ADVERTISEMENT

ಏಪ್ರಿಲ್‌ನಲ್ಲಿ ಆರ್‌ಬಿಐ ಬಡ್ಡಿ ದರ ಕಡಿತ?

ಪಿಟಿಐ
Published 25 ಜನವರಿ 2018, 19:30 IST
Last Updated 25 ಜನವರಿ 2018, 19:30 IST
ಏಪ್ರಿಲ್‌ನಲ್ಲಿ ಆರ್‌ಬಿಐ ಬಡ್ಡಿ ದರ ಕಡಿತ?
ಏಪ್ರಿಲ್‌ನಲ್ಲಿ ಆರ್‌ಬಿಐ ಬಡ್ಡಿ ದರ ಕಡಿತ?   

ಮುಂಬೈ: ಹಣದುಬ್ಬರ ಹೆಚ್ಚಳ ಗಂಡಾಂತರವು ಕ್ರಮೇಣ ಕಡಿಮೆಯಾಗಲಿದ್ದು, ಭಾರತೀಯ ರಿಸರ್ವ್ ಬ್ಯಾಂಕ್‌ ಏಪ್ರಿಲ್‌ ತಿಂಗಳಲ್ಲಿ ತನ್ನ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ತಗ್ಗಿಸಲಿದೆ ಎಂದು ವಿದೇಶಿ ದಲ್ಲಾಳಿ ಸಂಸ್ಥೆ ಅಂದಾಜಿಸಿದೆ.

ಡಿಸೆಂಬರ್‌ ತಿಂಗಳಲ್ಲಿ ಹಣದುಬ್ಬರವು ಶೇ 5.2ರಷ್ಟಕ್ಕೆ ಏರಿಕೆ ಕಂಡಿದ್ದರೂ, ಆರ್‌ಬಿಐ ನಿಗದಿಪಡಿಸಿರುವ ಶೇ 2 ರಿಂದ 6ರ ವ್ಯಾಪ್ತಿಯಲ್ಲಿಯೇ ಇದೆ. ಹೀಗಾಗಿ ಬಡ್ಡಿ ದರ ಕಡಿತ ಮಾಡುವ ಸಾಧ್ಯತೆಯು ಏಪ್ರಿಲ್‌ ವೇಳೆಗೆ ನಿಚ್ಚಳಗೊಳ್ಳಲಿದೆ ಎಂದು ಬ್ಯಾಂಕ್‌ ಆಫ್‌ ಅಮೆರಿಕ ಮೆರಿಲ್ ಲಿಂಚ್‌ನ ವರದಿಯಲ್ಲಿ ಹೇಳಲಾಗಿದೆ.

ಇಂಧನ ಮತ್ತು ಮನೆ ಬಾಡಿಗೆ ಭತ್ಯೆ ಹೊರತುಪಡಿಸಿದ ಮುಖ್ಯ ಹಣದುಬ್ಬರವು ಶೇ 4.2ರ ಹಂತದಲ್ಲಿ ಇದೆ. ಒಟ್ಟಾರೆ ಹಣದುಬ್ಬರವು ಜನವರಿಯಲ್ಲಿ ಶೇ 5ಕ್ಕೆ ಇಳಿಕೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಬಡ್ಡಿ ದರಗಳನ್ನು ಕಡಿತ ಮಾಡುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ಹಣದುಬ್ಬರವು ಏರಿಕೆ ಹಾದಿಯಲ್ಲಿ ಸಾಗುವುದಿಲ್ಲ ಎನ್ನುವುದಕ್ಕೆ ಮೂಲಭೂತ ಕಾರಣಗಳಿವೆ. ಇಂಧನ, ವಿದ್ಯುತ್‌ ಬೆಲೆ ಮತ್ತು ಕೇಂದ್ರ ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಹೆಚ್ಚಳ ಮಾತ್ರ ಹಣದುಬ್ಬರ ಹೆಚ್ಚಳಕ್ಕೆ ಪ್ರಮುಖ ಕೊಡುಗೆ ನೀಡುತ್ತಿವೆ.

ಆರ್‌ಬಿಐ, ಫೆಬ್ರುವರಿಯಲ್ಲಿ ನಡೆಸಲಿರುವ ತನ್ನ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಿಗೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.