ADVERTISEMENT

ಬ್ಯಾಂಕಿಂಗ್ ಸೇವೆ; ನಿಮ್ಮ ಆಯ್ಕೆ ಯಾವುದು?

​ಪ್ರಜಾವಾಣಿ ವಾರ್ತೆ
Published 1 ಜೂನ್ 2012, 19:30 IST
Last Updated 1 ಜೂನ್ 2012, 19:30 IST
ಬ್ಯಾಂಕಿಂಗ್ ಸೇವೆ; ನಿಮ್ಮ ಆಯ್ಕೆ ಯಾವುದು?
ಬ್ಯಾಂಕಿಂಗ್ ಸೇವೆ; ನಿಮ್ಮ ಆಯ್ಕೆ ಯಾವುದು?   

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇಂದು ಒಂದೆಡೆ, ಎಲ್ಲರನ್ನೂ ಒಳಗೊಳ್ಳುವ ಆಂದೋಲನ ನಡೆದಿದ್ದರೆ, ಮತ್ತೊಂದೆಡೆ ಗ್ರಾಹಕ- ಬ್ಯಾಂಕ್ ನಡುವೆ ಮುಖಾಮುಖಿ ಸಂಪರ್ಕವೇ ಅಗತ್ಯವಿಲ್ಲದಷ್ಟು ತಂತ್ರಜ್ಞಾನ ಮುಂದುವರಿದಿದೆ.

ರಾಷ್ಟ್ರೀಕೃತ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳ ಜತೆಗೆ ಕಾರ್ಪೊರೆಟ್ ಪ್ರಣೀತ ಖಾಸಗಿ ಬ್ಯಾಂಕುಗಳು ತುರುಸಿನ ಸ್ಪರ್ಧೆಯಲ್ಲಿವೆ. ಕಾಗದ ಸ್ವರೂಪಿ ಹಣದ ಜತೆಗೆ ಪ್ಲಾಸ್ಟಿಕ್ ಹಣ, ಎಲೆಕ್ಟ್ರಾನಿಕ್ ಹಣದ ಧಾರೆಗಳು ಸೇರಿಕೊಂಡಿವೆ. ಕಂಪ್ಯೂಟರ್, ಅಂತರಜಾಲ ಸಂಪರ್ಕ, 3ಜಿ ಮೊಬೈಲ್ ಸೇವೆ ಹೊಂದಿರುವವರಿಗಂತೂ ಬ್ಯಾಂಕ್ ಕೈಬೆರಳ ತುದಿಗೇ ಬಂದಿದೆ ಎನ್ನಬಹುದು.

ಇದು ಸವಲತ್ತಿನ ಮಾತಾಯಿತು. ಹೀಗೆಂದ ಮಾತ್ರಕ್ಕೆ ಯಾವುದೇ ಬ್ಯಾಂಕಿಗೆ ಹೋದರೂ ಅಲ್ಲಿ ಗುಣಮಟ್ಟದ ಸೇವೆ ಸಿಕ್ಕೇ ಸಿಗುತ್ತದೆ ಎಂಬ ಖಾತ್ರಿಯೇನೂ ಇಲ್ಲ. ಗ್ರಾಹಕರಿಗೆ ಕಿರಿಕಿರಿಗಳೂ ಇದ್ದೇ ಇವೆ. ಆಧುನಿಕತೆಯ ಜತೆಜತೆಗೆ ಹೊಸ ಹೊಸ ಸಮಸ್ಯೆಗಳೂ ಉದ್ಭವಿಸಿವೆ. ಇಂದು ನಗರ, ಪಟ್ಟಣ ಪ್ರದೇಶಗಳಲ್ಲಿ ಹಲವಾರು ಬ್ಯಾಂಕುಗಳ ಸೇವೆ ಲಭ್ಯವಿದ್ದು, ಯಾವ ಬ್ಯಾಂಕಿನಲ್ಲಿ ವ್ಯವಹಾರ ಇರಿಸಿಕೊಳ್ಳಬೇಕೆಂಬುದನ್ನು ನಿರ್ಧರಿಸಲು ಗ್ರಾಹಕರಿಗೆ  ಹೆಚ್ಚಿನ ಆಯ್ಕೆಗಳಿವೆ. ಆದರೆ ಪ್ರತಿಯೊಂದು ಬ್ಯಾಂಕೂ ಮತ್ತೊಂದಕ್ಕಿಂತ ಭಿನ್ನವಾದ ವ್ಯಾವಹಾರಿಕ ಆದ್ಯತೆ ಹೊಂದಿರುತ್ತದೆ. ಹೀಗಾಗಿ ಗ್ರಾಹಕರು ಬ್ಯಾಂಕಿನಲ್ಲಿ ಖಾತೆ ತೆರೆಯುವ ಮುನ್ನ, ಯಾವ ಬ್ಯಾಂಕ್ ತಮ್ಮ ವ್ಯವಹಾರ ವೈಖರಿಗೆ ಸೂಕ್ತ ಎಂದು ಯೋಚಿಸುವುದು ಅಗತ್ಯ.

