ADVERTISEMENT

ಮಂಗಗಳ ಉಪಟಳಕ್ಕೆ ಬಜೆಟ್‌ ಮೂಲಕ ಮದ್ದು

ಅಡಿಕೆ ಬೆಳೆಗಾರರಿಗೆ ಶೇ 5ರ ಬಡ್ಡಿ ದರದಲ್ಲಿ ಸಾಲ, ನೀರಾವರಿಗೂ ಬಲ

ಚಂದ್ರಹಾಸ ಹಿರೇಮಳಲಿ
Published 5 ಮಾರ್ಚ್ 2020, 19:30 IST
Last Updated 5 ಮಾರ್ಚ್ 2020, 19:30 IST
ಬಿ.ವೈ.ರಾಘವೇಂದ್ರ
ಬಿ.ವೈ.ರಾಘವೇಂದ್ರ   

ಶಿವಮೊಗ್ಗ:ಮಲೆನಾಡಿನ ರೈತರ ಬೆಳೆಗಳನ್ನು ಹಾನಿ ಮಾಡುವ ಮೂಲಕ ಪ್ರತಿ ವರ್ಷ ಕೋಟ್ಯತರ ರೂಪಾಯಿ ನಷ್ಟ ಮಾಡುತ್ತಿದ್ದ ಮಂಗಗಳಉಪಟಳಕ್ಕೆ ಕಡಿವಾಣ ಹಾಕಲುಕೊನೆಗೂಸರ್ಕಾರ ಮನಸ್ಸು ಮಾಡಿದೆ.

ಹೊಸನಗರ ತಾಲ್ಲೂಕು ವ್ಯಾಪ್ತಿಯಲ್ಲಿ ‘ಮಂಕಿ ಪಾರ್ಕ್’ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ. ಪಾರ್ಕ್ ಮತ್ತು ಪುನರ್‌ವಸತಿಗಾಗಿ ₨ 1.25 ಕೋಟಿ ಘೋಷಿಸಲಾಗಿದೆ.

ಮಂಗಗಳ ಉಪಟಳದಿಂದ ಜಿಲ್ಲೆಯ ಸಾಗರ, ಹೊಸನಗರ, ತೀರ್ಥಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲೇ ಪ್ರತಿ ವರ್ಷ ₹ 10 ಕೋಟಿಗೂ ಅಧಿಕ ಬೆಳೆ ನಷ್ಟವಾಗುತ್ತಿದೆ. ಅಡಿಕೆ, ಏಲಕ್ಕಿ, ಬಾಳೆ, ಆ್ಯಪಲ್‌ ಬೇರ್, ಮೆಣಸು ಬೆಳೆಗಳು ನಾಶವಾಗಿವೆ. ಮಂಗನಕಾಯಿಲೆಗೆ ಸರ್ಕಾರಿ ಲೆಕ್ಕದ ಪ್ರಕಾರ 15 ಜನರು ಜೀವತೆತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಪರಿಣಾಮ ಮಂಗಗಳನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ಮಲೆನಾಡಿಗರು ಬೀದಿಗಿಳಿದಿದ್ದರು.

ADVERTISEMENT

ಮಂಗಗಳಿಗೆ ಪ್ರತ್ಯೇಕ ಪ್ರದೇಶ ಗುರುತಿಸಬೇಕು. ಅಲ್ಲಿ ವಿವಿಧ ಜಾತಿಯ ಹಣ್ಣುಹಂಪಲು ಸಸ್ಯಗಳನ್ನು ಬೆಳೆಸಬೇಕು. ನೀರು, ಆಹಾರ ಒಂದೇ ಕಡೆ ಸಿಕ್ಕರೆ ಅವು ಬೇರೆ ಪ್ರದೇಶಗಳಿಗೆ ವಲಸೆ ಬರುವುದಿಲ್ಲ. ಬೆಳೆ ನಾಶ ಮಾಡುವುದಿಲ್ಲ. ಹಾಗಾಗಿ, ‘ಮಂಕಿ ಪಾರ್ಕ್‌’ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದುಒತ್ತಾಯಿಸಿದ್ದರು.

ಒತ್ತಾಯಕ್ಕೆ ಸ್ಪಂದಿಸಿದ ಸರ್ಕಾರ ಹಣವನ್ನೇನೋ ನೀಡಿದೆ. ಇದು ಸದುಪಯೋಗವಾಗಬೇಕು. ಪಾರ್ಕ್ ಯಾವ ರೀತಿ ಇರಬೇಕು. ಅಲ್ಲಿ ಮಂಗಗಳು ನೆಲೆಗೊಳ್ಳಲು, ಮತ್ತೆ ಹೊರಗೆ ಹೋಗದಂತೆತಡೆಯಲುಯಾವ ರೀತಿಯ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲೇ ಮೊದಲ ಪ್ರಯತ್ನ ವಿಫಲವಾಗದಂತೆ ಕೈಗೊಳ್ಳಬೇಕಿರುವ ಕ್ರಮಗಳ ಕುರಿತು ಖಚಿತ ಯೋಜನೆ ರೂಪಿಸಬೇಕಿದೆ.

