ADVERTISEMENT

ಇಂದಿನಿಂದ ಬಜೆಟ್‌ ಅಧಿವೇಶನ: ನಾಳೆ ಮಧ್ಯಂತರ ಬಜೆಟ್‌ ಮಂಡನೆ

* ಯಾವುದೇ ಹೊಸ ಘೋಷಣೆಗಳು ಇಲ್ಲ?

​ಪ್ರಜಾವಾಣಿ ವಾರ್ತೆ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
<div class="paragraphs"><p>ಹೊಸ ಸಂಸತ್‌ ಭವನ</p></div>

ಹೊಸ ಸಂಸತ್‌ ಭವನ

   

–ಪಿಟಿಐಚಿತ್ರ

ನವದೆಹಲಿ: ಸಂಸತ್ತಿನ ಬಜೆಟ್‌ ಅಧಿವೇಶನ ಬುಧವಾರ ಆರಂಭವಾಗಲಿದ್ದು, ಲೋಕಸಭಾ ಚುನಾವಣೆಗೆ ಮುನ್ನ ಮಧ್ಯಂತರ ಬಜೆಟ್‌ ಮಂಡಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಜ್ಜಾಗಿದೆ. 

ADVERTISEMENT

ಲೋಕಸಭೆ ಹಾಗೂ ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಧವಾರ ಭಾಷಣ ಮಾಡಲಿದ್ದಾರೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಗುರುವಾರ ಮಧ್ಯಂತರ ಬಜೆಟ್‌ ಮಂಡಿಸಲಿದ್ದಾರೆ. ಈ ಬಜೆಟ್‌ನಲ್ಲಿ ದೊಡ್ಡ ಘೋಷಣೆಗಳು ಇರುವುದಿಲ್ಲ ಎಂದು ನಿರ್ಮಲಾ ಅವರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ ನೂತನ ಸರ್ಕಾರ ಪೂರ್ಣ ಪ್ರಮಾಣದ ಬಜೆಟ್‌ ಮಂಡನೆ ಮಾಡಲಿದೆ. 

ರಾಷ್ಟ್ರಪತಿಯವರ ಭಾಷಣಕ್ಕೆ ಧನ್ಯವಾದ ಅರ್ಪಿಸುವ ನಿರ್ಣಯದ ಮೇಲಿನ ಚರ್ಚೆ ಶುಕ್ರವಾರ ಆರಂಭವಾಗಲಿದೆ. ಇದಕ್ಕೆ ಉಭಯ ಸದನಗಳಲ್ಲಿ ಪ್ರಧಾನಿಯವರು ಉತ್ತರ ನೀಡಿದ ನಂತರ, ಬಜೆಟ್ ಮೇಲೆ ಚರ್ಚೆ ನಡೆಯುವ ಸಾಧ್ಯತೆಯಿದೆ.

17ನೇ ಲೋಕಸಭೆಯ ಅವಧಿಯಲ್ಲಿ ಉಪಸಭಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯೇ ನಡೆದಿಲ್ಲ. ಸಂವಿಧಾನದ 93ನೇ ವಿಧಿಯ ಪ್ರಕಾರ, ಉಪಸಭಾಧ್ಯಕ್ಷರ ಆಯ್ಕೆ ಮಾಡುವುದು ಕಡ್ಡಾಯ. ಲೋಕಸಭೆಯ  ಅವಧಿಯಲ್ಲಿ ಉಪಸಭಾಪತಿಯನ್ನು ಆಯ್ಕೆ ಮಾಡದೇ ಇರುವುದು ಇದೇ ಮೊದಲು.

ಅಧಿವೇಶನದ ಮುನ್ನ ರಕ್ಷಣಾ ಸಚಿವ ರಾಜನಾಥ ಸಿಂಗ್‌ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಮಂಗಳವಾರ ನಡೆಯಿತು. ಸುಗಮ ಕಲಾಪ ನಡೆಸಲು ಎಲ್ಲ ಪಕ್ಷಗಳ ಸಹಕಾರವನ್ನು ಸರ್ಕಾರ ಕೋರಿತು. ಸಭೆಯ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ಸೌಹಾರ್ದಯುತವಾಗಿ ಸರ್ವಪಕ್ಷ ಸಭೆ ನಡೆದಿದೆ. ಅಧಿವೇಶನದಲ್ಲಿ ಪ್ರತಿಯೊಂದು ವಿಷಯದ ಚರ್ಚೆಗೆ ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು. 

