಿ ಗಮನಿಸಿ ಬಡ್ಡಿ ದರ ಕಡಿತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ.

ಇದೇ 29ರಂದು `ಆರ್‌ಬಿಐ' ಮೂರನೇ ತ್ರೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಪ್ರಕಟಿಸಲಿದೆ. ಸದ್ಯ ರೆಪೊ ದರ ಶೇ 8 ಮತ್ತು ಹಣದುಬ್ಬರ ಶೇ 7ರಷ್ಟಿದೆ. ಬಡ್ಡಿ ದರ ತಗ್ಗಿಸುವಷ್ಟು ಹಿತಕರ ಮಟ್ಟಕ್ಕೆ ಹಣದುಬ್ಬರ ಇನ್ನೂ ಇಳಿದಿಲ್ಲ. ಆದರೆ, ಬಡ್ಡಿ ದರ ಕಡಿತ ನಿರ್ಧಾರ ಸದ್ಯದ ಮೇಲ್ಮಟ್ಟದ ಆರ್ಥಿಕ ಪರಿಸ್ಥಿತಿ  ಯನ್ನು  ಅವಲಂಬಿ ಸಿರುತ್ತದೆ  ಎಂದು `ಆರ್ ಬಿಐ' ಡೆಪ್ಯುಟಿ ಗವರ್ನರ್ ಕೆ.ಸಿ.ಚಕ್ರವರ್ತಿ ಇಲ್ಲಿ ಸುದ್ದಿಗಾರರಿಗೆ ಹೇಳಿದರು.

ಹಣದುಬ್ಬರ ಹಿತಕರ ಮಟ್ಟ(ಶೇ 5)ಕ್ಕೆ ಇಳಿದರೆ ಬಡ್ಡಿದರ ತಗ್ಗಿಸಲಾಗುವುದು ಎಂದು `ಆರ್‌ಬಿಐ' ಈ ಹಿಂದೆ ಹಲವು ಬಾರಿ ಹೇಳಿದೆ. ಆದರೆ, ಈ ಬಾರಿ ಆರ್ಥಿಕ ಪರಿಸ್ಥಿತಿ ಆಧರಿಸಿರುತ್ತದೆ ಎಂದು ಹೇಳುವ ಮೂಲಕ ಚಕ್ರವರ್ತಿ ಬಡ್ಡಿ ದರ ಕಡಿತದ ಸುಳಿವು ನೀಡಿದ್ದಾರೆ.

ಡಿಸೆಂಬರ್‌ನಲ್ಲಿ ಪ್ರಕಟಿಸಿದ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿಯಲ್ಲಿ `ಆರ್‌ಬಿಐ' ರೆಪೊ ದರ ಮತ್ತು ನಗದು ಮೀಸಲು ಅನುಪಾತ(ಸಿಆರ್‌ಆರ್)ದಲ್ಲಿ  ಯಾವುದೇ ವ್ಯತ್ಯಾಸ ಮಾಡದೇ ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಹೊಸ ಬ್ಯಾಂಕ್ ಸ್ಥಾಪನೆ ಪರವಾನಗಿಗೆ ಸಂಬಂಧಿಸಿದಂತೆ ಅಂತಿಮ ಮಾರ್ಗಸೂಚಿ ಯಾವಾಗ ಪ್ರಕಟಗೊಳ್ಳಲಿದೆ ಎಂಬ ಪ್ರಶ್ನೆಗೆ ಚಕ್ರವರ್ತಿ, ನಿಗದಿತ ಗಡುವು ಕುರಿತು ಮಾಹಿತಿ ನೀಡಲು ನಿರಾಕರಿಸಿದರು. ಬಿಡುಗಡೆಯಾದಾಗ ನಿಮಗೇ ತಿಳಿಯುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.