ನವದೆಹಲಿ: ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಬರುವ ಪ್ರತಿ ಒಂದು ರೂಪಾಯಿಯ ಆದಾಯದಲ್ಲಿ ನೇರ ಮತ್ತು ಪರೋಕ್ಷ ತೆರಿಗೆಯಿಂದ 63 ಪೈಸೆ ಹರಿದು ಬರಲಿದೆ.
ಸಾಲ ಮತ್ತು ಇತರೆ ಮೂಲಗಳಿಂದ 27 ಪೈಸೆ, ಬಂಡವಾಳ ಹಿಂತೆಗೆತ ಸೇರಿ ತೆರಿಗೆಯೇತರ ವರಮಾನ 9 ಪೈಸೆ ಮತ್ತು ಸಾಲವಲ್ಲದ ಬಂಡವಾಳದಿಂದ 1 ಪೈಸೆಯು ಖಜಾನೆಗೆ ಸೇರಲಿದೆ ಎಂದು ಬಜೆಟ್‌ನಲ್ಲಿ ವಿವರಿಸಲಾಗಿದೆ.
ಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯ ತೆರಿಗೆ ಒಳಗೊಂಡ ನೇರ ತೆರಿಗೆಯಿಂದ 36 ಪೈಸೆ ದೊರೆಯಲಿದೆ. ಈ ಪೈಕಿ ವೈಯಕ್ತಿಕ ಆದಾಯ ತೆರಿಗೆದಾರರು ನೀಡುವ ತೆರಿಗೆ ಪಾಲು 19 ಪೈಸೆ ಹಾಗೂ ಕಾರ್ಪೊರೇಟ್ ತೆರಿಗೆ ಪಾಲು 17 ಪೈಸೆ ಆಗಿದೆ.
ಪರೋಕ್ಷ ತೆರಿಗೆ ಲೆಕ್ಕಾಚಾರ:
ಪರೋಕ್ಷ ತೆರಿಗೆಗಳ ಪೈಕಿ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ಬೊಕ್ಕಸಕ್ಕೆ ಪ್ರತಿ ಒಂದು ರೂಪಾಯಿಯಲ್ಲಿ 18 ಪೈಸೆ ಸೇರ್ಪಡೆಯಾಗುತ್ತದೆ. ಅಬಕಾರಿ ಸುಂಕದಿಂದ 5 ಪೈಸೆ ಮತ್ತು ಕಸ್ಟಮ್ಸ್ ಸುಂಕದಿಂದ 4 ಪೈಸೆಯು ಖಜಾನೆಗೆ ಹರಿದು ಬರಲಿದೆ.
ಸಾಲ ಮತ್ತು ಇತರೆ ಮೂಲಗಳಿಂದ 27 ಪೈಸೆಯನ್ನು ಖಜಾನೆಗೆ ಸೇರಿಸಲಾಗುತ್ತದೆ.
ಖರ್ಚಿನ ಲೆಕ್ಕಾಚಾರದಲ್ಲಿ ಬಡ್ಡಿ ಪಾವತಿ ಮತ್ತು ರಾಜ್ಯಗಳ ತೆರಿಗೆ ಪಾಲು ಕ್ರಮವಾಗಿ 19 ಪೈಸೆ ಮತ್ತು 21 ಪೈಸೆ ಆಗಿದೆ. ರಕ್ಷಣಾ ಇಲಾಖೆಗೆ 8 ಪೈಸೆ ನಿಗದಿಪಡಿಸಲಾಗಿದೆ.
ಪ್ರತಿ ರೂಪಾಯಿಯಲ್ಲಿ 16 ಪೈಸೆಯು ಕೇಂದ್ರ ವಲಯದ ಯೋಜನೆಗಳ ವೆಚ್ಚಕ್ಕೆ ಮೀಸಲಾಗಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ವೆಚ್ಚ 8 ಪೈಸೆ ಆಗಿದೆ.
ಆರ್ಥಿಕ ಆಯೋಗ ಮತ್ತು ಇತರೆ ವರ್ಗಾವಣೆಗೆ 9 ಪೈಸೆ, ಸಬ್ಸಿಡಿಗೆ 6 ಪೈಸೆ, ಪಿಂಚಣಿಗೆ 4 ಪೈಸೆ ಹಾಗೂ ಇತರೆ ಖರ್ಚುಗಳಿಗೆ 9 ಪೈಸೆಯನ್ನು ವ್ಯಯ ಮಾಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.