ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಅರ್ಚಕರಿಗೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಿಕ್ಕಿದ್ದೇನು? ಎಂಬುದರ ಚಿತ್ರಣ ಇಲ್ಲಿದೆ.
ರಾಜ್ಯದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ 25,551 ಧಾರ್ಮಿಕ ಸಂಸ್ಥೆಗಳು ದೇವಾಲಯಗಳಲ್ಲಿರುವ ಅರ್ಚಕರಿಗೆ ಪ್ರಸ್ತುತ ಪಾವತಿಸುತ್ತಿರುವ ವಾರ್ಷಿಕ ತಸ್ತೀಕ್ ಮೊತ್ತವನ್ನು ₹60,000ರಿಂದ ₹72,000ಕ್ಕೆ ಹೆಚ್ಚಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಜೈನ ಅರ್ಚಕರು, ಸಿಖ್ಖ್ ಮುಖ್ಯಗ್ರಂಥಿಗಳು, ಮಸೀದಿಗಳ ಪೇಷ್ ಇಮಾಮ್‌ಗಳಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು ₹6,000ಕ್ಕೆ ಹೆಚ್ಚಿಸಲಾಗುವುದು. ಸಿಖ್ಖ್ ಸಹಾಯಕ ಗ್ರಂಥಿಗಳು ಹಾಗೂ ಮೋಝಿನ್‌ಗಳಿಗೆ ನೀಡುವ ಮಾಸಿಕ ಗೌರವಧನವನ್ನು ₹5,000ಕ್ಕೆ ಹೆಚ್ಚಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
*ಬಾಗಲಕೋಟೆ ಜಿಲ್ಲೆಯ ಇತಿಹಾಸ ಪ್ರಸಿದ್ಧ ಮತ್ತು ಪಾರಂಪರಿಕ ತಾಣವಾದ ಬಾದಾಮಿಯ ಚಾಲುಕ್ಯ ಉತ್ಸವದಲ್ಲಿ ನೃತ್ಯೋತ್ಸವ ಕಾರ್ಯಕ್ರಮವನ್ನು ₹2 ಕೋಟಿ ವೆಚ್ಚದಲ್ಲಿ ಆಯೋಜಿಸಲಾಗುವುದು.
* ಅಂತರರಾಷ್ಟ್ರೀಯ ಬಸವ ಆಧ್ಯಾತ್ಮಿಕ ಹಾಗೂ ವಚನ ಅಧ್ಯಯನ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪನೆ ಮಾಡಲು ತಾತ್ವಿಕ ಅನುಮೋದನೆ ನೀಡಿದ್ದು, ಈ ಬಗ್ಗೆ ತಜ್ಞರ ಸಮಿತಿಯನ್ನು ರಚಿಸಿ ವಿಸ್ತೃತ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು.
* ತಾಯಿ ಭುವನೇಶ್ವರಿಯ ಭವ್ಯವಾದ ಪ್ರತಿಮೆಯನ್ನು ರಾಜ್ಯದ ಆಡಳಿತ ಕೇಂದ್ರ ಸ್ಥಾನವಾದ ವಿಧಾನಸೌಧದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿದೆ.
* ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶ್ರೀ ಬೊಳುವಾರು ಮೊಹಮ್ಮದ್ ಕುಂಞಿ ಅವರ ‘ಸ್ವಾತಂತ್ರ್ಯದ ಓಟ’ ಕಾದಂಬರಿಯನ್ನು ₹1 ಕೋಟಿ ವೆಚ್ಚದಲ್ಲಿ ನಾಟಕ ರೂಪದಲ್ಲಿ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸಲಾಗುವುದು.
* ʻಕನ್ನಡ ಭಾರತಿʼ ಎನ್ನುವ ಪುಸ್ತಕ ಮಾಲಿಕೆಯಡಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಶ್ರೇಷ್ಠ ಸಾಧಕರ ಜೀವನವನ್ನು ಪರಿಚಯಿಸುವ ಪುಸ್ತಕಗಳನ್ನು₹50 ಲಕ್ಷ ವೆಚ್ಚದಲ್ಲಿ ಪ್ರಕಟಿಸಲಾಗುವುದು.
