ADVERTISEMENT

ವರ್ಣರಂಜಿತ ಉದ್ಯಮಿ ವಿಜಯ್ ಮಲ್ಯ!

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 19:40 IST
Last Updated 4 ಡಿಸೆಂಬರ್ 2012, 19:40 IST

ಉದ್ಯಮಿ, ಸಂಸದ, ಐಪಿಎಲ್ ಕ್ರಿಕೆಟ್ ತಂಡದ ಒಡೆಯ, ಕುದುರೆ ರೇಸ್ ಪ್ರೇಮಿ ಮೊದಲಾದ ಹತ್ತಾರು ವೈಶಿಷ್ಟ್ಯಗಳ ವಿಜಯ್ ಮಲ್ಯ ಅವರದು ವರ್ಣರಂಜಿತ ವ್ಯಕ್ತಿತ್ವ.

ಕಪ್ಪು-ಬಿಳಿ ವರ್ಣ ಮಿಶ್ರಣದ `ಫ್ರೆಂಚ್ ಬೇರ್ಡ್'ನ ಸುಂದರಾಂಗ ಮಲ್ಯ, ಇದೇ ಡಿಸೆಂಬರ್ 18ರಂದು 57 ವರ್ಷ ತುಂಬಿ 58ಕ್ಕೆ ಕಾಲಿಡಲಿದ್ದಾರೆ. ಕೋಲ್ಕತದಲ್ಲಿ    1955ರ ಡಿಸೆಂಬರ್ 18ರಂದು ಜನನ. ಅಲ್ಲಿಯೇ ಸೇಂಟ್ ಕ್ಸೇವಿಯರ್ ಕಾಲೇಜ್‌ನಲ್ಲಿ ಬಿಕಾಂ ಪದವಿ. ಅಪ್ಪ ವಿಠಲ ಮಲ್ಯ ಅವರ ಅಕಾಲ ಮರಣದಿಂದಾಗಿ ಮಲ್ಯ, 28ನೇ ವಯಸ್ಸಿಗೇ(1983ರಲ್ಲಿ) ದೇಶದ ಅತಿದೊಡ್ಡ ಮದ್ಯ ಸಾಮ್ರಾಜ್ಯ `ಯುಬಿ ಸಮೂಹ'ದ ಒಡೆಯರಾದರು.

ಅಷ್ಟೇ ಅಲ್ಲ, ವಿಜಯ್ ಮಲ್ಯ ಉದ್ಯಮ ಔಷಧ ತಯಾರಿಕೆ, ರಿಯಲ್ ಎಸ್ಟೇಟ್, ಎಂಜಿನಿಯರಿಂಗ್, ರಸಗೊಬ್ಬರ(ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್-ಎಂಸಿಎಫ್), ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿಯೂ ವಿಸ್ತರಿಸಿಕೊಂಡಿದೆ. ಅವರ `ಯುಬಿ ಕಂಪೆನಿ' ತಯಾರಿಕೆಯಾದ ಕಿಂಗ್‌ಫಿಷರ್ ಬಿಯರ್ ಭಾರತದ ಬಿಯರ್ ಮಾರುಕಟ್ಟೆಯಲ್ಲಿ ಶೇ 50ರಷ್ಟು ದೊಡ್ಡ ಪಾಲು ಹೊಂದಿದೆ. ಅಲ್ಲದೆ, ಮಿಂಚುಳ್ಳಿ ಲಾಂಛನದ ಈ ಬಿಯರ್ 52 ದೇಶಗಳ ಜನರಿಗೂ ಪ್ರಿಯವಾಗಿದೆ.

ಮದ್ಯದ ಜತೆ ಕುದುರೆಯೂ ಇದ್ದರೆ ಚೆನ್ನ ಅಲ್ಲವೆ? ರೇಸ್‌ನಲ್ಲಿಯೂ ತಮ್ಮದೇ ಛಾಪು ಮೂಡಿಸಿದರು. ಐಪಿಎಲ್ ಕ್ರಿಕೆಟ್ ತಂಡ `ರಾಯಲ್ ಚಾಲೆಂಜರ್ಸ್'ಗೂ ಮಾಲೀಕರಾಗಿದ್ದರು. ಹಣವಿದ್ದರೆ ಏನೂ ಸಾಧ್ಯ ಎನ್ನುವ ಮಹತ್ವಾಕಾಂಕ್ಷೆಯ ಮಲ್ಯ ರಾಜಕೀಯ ಪ್ರವೇಶಕ್ಕಾಗಿ `ಜನತಾ ಪಕ್ಷ'ವನ್ನೂ ಸುಬ್ರಹ್ಮಣಿಯನ್ ಸ್ವಾಮಿ ಅವರಿಂದ ಖರೀದಿಸಿದರು.  ಪಕ್ಷ ಬೆಳೆಸುವ, ವಿಧಾನಸಭೆ ಪ್ರವೇಶಿಸುವ ಕನಸಿನಲ್ಲಿ ಸೋತರೂ ರಾಜ್ಯಸಭೆಗೆ ಚುನಾಯಿತರಾದರು. ಆದರೆ, ಬಹಳ ಆಸೆಯಿಂದ ಆರಂಭಿಸಿದ `ಕಿಂಗ್‌ಫಿಷರ್' ಏರ್‌ಲೈನ್ಸ್ ಮಾತ್ರ ಕೈಕೊಟ್ಟಿತು. ವಿಶ್ವದರ್ಜೆ ಸೇವೆಗಳನ್ನೇ ಒದಗಿಸಿದರೂ ವಾಯುಯಾನ ಕ್ಷೇತ್ರ ಕೈಹಿಡಿಯಲಿಲ್ಲ.

ಗಗನದೆತ್ತರಕ್ಕೆ ಕರೆದೊಯ್ದರೂ `ಮಿಂಚುಳ್ಳಿ'(ಕಿಂಗ್‌ಫಿಷರ್) ಮೀನಿನಾಸೆಯಿಂದ ನೀರಿಗೇ ಇಳಿಯಿತು. ಮದ್ಯ ಉದ್ಯಮ, ವಿಮಾನ, ಕುದುರೆ, ಸುಂದರ ಲಲನೆಯರ ಲೋಕದ ಮಲ್ಯ, ಇತ್ತೀಚೆಗೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಬಾಗಿಲಿಗೆ ರೂ. 85 ಲಕ್ಷದಲ್ಲಿ ಚಿನ್ನದ ಹೊದಿಕೆಯ ಹರಕೆ ಭಕ್ತಿಯಿಂದ ಸಮರ್ಪಿಸಿದ್ದರು. ಇಂಥ ವೈವಿಧ್ಯಮಯ ವ್ಯಕ್ತಿತ್ವದ ವಿಜಯ್ ಮಲ್ಯ ಅವರನ್ನು ಕಪ್ಪು ರೇಖೆಗಳಲ್ಲಿ ಇಲ್ಲಿ ಸೆರೆ ಹಿಡಿದಿದ್ದಾರೆ `ರಘು ಕಾರ್ನಾಡ್'.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.