ಬ್ಯಾಂಕುಗಳು ತಮ್ಮ ಅನುಕೂಲಕ್ಕಾಗಿ ಗ್ರಾಹಕರನ್ನು - ಅಧಿಕ ಮೌಲ್ಯದ ಗ್ರಾಹಕರು (ಹೈ ನೆಟ್ ವರ್ಥ್ ಇಂಡಿವಿಜುಯಲ್ಸ್- ಎಚ್‌ಎನ್‌ಐ), ಅನಿವಾಸಿ ಭಾರತೀಯರು (ಎನ್‌ಆರ್‌ಐ), ವ್ಯಾಪಾರ ಮತ್ತು ವಾಣಿಜ್ಯ ಸಂಸ್ಥೆಗಳು, ವೇತನದಾರರು ಮತ್ತು ಪಿಂಚಣಿದಾರರು, ರೈತರು ಮತ್ತು ಭೂಮಾಲೀಕರು- ಹೀಗೆ ಪ್ರತ್ಯೇಕ ಗುಂಪುಗಳಾಗಿ ವಿಂಗಡಿಸಿರುತ್ತವೆ. ಅಧಿಕ ಮೌಲ್ಯದ ಗ್ರಾಹಕರು ಸಂಪತ್ತು ವೃದ್ಧಿಯಾಗುವ ಅಥವಾ ಹೂಡಿಕೆ ಯೋಜನೆಗಳಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರೆ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರಿಗೆ ಗೃಹ ಸಾಲ, ಶಿಕ್ಷಣ ಸಾಲ ಇತ್ಯಾದಿಗಳ ಅಗತ್ಯವಿರುತ್ತದೆ. ಪಿಂಚಣಿದಾರರು ತಮ್ಮ ಹಣದ ಸುರಕ್ಷತೆ ಹಾಗೂ ಠೇವಣಿಗೆ ಸಿಗುವ ಬಡ್ಡಿಯ ಮೇಲೆ ಗಮನ ಇಟ್ಟಿರುತ್ತಾರೆ. ಹಾಗೆಯೇ ತಂತ್ರಜ್ಞಾನದ ಹಿಂದೆ ಬಿದ್ದವರು, ಬ್ಯಾಂಕಿಂಗ್ ಸೇವೆಯು ಹಗಲು ರಾತ್ರಿ ಭೇದವಿಲ್ಲದೆ ಬೇಕೆಂದ ಸಮಯದಲ್ಲಿ ತಮ್ಮ ಬೆರಳ ತುದಿಯಲ್ಲಿ ಲಭ್ಯವಾಗಬೇಕೆಂದು ನಿರೀಕ್ಷಿಸುತ್ತಾರೆ.

ಖಾಸಗಿ ಬ್ಯಾಂಕುಗಳಾದ ಸ್ಟ್ಯಾಂಡರ್ಡ್ ಚಾರ್ಟರ್ಡ್, ಎಚ್‌ಎಸ್‌ಬಿಸಿ ಮತ್ತು ಸಿಟಿ ಬ್ಯಾಂಕುಗಳು ರಾಷ್ಟ್ರದ ಮಹಾನಗರಗಳು ಹಾಗೂ ಇನ್ನಿತರ ಪ್ರಮುಖ ನಗರಗಳಲ್ಲಿ ಮಾತ್ರ ವ್ಯವಹರಿಸುತ್ತಿವೆ. ಇವುಗಳ ಶಾಖೆಗಳ ಸಂಖ್ಯೆ ಸೀಮಿತವಾಗಿದ್ದು, ಸಂಪೂರ್ಣ ತಂತ್ರಜ್ಞಾನ ಆಧಾರಿತವಾಗಿ ಕಾರ್ಯ ನಿರ್ವಹಿಸುತ್ತವೆ.