* ದಾವಣಗೆರೆಯ ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ಸ್ಥಾಪಿಸಲಾಗಿರುವ ವೃತ್ತಿರಂಗಭೂಮಿ ರಂಗಾಯಣದಲ್ಲಿ ₹3 ಕೋಟಿ ವೆಚ್ಚದಲ್ಲಿ ಮೂಲಭೂತ ಸೌಕರ್ಯ, ವೃತ್ತಿ ರಂಗಾಯಣ ಸಮುಚ್ಛಯ ಹಾಗೂ ಥಿಯೇಟರ್ ಮ್ಯೂಸಿಯಂ ನಿರ್ಮಾಣ ಮಾಡಲಾಗುವುದು.
* ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಟ್ರಸ್ಟ್‌ನ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು, ಬೆಂಗಳೂರಿನಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ₹1 ಕೋಟಿ ಅನುದಾನ ಒದಗಿಸಲಾಗುವುದು.
* ಸೇವಾದಳ ಸಂಸ್ಥಾಪಕ ಹಾಗೂ ಸ್ವಾತಂತ್ರ್ಯ ಸೇನಾನಿ ಪದ್ಮಭೂಷಣ ಡಾ|| ಎನ್.ಎಸ್. ಹರ್ಡೀಕರರವರ ಸ್ಮಾರಕವನ್ನು ಬೆಳಗಾವಿ ಜಿಲ್ಲೆಯ ಘಟಪ್ರಭಾದ ಆರೋಗ್ಯ ಧಾಮದಲ್ಲಿ ನಿರ್ಮಿಸಲು ₹2 ಕೋಟಿ ಒದಗಿಸಲಾಗುವುದು.
* ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ 2,500 ಪ್ರಾಚೀನ ತಾಳೆಗರಿಯ ಹಸ್ತಪ್ರತಿಗಳ ಡಿಜಿಟಲೀಕರಣ ಯೋಜನೆಯನ್ನು ₹1 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
* ಮತೀಯವಾದದಿಂದ ಪ್ರಭಾವಿತವಾಗುತ್ತಿರುವ ಇಂದಿನ ಯುವಜನತೆಗೆ ಸಾಮರಸ್ಯದಿಂದ ಬದುಕುವಂತೆ ಪ್ರೇರೇಪಿಸುವ ರಾಮ್ ಮನೋಹರ್ ಲೋಹಿಯಾ ಹಾಗೂ ಇತರ ಮಹನೀಯರ ಪುಸ್ತಕಗಳಲ್ಲಿನ ಸೌಹಾರ್ದತೆಯ ಅಂಶಗಳನ್ನು ಕ್ರೋಢೀಕರಿಸಿ ಕನ್ನಡ ಭಾಷೆಯಲ್ಲಿ ಪ್ರಕಟಿಸಲಾಗುವುದು. ಈ ಕುರಿತು ಕಮ್ಮಟ, ಕಾರ್ಯಾಗಾರಗಳನ್ನು ಏರ್ಪಡಿಸಲಾಗುವುದು.
* ಮೈಸೂರಿನ ರಂಗಾಯಣದ ಕಾರ್ಯಚಟುವಟಿಕೆಗಳಿಗೆ ₹2 ಕೋಟಿ ಅನುದಾನವನ್ನು ಒದಗಿಸಲಾಗುವುದು.
* ಸಂತ ಕವಿ ಕನಕದಾಸ ಮತ್ತು ತತ್ವ ಪದಕಾರರ ಅಧ್ಯಯನ ಕೇಂದ್ರಕ್ಕೆ ತತ್ವಪದ ಪಾರಿಭಾಷಿಕ ಪದಕೋಶದ ಸಿದ್ಧತೆ ಮತ್ತು ಪ್ರಕಟಣೆ ಕಾರ್ಯಕ್ಕಾಗಿ ₹1 ಕೋಟಿ ಒದಗಿಸಲಾಗುವುದು
* ಶಿಕ್ಷಣ ತಜ್ಞ, ಪದ್ಮಭೂಷಣ ಡಾ.ಹೆಚ್.ನರಸಿಂಹಯ್ಯನವರ ಸ್ಮರಣಾರ್ಥವಾಗಿ ಡಾ.ಹೆಚ್.ನರಸಿಂಹಯ್ಯ ಪ್ರಾಧಿಕಾರವನ್ನು ಸ್ಥಾಪಿಸಲಾಗುವುದು. ಅವರು ವ್ಯಾಸಂಗ ಮಾಡಿದ, ಗೌರಿಬಿದನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಉನ್ನತೀಕರಿಸಲಾಗುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.