ನವದೆಹಲಿ: ಈ ಸಾಲಿನ ಬಜೆಟ್‌ನಲ್ಲಿ ಜನಗಣತಿ ಉದ್ದೇಶಕ್ಕೆ ಕೇವಲ ₹574.80 ಕೋಟಿ ಹಣ ಹಂಚಿಕೆ ಮಾಡಲಾಗಿದೆ. ಈ ಪ್ರಸ್ತಾವದ ಆಧಾರದಲ್ಲಿ ಹೇಳುವುದಾದರೆ ಈ ವರ್ಷ ದೇಶದಾದ್ಯಂತ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯೆ ನೋಂದಣಿ (ಎನ್‌ಪಿಆರ್) ಪರಿಷ್ಕರಣೆ ನಡೆಯುವ ಸಾಧ್ಯತೆ ಕಡಿಮೆ.
2019ರ ಡಿಸೆಂಬರ್ 24ರಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2021ರಲ್ಲಿ₹8,754.23 ಕೋಟಿ ವೆಚ್ಚದಲ್ಲಿ ಜನಗಣತಿ ಮತ್ತು ₹3,941.35 ಕೋಟಿ ವೆಚ್ಚದಲ್ಲಿ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯ ಪರಿಷ್ಕರಣೆ ನಡೆಸಲು ಒಪ್ಪಿಗೆ ಸೂಚಿಸಿತ್ತು.
ದೇಶದಾದ್ಯಂತ 2020ರ ಏಪ್ರಿಲ್ 1ರಿಂದ ಸೆಪ್ಟೆಂಬರ್ 30ರ ನಡುವೆ ಮನೆ ಮನೆಗೆ ತೆರಳಿ ಜನಗಣತಿ ಮತ್ತು ಎನ್‌ಪಿಆರ್ ಪರಿಷ್ಕರಿಸುವ ಕಾರ್ಯ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿತ್ತು. ಆದರೆ, ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದ ಅದನ್ನು ಮುಂದೂಡಲಾಗಿತ್ತು.
ಕೋವಿಡ್ ಹಾವಳಿ ಮುಗಿದ ನಂತರವೂ ಜನಗಣತಿಯನ್ನು ತಡೆ ಹಿಡಿಯಲಾಗಿದ್ದು, ಸರ್ಕಾರ ಹೊಸ ವೇಳಾಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿರುವ 2025–26ನೇ ಸಾಲಿನ ಬಜೆಟ್‌ನಲ್ಲಿ, ಜನಗಣತಿ, ಸಮೀಕ್ಷೆಗಳು ಮತ್ತು ಸಾಂಖ್ಯಿಕ/ಭಾರತೀಯ ರಿಜಿಸ್ಟ್ರಾರ್ ಜನರಲ್‌ಗೆ ₹575.80 ಕೋಟಿ ಹಂಚಿಕೆ ಮಾಡುವ ಘೋಷಣೆ ಮಾಡಲಾಗಿದೆ. 2021–22ರ ಬಜೆಟ್‌ಗೆ ಹೋಲಿಸಿದರೆ ಮೀಸಲಿಟ್ಟ ಅನುದಾನದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿತ ಮಾಡಲಾಗಿದೆ. ಆ ವರ್ಷ ₹3,768 ಕೋಟಿ ಹಂಚಿಕೆ ಮಾಡಲಾಗಿತ್ತು. ಕಳೆದ ವರ್ಷ (2024–25) ₹572 ಕೋಟಿ ಮೀಸಲಿಡಲಾಗಿತ್ತು.
ಅಧಿಕಾರಿಗಳ ಪ್ರಕಾರ, ಜನಗಣತಿ ಮತ್ತು ಎನ್‌ಪಿಆರ್ ಪ್ರಕ್ರಿಯೆಗೆ ₹12 ಸಾವಿರ ಕೋಟಿಗೂ ಹೆಚ್ಚು ವೆಚ್ಚವಾಗಲಿದೆ.
ಡಿಜಿಟಲ್ ಜನಗಣತಿ:
ಜನಗಣತಿ ಯಾವಾಗ ನಡೆದರೂ, ಈ ಬಾರಿಯದ್ದು ಮೊದಲ ಡಿಜಿಟಲ್ ಜನಗಣತಿಯಾಗಿರಲಿದೆ. ದೇಶದ ಪ್ರಜೆಗಳಿಗೆ ವಿವರಗಳನ್ನು ಸ್ವತಃ ನಮೂದಿಸಲು ಇದು ಅವಕಾಶ ನೀಡಲಿದೆ.
ಸರ್ಕಾರದ ಗಣತಿಗಾರರ ಬದಲಿಗೆ ತಾವೇ ಗಣತಿಯ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಬಯಸಿದ ನಾಗರಿಕರು ರಾಷ್ಟ್ರೀಯ ಜನಸಂಖ್ಯೆ ನೋಂದಣಿ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ ಸ್ವಯಂ–ಗಣತಿ ಪೋರ್ಟಲ್ ಅನ್ನು ರೂಪಿಸಿದೆ. ಆದರೆ, ಅದಿನ್ನೂ ಉದ್ಘಾಟನೆಯಾಗಿಲ್ಲ. ಸ್ವಯಂ–ಗಣತಿ ವೇಳೆ ಆಧಾರ್ ಸಂಖ್ಯೆ ಅಥವಾ ಮೊಬೈಲ್ ನಂಬರ್ ವಿವರವನ್ನು ಕಡ್ಡಾಯವಾಗಿ ಸಂಗ್ರಹಿಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.