ಇವು ತಮ್ಮ ಬ್ಯಾಂಕಿಗೆ ಗ್ರಾಹಕರು ಖುದ್ದು ಬಂದು ನೇರ ವ್ಯವಹಾರ ಮಾಡುವುದನ್ನು ಉತ್ತೇಜಿಸುವುದಿಲ್ಲ. ಬದಲಾಗಿ, ಖುದ್ದು ಶಾಖೆಗೆ ಹೋಗಿ ಠೇವಣಿ ತುಂಬಿದರೆ / ಹಣ ಪಡೆದರೆ ಇತ್ಯಾದಿ ಸೇವೆಗಳನ್ನು ಪಡೆದರೆ ಶುಲ್ಕ ವಿಧಿಸುವ ಮೂಲಕ ತಂತ್ರಜ್ಞಾನ ಆಧಾರಿತ ಸೇವೆಯ ಮೊರೆ ಹೋಗಲು ಗ್ರಾಹಕರಿಗೆ ಒತ್ತಡ ಹಾಕುತ್ತವೆ. ಭಾರಿ ಬ್ಯಾಂಕುಗಳು ಕಡಿಮೆ ಮೊತ್ತದ ವಹಿವಾಟು ನಡೆಸುವ ಗ್ರಾಹಕರೆಡೆಗೆ ಆಸಕ್ತಿ ಹೊಂದಿರುವುದಲ್ಲಿ ಎಂಬುದು ವಾಸ್ತವ.

ಯಾವುದೇ ಬ್ಯಾಂಕಿನ ಶಾಖೆಯಲ್ಲಿ ಖಾತೆ ತೆರೆಯುವ ಮುನ್ನ, ಜಂಟಿ ಖಾತೆಗೆ ಆ್ಯಡ್- ಆನ್ ಕಾರ್ಡ್ ಸೇವೆ ಇದೆಯೇ? ಎಟಿಎಂ, ನೆಟ್ ಬ್ಯಾಂಕಿಂಗ್, ಟೆಲಿ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಸ್ಮಾರ್ಟ್ ಕಾರ್ಡ್, ಆಟೊ ಸ್ವೀಪ್ ಸೌಲಭ್ಯ ಇದೆಯೇ?  ಡಿ-ಮ್ಯಾಟ್ ಅಕೌಂಟ್ ತೆರೆಯಬಹುದೇ?- ಇತ್ಯಾದಿಗಳ ಬಗ್ಗೆ ತಿಳಿಯಬೇಕು. ಈ ಸೌಲಭ್ಯಗಳಿಗೆ ವಿಧಿಸಲಾಗುವ ಶುಲ್ಕದ ಮಾಹಿತಿಯನ್ನೂ ಪಡೆಯಬೇಕು.

ಹಾಗೆಯೇ ಠೇವಣಿಗೆ ಬ್ಯಾಂಕು ನೀಡುವ ಬಡ್ಡಿ ದರ, ಸಾಲ, ಪ್ರೊಸೆಸಿಂಗ್ ಶುಲ್ಕ, ದಾಖಲಾತಿ ಶುಲ್ಕ, ಸಾಲದ ಮೇಲಿನ ಬಡ್ಡಿ ದರ, ವಿಳಂಬ ಪಾವತಿಗೆ ವಿಧಿಸುವ ದಂಡ ಶುಲ್ಕ, ಪೂರ್ವ ಪಾವತಿಗೆ ವಿಧಿಸುವ ಶುಲ್ಕ, ಕನಿಷ್ಠ ನಗದು ಬಾಕಿ ಇಲ್ಲದಿದ್ದರೆ ವಿಧಿಸಲಾಗುವ ಶುಲ್ಕ, ಹೊಸ ಎಟಿಎಂ ಕಾರ್ಡ್ ನೀಡಲು/  ನವೀಕರಿಸಲು ವಿಧಿಸುವ ಶುಲ್ಕ, ಡ್ರಾಫ್ಟ್‌ಗೆ ವಿಧಿಸುವ ಕಮಿಷನ್, ಲಾಕರ್‌ಗೆ ನೀಡಬೇಕಾದ ಬಾಡಿಗೆ, ನಗದು ನಿರ್ವಹಣೆ ಶುಲ್ಕಗಳ ಬಗ್ಗೆಯೂ ವಿಚಾರಿಸಬೇಕು.
-ಮುಂದುವರಿಯುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.