
ನವದೆಹಲಿ: ಭಾರತ ಮೂಲದ ಡಾಟಾ ಕೇಂದ್ರಗಳನ್ನು ಬಳಸಿಕೊಂಡು ಕ್ಲೌಡ್ ಸೇವೆ ಒದಗಿಸುವ ವಿದೇಶಿ ಕಂಪನಿಗಳಿಗೆ 2047ರವರೆಗೆ ’ತೆರಿಗೆ ರಜೆ’ ಘೋಷಿಸಲಾಗಿದೆ. ದೇಶವನ್ನು ಡಿಜಿಟಲ್ ಮತ್ತು ಎಐ ಸಂಬಂಧಿತ ಪ್ರಮುಖ ಹಬ್ ಆಗಿ ಸೃಷ್ಟಿಸುವ ಗುರಿಯನ್ನು ಈ ಯೋಜನೆ ಒಳಗೊಂಡಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ಕ್ಷೇತ್ರದಲ್ಲಿ ಭಾರತವು ಕೇಂದ್ರ ಸ್ಥಾನಕ್ಕೆ ತಲುಪುತ್ತಿರುವ ಹೊತ್ತಿನಲ್ಲೇ ದೇಶದಲ್ಲಿ ಡಾಟಾ ಕೇಂದ್ರಗಳು ಬಂದಿವೆ ಎಂದೂ ತಿಳಿಸಲಾಗಿದೆ.
ಜಾಗತಿಕ ಗ್ರಾಹಕರಿಗೆ ನೀಡುವ ಸೇವೆಗೆ ತೆರಿಗೆ ಸವಲತ್ತನ್ನು ಒದಗಿಸುವ ಮೂಲಕ ಭಾರತವನ್ನು ಕ್ಲೌಡ್ ಕಂಪ್ಯೂಟಿಂಗ್ ರಫ್ತಿನ ಪ್ರಮುಖ ಹಬ್ ಆಗಿ ನಿರ್ಮಿಸುವ ಗುರಿಯನ್ನು ಯೋಜನೆ ಹೊಂದಿದೆ ಎಂದು ನಿರ್ಮಲಾ ಹೇಳಿದ್ದಾರೆ.
ನಿರ್ಣಾಯಕ ಮೂಲಸೌಕರ್ಯ ಮತ್ತು ಡಾಟಾ ಕೇಂದ್ರಗಳಲ್ಲಿ ಹೂಡಿಕೆ ಉತ್ತೇಜಿಸುವ ದೃಷ್ಟಿಯಿಂದ ಭಾರತದ ಡಾಟಾ ಕೇಂದ್ರಗಳನ್ನು ಬಳಸಿಕೊಂಡು ಜಾಗತಿಕ ಗ್ರಾಹಕರಿಗೆ ಕ್ಲೌಡ್ ಸೇವೆ ಒದಗಿಸುವ ಕಂಪನಿಗಳಿಗೆ 2047ರವರೆಗೆ ತೆರಿಗೆ ರಜೆ ನೀಡುವ ಪ್ರಸ್ತಾವನೆಯನ್ನು ನಾನು ಮುಂದಿಡುತ್ತಿದ್ದೇನೆ ಎಂದು ಬಜೆಟ್ ಭಾಷಣದ ವೇಳೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಆದರೆ, ಇವುಗಳು ಭಾರತೀಯ ಗ್ರಾಹಕರಿಗೆ ರೀಸೆಲ್ಲರ್ ಘಟಕಗಳ ಮೂಲಕ ಸೇವೆಗಳನ್ನು ಒದಗಿಸಬೇಕಾಗುತ್ತದೆ ಎಂದು ಹೇಳಿದರು.
ಬಲವರ್ಧಿತ ನೆಲೆಗಳನ್ನು ಹೋಲುವ ಈ ಡಾಟಾ ಕೇಂದ್ರಗಳು, ನಿರಂತರ ವಿದ್ಯುತ್ ಪೂರೈಕೆಯಿಂದ ಹಿಡಿದು ಅತ್ಯಾಧುಮಿಕ ಕೂಲಿಂಗ್ ಮತ್ತು ದಿನದ 24 ಗಂಟೆಗಳ ಮೇಲ್ವಿಚಾರಣೆಯವರೆಗೆ ವಿಶೇಷ ಮೂಲಸೌಕರ್ಯಗಳ ಮೇಲೆ ಕಾರ್ಯನಿರ್ವಹಿಸುತ್ತವೆ ಎಂದಿದ್ದಾರೆ.
ಎಐ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಡಿಜಿಟಲ್ ಪಾವತಿಗಳು ಬೆಳೆಯುತ್ತಿರುವುದರಿಂದ, ಡಾಟಾ ಕೇಂದ್ರಗಳು ರಸ್ತೆಗಳು ಮತ್ತು ವಿದ್ಯುತ್ ಸ್ಥಾವರಗಳಂತೆಯೇ ನಿರ್ಣಾಯಕವಾಗುತ್ತಿವೆ. ಇದು ಭಾರತದ ಡಿಜಿಟಲ್ ಆರ್ಥಿಕತೆಯ ಬೆನ್ನೆಲುಬಾಗಿ ರೂಪುಗೊಳ್ಳುತ್ತಿದೆ ಎಂದಿದ್ದಾರೆ.
ಮೊದಲ ಬಾರಿಗೆ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆಯನ್ನು ಆಯೋಜಿಸಲು ಪ್ರಯತ್ನಿಸುತ್ತುದೆ ಎಂದೂ ಹೇಳಿದ್ದಾರೆ.
ಎಐ ಮೂಲಸೌಕರ್ಯಕ್ಕೆ 70 ಬಿಲಿಯನ್ ಡಾಲರ್‌ನಷ್ಟು ಹೂಡಿಕೆಯನ್ನು ಈಗಾಗಲೇ ಮಾಡಲಾಗದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಈ ವಾರದ ಆರಂಭದಲ್ಲಿ ಹೇಳಿದ್ದರು.
ಕಳೆದ ವರ್ಷ ದೈತ್ಯ ಟೆಕ್ ಕಂಪನಿಗಳಾದ ಮೈಕ್ರೊಸಾಫ್ಟ್ ಮತ್ತು ಗೂಗಲ್ ಕಂಪನಿಗಳು ಭಾರತದಲ್ಲಿ ಎಐ ಮೂಲಸೌಕರ್ಯ ಮತ್ತು ಡಾಟಾ ಕೇಂದ್ರಗಳಿಗಾಗಿ ಹಲವು ಶತಕೋಟಿ ಡಾಲರ್ ಹೂಡಿಕೆ ಘೋಷಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.