ಅಡಿಕೆ ಬೆಲೆ ಸ್ಥಿರತೆಗಿಲ್ಲ ಭರವಸೆ:

ಅಡಿಕೆ ಬೆಳೆಗಾರರಿಗೆ ಶೇ 5ರ ಬಡ್ಡಿದರಲ್ಲಿ ಗರಿಷ್ಠ ₨ 2 ಲಕ್ಷದವರೆಗೆ ಸಾಲನೀಡುವುದಾಗಿ ಭರವಸೆ ದೊರೆತಿದೆ. ಇದು ಸ್ವಾಗತಾರ್ಹ. ಆದರೆ, ಸಾಲಕ್ಕಿಂತ ಮುಖ್ಯವಾಗಿ ಬೆಳೆಗಾರರಿಗೆ ಬೇಕಿರುವುದು ಧಾರಣೆಯ ಸ್ಥಿರತೆ. ರೋಗ, ಅತಿವೃಷ್ಟಿಯಿಂದ ಆಗುವ ನಷ್ಟ ತುಂಬಿಕೊಡುವ ಭರವಸೆ. ಅಡಿಕೆ ಟಾಸ್ಕ್‌ಫೋರ್ಸ್‌ ಬಲ ವರ್ಧನೆಗೂ ಬಜೆಟ್‌ನಲ್ಲಿ ಅಗತ್ಯ ಅನುದಾನ ಮೀಸಲಿಟ್ಟಿಲ್ಲ.

ನೀರಾವರಿಗೆ ಮತ್ತಷ್ಟು ಒತ್ತು:

ಶಿಕಾರಿಪುರ, ಸೊರಬ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ₨ 1,300 ಕೋಟಿ ಬಿಡುಗಡೆ ಮಾಡಿದ್ದರು. ಮತ್ತೆ ಬಜೆಟ್‌ ಮೂಲಕಜಿಲ್ಲೆಯ ಸಮಗ್ರ ನೀರಾವರಿ ಯೋಜನೆಗಳಿಗೆ, ಕೆರೆ ತುಂಬಿಸುವ ಯೋಜನೆಗಳಿಗೆ ಅನುಕೂಲ ಕಲ್ಪಿಸಿದ್ದಾರೆ. ಜಲ ಸಂಪನ್ಮೂಲ ಇಲಾಖೆ ಮೂಲಕಅನುದಾನ ಒದಗಿಸಿದ್ದಾರೆ.

ಕೃಷಿ ವಿವಿಕಾಮಗಾರಿಗಳಿಗೆ₨ 155 ಕೋಟಿ:

ಜಿಲ್ಲೆಯ ಸಾಗರ ತಾಲ್ಲೂಕಿನ ಇರುವಕ್ಕಿಯ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಬಾಕಿ ಕಾಮಗಾರಿಗಳಿಗೆ₨ 155 ಕೋಟಿ ಹೆಚ್ಚುವರಿ ಅನುದಾನ ನೀಡಿದ್ದಾರೆ. ಆ ಮೂಲಕ ಮೂರು ವರ್ಷಗಳಿಂದಆಮೆಗತಿಯಲ್ಲಿಸಾಗಿದ್ದ ಕಾಮಗಾರಿಗಳಿಗೆ ವೇಗ ದೊರಕಲಿದೆ.

ಆಯುರ್ವೇದ ವಿವಿ ಬದಲು ಪಾರಂಪರಿಕ ಘಟಕ:

ಜಿಲ್ಲೆಯ ಜನರು ನಿರೀಕ್ಷಿಸಿದ್ದ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆಗೆ ಒಲವು ತೋರಿಲ್ಲ. ಬದಲಿಗೆಬುಡಕಟ್ಟು ಜನರ ಪಾರಂಪರಿಕ ವೈದ್ಯಪದ್ಧತಿ, ಆಚರಣೆಗಳ ದಾಖಲೀಕರಣ ಮತ್ತು ಆಯ್ದ ಔಷಧಗಳ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ₨ 2 ಕೋಟಿ ಅನುದಾನ ಮೀಸಲಿಡಲಾಗಿದೆ.

ಇತರೆ ಪ್ರಮುಖ ಘೋಷಣೆಗಳು:

ಜೋಗ ಜಲಪಾತ ಅಭಿವೃದ್ಧಿ ಸೇರಿದಂತೆ ಪ್ರವಾಸೋದ್ಯಮಕ್ಕೆ ₨ 500 ಕೋಟಿ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲೂ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಸ್ಥಾಪನೆ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವಯೋಜನೆ ಘೋಷಿಸಲಾಗಿದೆ.ಶರಾವತಿಹಿನ್ನೀರಿನಲ್ಲಿಜಲಸಾರಿಗೆ ಮಾರ್ಗಗಳು ಹಾಗೂ ದ್ವೀಪಗಳ ಅಭಿವೃದ್ಧಿಗೂ ಒತ್ತು ನೀಡಲಾಗಿದೆ.ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹಧಾಮಕ್ಕೆ ₨ 5 ಕೋಟಿ ಅನುದಾನ,ಶಿವಮೊಗ್ಗ–ಶಿಕಾರಿಪುರ– ರಾಣೆಬೆನ್ನೂರು ರೈಲ್ವೆ ಯೋಜನೆಗೆ ಶೇ 50ರಷ್ಟುಅನುದಾನಮೀಸಲಿರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.