ಅಮರಾವತಿ: ವಿಶೇಷ ರಾಜ್ಯದ ಸ್ಥಾನಮಾನದ ಬದಲಿಗೆ ಈ ಬಾರಿಯ ಬಜೆಟ್‌ನಲ್ಲಿ ಆಂಧ್ರ ಪ್ರದೇಶಕ್ಕೆ ಭರ್ಜರಿ ಅನುದಾನ ಘೋಷಣೆ ಮಾಡಲಾಗಿದೆ. ಕೇಂದ್ರದಲ್ಲಿ ಆಡಳಿತದಲ್ಲಿರುವ ಎನ್‌ಡಿಎ ಮೈತ್ರಿಕೂಟದಲ್ಲಿ ಟಿಡಿಪಿ ಸಹ ಇದ್ದು, ಹೀಗಾಗಿಯೇ ಅಧಿಕ ಲಾಭವಾಗಿದೆ ಎಂದು ವರದಿ ತಿಳಿಸಿವೆ.
ಅದರಲ್ಲಿ ಆಂಧ್ರ ಪ್ರದೇಶದ ರಾಜಧಾನಿ ಅಮರಾವತಿ ಅಭಿವೃದ್ಧಿಗೆ ₹15,000 ಕೋಟಿ ನೀಡಿರುವುದು ಪ್ರಮುಖವಾದದ್ದಾಗಿದೆ.
ಬಜೆಟ್ ಮಂಡನೆಗೂ ಮುನ್ನ ದೆಹಲಿಗೆ ಭೇಟಿ ನೀಡಿದ್ದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಹಲವು ಮನವಿಗಳನ್ನು ಸಲ್ಲಿಸಿದ್ದರು. 16 ಸಂಸದರನ್ನು ಹೊಂದಿರುವ ಟಿಡಿಪಿ ಮತ್ತು ಇಬ್ಬರು ಸಂಸದರನ್ನು ಹೊಂದಿರುವ ಜನಸೇನಾ ಪಕ್ಷಗಳು ಕೇಂದ್ರದ ಎನ್‌ಡಿಎ ಸರ್ಕಾರದಲ್ಲಿ ಪ್ರಮುಖ ಪಾತ್ರ ವಹಿಸಿವೆ.
ಅಮರಾವತಿಗೆ ₹ 15,000 ಕೋಟಿ ಜೊತೆಗೆ ಪೋಲಾವರಂ ಯೋಜನೆಗೆ ಹಣಕಾಸು ನೆರವು, 2014ರ ಆಂಧ್ರ ಪ್ರದೇಶ ರಾಜ್ಯ ಪುನರ್ ರಚನೆ ಕಾಯ್ದೆ ಅನ್ವಯ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಪ್ಯಾಕೇಜ್ ನೀಡುವ ಭರವಸೆಯನ್ನು ಬಜೆಟ್‌ನಲ್ಲಿ ನೀಡಲಾಗಿದೆ.
ಈ ಬಗ್ಗೆ ವಿಧಾನಸಭೆಯ ಚರ್ಚೆ ವೇಳೆ ಪ್ರತಿಕ್ರಿಯಿಸಿದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ನಾಯ್ಡು, ‘ಕೇಂದ್ರವು ರಾಜ್ಯಕ್ಕೆ ₹15,000 ಕೋಟಿ ನೀಡುವ ಘೋಷಣೆ ಬಜೆಟ್‌ನಲ್ಲಿ ಮಾಡಿದೆ. ಮತ್ತೆ ಖುಷಿಯ ದಿನಗಳು ಬರುವ ಭರವಸೆ ಸಿಕ್ಕಿದೆ. ಅಮರಾವತಿ ಯೋಜನೆ ಪೂರ್ಣಗೊಂಡಿದ್ದರೆ ರಾಜ್ಯಕ್ಕೆ ₹2–3 ಲಕ್ಷ ಕೋಟಿಯ ಆಸ್ತಿ ಅಭಿವೃದ್ಧಿಯಾಗುತ್ತಿತ್ತು’ ಎಂದು ತಿಳಿಸಿದ್ದಾರೆ.
ಪೋಲಾವರಂ ನೀರಾವರಿ ಯೋಜನೆ ಪೂರ್ಣಗೊಳಿಸಲು ಭರವಸೆ ನೀಡಿರುವ ಕೇಂದ್ರವನ್ನು ಅಭಿನಂದಿಸಬೇಕಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.