ರಾಜ್ಯಸಭೆಯ ಕಾಂಗ್ರೆಸ್‌ ಉಪನಾಯಕ ‍ಪ್ರಮೋದ್‌ ತಿವಾರಿ, ‘ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೊ ನ್ಯಾಯ ಯಾತ್ರೆಯ ಮೇಲೆ ಅಸ್ಸಾಂನಲ್ಲಿ ಹಿಂಸಾತ್ಮಕ ದಾಳಿ ನಡೆಸಲಾಗಿದೆ. ಹೇಮಂತ್‌ ಸೊರೇನ್‌, ಲಾಲೂ ಪ್ರಸಾದ್‌ ಅವರಂತಹ ನಾಯಕರನ್ನು ಹಣಿಯಲು ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ವಿಷಯಗಳನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ’ ಎಂದು ಮಾಹಿತಿ ನೀಡಿದರು. 

ಲೋಕಸಭೆಯ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಚಳಿಗಾಲದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದ್ದ ವಿರೋಧ ಪಕ್ಷಗಳ 146 ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಅದರಲ್ಲಿ ರಾಜ್ಯಸಭೆಯ 11 ಹಾಗೂ ಲೋಕಸಭೆಯ ಮೂವರು ಸದಸ್ಯರ ನಡವಳಿಕೆ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ಒಪ್ಪಿಸಲಾಗಿತ್ತು. ತಮ್ಮ ವರ್ತನೆ ಬಗ್ಗೆ ಈ ಸದಸ್ಯರು ವಿಷಾದ ವ್ಯಕ್ತಪಡಿಸಿದ್ದಾರೆ. ಹೀಗಾಗಿ, ಎಲ್ಲ ಸದಸ್ಯರಿಗೂ ಬುಧವಾರದಿಂದ ನಡೆಯಲಿರುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ. ಎಲ್ಲ ಸದಸ್ಯರ ಅಮಾನತು ಆದೇಶವನ್ನು ಲೋಕಸಭಾಧ್ಯಕ್ಷ ಮತ್ತು ರಾಜ್ಯಸಭಾ ಸಭಾಪತಿ ವಾಪಸ್‌ ಪಡೆದಿದ್ದಾರೆ ಎಂದು ಸಚಿವ ಜೋಶಿ ಪ್ರಕಟಿಸಿದರು.

ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಪಕ್ಷವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಬಿಹಾರದಲ್ಲಿ ಸರ್ಕಾರವನ್ನೂ ರಚಿಸಿರುವ ಎನ್‌ಡಿಎ ಹೊಸ ಉತ್ಸಾಹದೊಂದಿಗೆ ಅಧಿವೇಶನಕ್ಕೆ ಹಾಜರಾಗುತ್ತಿದೆ.

ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ.ವೇಣುಗೋಪಾಲ್‌, ಜೈರಾಮ್‌ ರಮೇಶ್ ಅವರು ಕಲಾಪಕ್ಕೆ ಗೈರುಹಾಜರಾಗುವ ಸಂಭವ ಇದೆ. 

* ಪ್ರಸಕ್ತ ಲೋಕಸಭಾ ಅವಧಿಯ ಕೊನೆಯ ಅಧಿವೇಶನ. ಚುನಾವಣಾ ಸಿದ್ಧತೆಗೆ ಬಳಸಿಕೊಳ್ಳಲು ಹವಣಿಕೆ

* ಉಪಸಭಾಪತಿಯೇ ಇಲ್ಲದ ಮೊದಲ ಲೋಕಸಭಾ ಅವಧಿಯಾಗಿ ಚರಿತ್ರೆಯಲ್ಲಿ ದಾಖಲು

* ಕಳೆದ ಅಧಿವೇಶನದಲ್ಲಿ ಅಮಾನತುಗೊಂಡಿದ್ದ ಎಲ್ಲ ಸದಸ್ಯರಿಗೂ ಪಾಲ್ಗೊಳ್ಳಲು ಅವಕಾಶ

* ಭಾರತ್‌ ಜೋಡೊ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಂಡಿರುವ ಪ್ರಮುಖ ಕಾಂಗ್ರೆಸ್‌ ಮುಖಂಡರ ಗೈರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.