ADVERTISEMENT

Budget 2024 | ನರೇಗಾ: ₹86 ಸಾವಿರ ಕೋಟಿ ಹಂಚಿಕೆ

ಪಿಟಿಐ
Published 1 ಫೆಬ್ರುವರಿ 2024, 14:43 IST
Last Updated 1 ಫೆಬ್ರುವರಿ 2024, 14:43 IST
   

ನವದೆಹಲಿ: ಗ್ರಾಮೀಣ ಜನರಿಗೆ ಉದ್ಯೋಗ ಖಾತ್ರಿ ನೀಡುವ ‘ನರೇಗಾ’ ಯೋಜನೆಗೆ 2024–25ರ ಬಜೆಟ್‌ನಲ್ಲಿ ₹ 86 ಸಾವಿರ ಕೋಟಿ ಹಂಚಿಕೆಯಾಗಿದೆ.

ಕಳೆದ ಸಾಲಿನ ಬಜೆಟ್‌ಗೆ ಹೋಲಿಸಿದರೆ ಅನುದಾನದ ಮೊತ್ತ ಶೇ 43ರಷ್ಟು ಹೆಚ್ಚಳವಾಗಿದೆಯಾದರೂ, ಹಾಲಿ ಹಣಕಾಸು ವರ್ಷದ ಪರಿಷ್ಕೃತ ಅಂದಾಜಿಗೆ ಹೋಲಿಸಿದರೆ ‘ನರೇಗಾ’ ಹಂಚಿಕೆಯಲ್ಲಿ ಯಾವುದೇ ಏರಿಕೆ ಕಂಡುಬಂದಿಲ್ಲ.

2023–24ರ ಸಾಲಿನಲ್ಲಿ ‘ನರೇಗಾ’ ಯೋಜನೆಗೆ ₹ 60 ಸಾವಿರ ಕೋಟಿ ಹಂಚಿಕೆ ಮಾಡಲಾಗಿತ್ತು. ಪರಿಷ್ಕೃತ ಅಂದಾಜಿನ ಪ್ರಕಾರ ಈ ಮೊತ್ತವು ₹ 86 ಸಾವಿರಕ್ಕೆ ಏರಿಕೆಯಾಗಿತ್ತು.

ADVERTISEMENT

ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ₹ 1.77 ಲಕ್ಷ ಕೋಟಿ ಹಂಚಿಕೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ (₹ 1.57 ಲಕ್ಷ ಕೋಟಿ) ಈ ಬಾರಿ ಶೇ 12 ರಷ್ಟು ಏರಿಕೆ ಕಂಡುಬಂದಿದೆ. ಆದರೆ, ಕಳೆದ ಬಾರಿಯ ಪರಿಷ್ಕೃತ ಅಂದಾಜಿಗೆ (₹ 1.71 ಲಕ್ಷ ಕೋಟಿ) ಹೋಲಿಸಿದರೆ ಹಂಚಿಕೆಯು ಶೇ 3 ರಷ್ಟು ಹೆಚ್ಚಳವಾಗಿದೆ.

ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬದ ಕನಿಷ್ಠ ಒಬ್ಬರಿಗೆ 100 ದಿನಗಳ ಉದ್ಯೋಗದ ಖಾತ್ರಿ ನೀಡಲಾಗುತ್ತದೆ.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ (ಗ್ರಾಮೀಣ) ಮುಂದಿನ ಐದು ವರ್ಷಗಳಲ್ಲಿ ಇನ್ನೂ ಎರಡು ಕೋಟಿ ಮನೆ ನಿರ್ಮಾಣ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದರು. ಈ ಯೋಜನೆಗೆ ₹ 54,500 ಕೋಟಿ ಹಂಚಿಕೆ ಮಾಡಲಾಗಿದೆ. 2023–24 ರಲ್ಲಿ ₹ 54,487 ಕೋಟಿ ಹಂಚಿಕೆ ಮಾಡಲಾಗಿತ್ತಾದರೂ, ಪರಿಷ್ಕೃತ ಅಂದಾಜಿನ ಬಳಿಕ ಈ ಮೊತ್ತವನ್ನು ₹ 32 ಸಾವಿರ ಕೋಟಿಗೆ ಕಡಿತಗೊಳಿಸಲಾಗಿತ್ತು.

ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಯ ಅನುದಾನಕ್ಕೆ ಕತ್ತರಿ ಹಾಕಲಾಗಿದೆ. ಈ ಬಾರಿ ₹ 12 ಸಾವಿರ ಕೋಟಿ ತೆಗೆದಿರಿಸಲಾಗಿದೆ. ಕಳೆದ ಬಜೆಟ್‌ನಲ್ಲಿ ₹ 19 ಸಾವಿರ ಕೋಟಿ ಹಂಚಿಕೆ ಮಾಡಲಾಗಿದ್ದರೆ, ಪರಿಷ್ಕೃತ ಮೊತ್ತವನ್ನು ₹ 17 ಸಾವಿರ ಕೋಟಿಗೆ ನಿಗದಿಪಡಿಸಲಾಗಿತ್ತು.

ಕೃಷಿ: ಅನುದಾನ ಹೆಚ್ಚಳ

ಕೃಷಿ ಸಚಿವಾಲಯಕ್ಕೆ ಕಳೆದ ಬಾರಿಗಿಂತ ಹೆಚ್ಚಿನ ಮೊತ್ತವನ್ನು ತೆಗೆದಿರಿಸಲಾಗಿದ್ದು, ₹ 1.27 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕೃಷಿ ಸಚಿವಾಲಯವು ₹ 1.17 ಲಕ್ಷ ಕೋಟಿ ಪಡೆಯಲಿದ್ದರೆ, ಕೃಷಿ ಸಂಶೋಧನಾ ಇಲಾಖೆಗೆ (ಡಿಎಆರ್‌ಇ) ₹ 9,941 ಕೋಟಿ ಹಂಚಿಕೆ ಮಾಡಲಾಗಿದೆ. 

ಹಾಲಿ ಹಣಕಾಸು ವರ್ಷದ ಪರಿಷ್ಕೃತ ಅಂದಾಜು ಪ್ರಕಾರ ಕೃಷಿ ಸಚಿವಾಲಯಕ್ಕೆ ₹ 1.16 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಗೆ ಕಳೆದ ಬಜೆಟ್‌ನಂತೆ ಈ ಬಾರಿಯೂ ₹ 60 ಸಾವಿರ ಕೋಟಿ ಹಂಚಿಕೆ ಮಾಡಲಾಗಿದೆ. ಈ ಯೋಜನೆಯಡಿ ರೈತರಿಗೆ ವರ್ಷದಲ್ಲಿ ಮೂರು ಕಂತುಗಳಲ್ಲಿ ಒಟ್ಟು ₹ 6 ಸಾವಿರ ಸಹಾಯಧನ ನೀಡಲಾಗುತ್ತಿದೆ.

‘ಪಿಎಂ–ಕಿಸಾನ್‌ ಯೋಜನೆಯಡಿ 11.8 ಕೋಟಿ ರೈತರಿಗೆ ನೇರ ಸಹಾಯಧನ ನೀಡಲಾಗಿದೆ. ಬೆಳೆ ವಿಮೆ ಯೋಜನೆಯಡಿ 4 ಕೋಟಿ ರೈತರು ನೆರವು ಪಡೆದಿದ್ದಾರೆ. ಪಿ.ಎಂ ಕಿಸಾನ್‌ ಸಂಪದ ಯೋಜನೆಯಿಂದ 38 ಲಕ್ಷ ರೈತರಿಗೆ ಪ್ರಯೋಜನವಾಗಿದ್ದು, 10 ಲಕ್ಷ ಉದ್ಯೋಗ ಸೃಷ್ಟಿಸಲಾಗಿದೆ’ ಎಂದು ಹಣಕಾಸು ಸಚಿವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.