ADVERTISEMENT

ರಾಷ್ಟ್ರಪತಿ ಭಾಷಣದೊಂದಿಗೆ ಜ. 31ರಿಂದ ಬಜೆಟ್‌ ಅಧಿವೇಶನ ಆರಂಭ; ಏ. 4ರವರೆಗೆ ಚರ್ಚೆ

ಪಿಟಿಐ
Published 28 ಜನವರಿ 2025, 10:15 IST
Last Updated 28 ಜನವರಿ 2025, 10:15 IST
<div class="paragraphs"><p>ಲೋಕಸಭೆ</p></div>

ಲೋಕಸಭೆ

   

ನವದೆಹಲಿ: ಪ್ರಸಕ್ತ ಬಜೆಟ್ ಅಧಿವೇಶನವು ಜ. 31ರಿಂದ ಆರಂಭವಾಗಲಿದ್ದು, ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಸೋಮವಾರದಿಂದ ನಡೆಯಲಿದೆ.

ನೂತನ ಸಂಸತ್ ಭವನದ ಲೋಕಸಭೆಯ ಸಭಾಂಗಣದಲ್ಲಿ ಉಭಯ ಸಧನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮಾತನಾಡಲಿದ್ದಾರೆ. ರಾಷ್ಟ್ರಪತಿ ಭಾಷಣದ ನಂತರ ಆರ್ಥಿಕ ಸಮೀಕ್ಷಾ ವರದಿಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಶುಕ್ರವಾರವೇ ಸಲ್ಲಿಕೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಬಜೆಟ್ ಮಂಡಿಸಲಿದ್ದಾರೆ.

ADVERTISEMENT

ರಾಷ್ಟ್ರಪತಿ ಅವರ ಭಾಷಣದ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ಫೆ. 3 ಮತ್ತು 4ರಂದು ಹಾಗೂ ರಾಜ್ಯಸಭೆಗೆ ಮೂರು ದಿನಗಳ ಅವಕಾಶ ನೀಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಫೆ. 6ರಂದು ಚರ್ಚೆಗೆ ಉತ್ತರಿಸುವ ಸಾಧ್ಯತೆ ಇದೆ.

ಬಜೆಟ್‌ ಅಧಿವೇಶನ ಸುಸೂತ್ರವಾಗಿ ನಡೆಯುವ ಉದ್ದೇಶದಿಂದ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಜ. 30ರಂದು ಸರ್ವ ಪಕ್ಷಗಳ ಮುಖಂಡರ ಸಭೆ ಕರೆದಿದ್ದಾರೆ. ಬಜೆಟ್ ಅಧಿವೇಶನದ ಮೊದಲ ಭಾಗ ಜ. 31ರಿಂದ ಫೆ. 13ರವರೆಗೆ ನಡೆಯಲಿದೆ. ಬಜೆಟ್‌ ಪ್ರಸ್ತಾವನೆಗಳನ್ನು ಪರಿಶೀಲಿಸುವ ಉದ್ದೇಶದಿಂದ ಫೆ. 13ರಿಂದ ಸಂಸತ್‌ ಅಧಿವೇಶಕ್ಕೆ ವಿರಾಮ ನೀಡಲಾಗಿದೆ.

ವಿವಿಧ ಇಲಾಖೆಗಳ ಸಚಿವರಿಂದ ಅನುದಾನ ಬೇಡಿಕೆ ಕುರಿತು ಮಾರ್ಚ್‌ 10ರಿಂದ ಚರ್ಚೆ ನಡೆಯಲಿದೆ. ಏ. 4ರಂದು ಬಜೆಟ್ ಅಧಿವೇಶನ ಅಂತ್ಯವಾಗಲಿದೆ. ಹೀಗಾಗಿ ಜ. 31ರಿಂದ ಏ. 4ರವರೆಗೆ ಒಟ್ಟು 27 ದಿನಗಳ ಕಾಲ ಚರ್ಚೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.