ADVERTISEMENT

ಸಿಬ್ಬಂದಿ ನೇಮಕ ಇಳಿಮುಖ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 15:55 IST
Last Updated 14 ಅಕ್ಟೋಬರ್ 2012, 15:55 IST

ನವದೆಹಲಿ (ಪಿಟಿಐ): ಮಂದಗತಿಯ ಆರ್ಥಿಕ ಪ್ರಗತಿಯಿಂದ ದೇಶದ ಉದ್ಯೋಗ ಕ್ಷೇತ್ರದಲ್ಲಿ ಹೊಸದಾಗಿ ಸಿಬ್ಬಂದಿ ನೇಮಕ ಮಾಡಿಕೊಳ್ಳುವುದರ ಪ್ರಮಾಣ ಕಳೆದ ಮೂರು ತಿಂಗಳಿಂದ ನಿರಂತರ ಇಳಿಕೆ ಕಾಣುತ್ತಿದೆ ಎಂದು ಉದ್ಯೋಗ ಮಾಹಿತಿ ತಾಣ `ನೌಕರಿ ಡಾಟ್ ಕಾಂ~ನ ಸಮೀಕ್ಷೆ ಹೇಳಿದೆ.

ಸೆಪ್ಟೆಂಬರ್‌ನಲ್ಲಿನ ನೇಮಕಾತಿ ಅಂಕಿ -ಅಂಶ ಮಂಗಳವಾರ ಪ್ರಕಟಗೊಂಡಿದ್ದು, ಆಗಸ್ಟ್‌ಗೆ ಹೋಲಿಸಿದರೆ ಶೇ 1.2ರಷ್ಟು ಇಳಿಕೆ ಕಂಡಿದೆ. ಪುಣೆ, ಹೈದರಾಬಾದ್ ಹೊರತುಪಡಿಸಿದರೆ ಉಳಿದ ಮೆಟ್ರೊ ನಗರಗಳಲ್ಲಿ ಉದ್ಯೋಗಾವಕಾಶ ಗಣನೀಯವಾಗಿ ತಗ್ಗಿದೆ. ಬೆಂಗಳೂರು, ಚೆನ್ನೈನಲ್ಲಿ ಹೊಸ ನೇಮಕಾತಿ ಶೇ 5ರಷ್ಟು ತಗ್ಗಿದೆ. 

ಕೋಲ್ಕತ್ತದಲ್ಲಿ ಶೇ 17 ಮತ್ತು ದೆಹಲಿಯಲ್ಲಿ ಶೇ 1ರಷ್ಟು ಕುಸಿದಿದೆ. ಒಟ್ಟಾರೆ ಕಳೆದ ಮೂರು ತಿಂಗಳಲ್ಲಿ ಹೊಸ ನೇಮಕಾತಿ ಪ್ರಮಾಣ ಸರಾಸರಿ ಶೇ 6ರಷ್ಟು ಕುಸಿದಿದೆ ಎಂದು ಈ ಅಧ್ಯಯನ  ತಿಳಿಸಿದೆ.

ಸೆಪ್ಟೆಂಬರ್‌ನಲ್ಲಿ ಮುಖ್ಯವಾಗಿ  ಮಾಹಿತಿ ತಂತ್ರಜ್ಞಾನ, ಹೊರಗುತ್ತಿಗೆ, ಬ್ಯಾಂಕಿಂಗ್ ವಲಯಗಳಲ್ಲಿ ನೇಮಕಾತಿ ತಗ್ಗಿದೆ. ಆದರೆ, ಕಾಮಗಾರಿ, ವಿಮೆ, ವಾಹನ ಉದ್ಯಮದಲ್ಲಿ ಉದ್ಯೋಗಾವಕಾಶ ಸ್ಥಿರವಾಗಿದೆ ಎಂದೂ ಈ ಅಧ್ಯಯನ ಹೇಳಿದೆ. 

ಆರ್ಥಿಕ ಚೇತರಿಕೆ ಇನ್ನಷ್ಟು ವೇಗ ಪಡೆದುಕೊಂಡರೆ ನೇಮಕಾತಿ ಪ್ರಕ್ರಿಯೆ ಚುರುಕುಗೊಳ್ಳಬಹುದೆಂದು `ಇನ್ಫೋ ಎಡ್ಜ್  ಇಂಡಿಯ~ದ  `ಸಿಇಒ~ ಹಿತೇಶ್ ಒಬೆರಾಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.