ADVERTISEMENT

ಷೇರುಪೇಟೆಯಲ್ಲಿ ಕರಡಿ ಕುಣಿತ

ಪಿಟಿಐ
Published 5 ಫೆಬ್ರುವರಿ 2018, 19:41 IST
Last Updated 5 ಫೆಬ್ರುವರಿ 2018, 19:41 IST

ಮುಂಬೈ : ಕಳೆದ ಎಂಟು ವಾರಗಳ ಗೂಳಿ ಓಟಕ್ಕೆ ಈಗಾಗಲೇ ತೆರೆ ಬಿದ್ದಿದ್ದು, ಷೇರುಪೇಟೆಯಲ್ಲಿ ಈಗ ಕರಡಿ ಕುಣಿತ ಆರಂಭವಾಗಿದೆ.

ಹೂಡಿಕೆದಾರರ ಉತ್ಸಾಹ ಅಡಗಿಸಿರುವ ಬಜೆಟ್‌ ನಿರ್ಧಾರಗಳು, ಜಾಗತಿಕ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡದ ಕಾರಣಗಳಿಂದಾಗಿ ಷೇರುಪೇಟೆಯಲ್ಲಿ ಸೂಚ್ಯಂಕಗಳು ಇಳಿಮುಖ ಹಾದಿ ಹಿಡಿದಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ಸೋಮವಾರದ ವಹಿವಾಟಿನಲ್ಲಿ 310 ಅಂಶ ಇಳಿಕೆ ಕಂಡು ಮೂರು ವಾರಗಳ ಕನಿಷ್ಠ ಮಟ್ಟವಾದ 34,521 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 94 ಅಂಶ ಇಳಿಕೆಯಾಗಿ 10,666 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಚಿಲ್ಲರೆ ಹಣದುಬ್ಬರ ಏರಿಕೆ ಕಾಣುತ್ತಿರುವುದರಿಂದ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)  ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದು, ಸೂಚ್ಯಂಕ ಇಳಿಕೆ ಕಾಣುವಂತಾಗಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ಜಾಗತಿಕ ಮಾರುಕಟ್ಟೆಗೆ ಸಂಬಂಧಿಸಿ ಹೇಳುವುದಾದರೆ ಏಷ್ಯಾದ ಷೇರುಪೇಟೆಯಲ್ಲಿ ವಹಿವಾಟು ಇಳಿಮುಖವಾಗಿ ಅಂತ್ಯವಾಗಿದೆ. ಯುರೋಪ್ ಮಾರುಕಟ್ಟೆಗಳಲ್ಲಿ ಸಹ ನಕಾರಾತ್ಮಕ ವಹಿವಾಟು ನಡೆಯಿತು. ಇದು ಸಹ ದೇಶಿ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ.

ವಿದೇಶಿ ಹೂಡಿಕೆ ಬಲ: ದೇಶದ ಷೇರುಪೇಟೆಯಲ್ಲಿ ವಿದೇಶಿ ಹೂಡಿಕೆದಾರರು ಖರೀದಿಗೆ ಗಮನ ನೀಡುತ್ತಿದ್ದಾರೆ. ಶುಕ್ರವಾರ ₹ 950 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಆದರೆ, ದೇಶಿ ಹೂಡಿಕೆದಾರರು ಮಾರಾಟಕ್ಕೆ ಒತ್ತು ನೀಡಿದ್ದು, ₹ 509 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಬಂಡವಾಳ ಗಳಿಕೆ ತೆರಿಗೆಯಿಂದ ಷೇರುಪೇಟೆ ಕುಸಿತ ಕಾಣುತ್ತಿಲ್ಲ. ಜಾಗತಿಕ ಮಾರುಕಟ್ಟೆ ಪ್ರಭಾವಕ್ಕೆ ಒಳಗಾಗಿದೆಯಷ್ಟೆ
ಹಸ್ಮುಖ್‌ ಆಧಿಯಾ
ಹಣಕಾಸು ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.