ADVERTISEMENT

69 ಕೋಟಿ ತೆರಿಗೆ ಬಾಕಿ: ಜೆಟ್ ಏರ್‌ವೇಸ್‌ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 19:30 IST
Last Updated 12 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಬಾಕಿ ಉಳಿಸಿಕೊಂಡಿರುವ ಸುಮಾರು ರೂ. 69 ಕೋಟಿ ಸೇವಾ ತೆರಿಗೆಯನ್ನು  ತಕ್ಷಣವೇ  ಅಂತರರಾಷ್ಟ್ರೀಯ ವಿಮಾನ ಸಾರಿಗೆ ಸಂಘಕ್ಕೆ (ಐಎಟಿಎ) ಪಾವತಿಸುವಂತೆ ಜೆಟ್ ಏರ್‌ವೇಸ್‌ಗೆ ಸೇವಾ ತೆರಿಗೆ ಇಲಾಖೆ ಸೂಚನೆ ನೀಡಿದೆ.

ಜೆಟ್ ಏರ್‌ವೇಸ್‌ನ ಉಳಿದ ಪಾವತಿಗಳನ್ನು ಇತ್ಯರ್ಥಗೊಳಿಸುವ ಮೊದಲು, ಬಾಕಿ ಉಳಿಸಿಕೊಂಡಿರುವ ಸೇವಾ ತೆರಿಗೆ ಕಡಿತಗೊಳಿಸುವಂತೆ `ಐಎಟಿಎ~ಗೆ  ಸಲಹೆ ನೀಡಿರುವುದನ್ನು ತೆರಿಗೆ ಇಲಾಖೆ  ಮೂಲಗಳು  ಖಚಿತಪಡಿಸಿವೆ.

ಸೇವಾ ತೆರಿಗೆ ಇಲಾಖೆಯು ಕಳೆದ ಶುಕ್ರವಾರ  ವಿಮಾನಯಾನ ಸಂಸ್ಥೆಗೆ ಈ ಸೂಚನೆ ನೀಡಿದ್ದು, ಸೋಮವಾರದ ಒಳಗೆ ಬಾಕಿ ಪಾವತಿಸಲು ವಿಫಲವಾದರೆ, ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಿತ್ತು.

ADVERTISEMENT

ಆದರೆ, ಇದುವರೆಗೂ ಯಾವುದೇ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿಲ್ಲ. ಬಾಕಿ ಪಾವತಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಜೆಟ್ ಏರ್‌ವೇಸ್‌ನ ವಕ್ತಾರ ತಿಳಿಸಿದ್ದಾರೆ. 

ಜೆಟ್ ಏರ್‌ವೇಸ್ ಸೇರಿದಂತೆ ಪ್ರಮುಖ ವಿಮಾನಯಾನ ಸಂಸ್ಥೆಗಳ ಸಾರಿಗೆ ವ್ಯವಹಾರಗಳನ್ನು `ಐಎಟಿಎ~ ನಿರ್ವಹಿಸುತ್ತದೆ.  ಮಾರ್ಚ್ 6 ರಿಂದಲೇ ಸೇವಾ ತೆರಿಗೆ ಪಾವತಿಯನ್ನು ಜೆಟ್ ಏರ್‌ವೇಸ್ ಬಾಕಿ ಉಳಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.