ADVERTISEMENT

ಆತ್ಮನಿರ್ಭರ ಬಜೆಟ್: ಸಮಗ್ರ ಪ್ರಗತಿಗೆ ಪೂರಕವಾಗಿದೆ: ನಳಿನ್‍ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 10:32 IST
Last Updated 1 ಫೆಬ್ರುವರಿ 2022, 10:32 IST
ನಳಿನ್‍ಕುಮಾರ್ ಕಟೀಲ್
ನಳಿನ್‍ಕುಮಾರ್ ಕಟೀಲ್   

ಬೆಂಗಳೂರು: ಈ ಬಾರಿಯ ಬಜೆಟ್‍ನಲ್ಲಿ ಪ್ರಧಾನಿ ಗತಿ ಶಕ್ತಿ ಯೋಜನೆ, ಅಂತರ್ಗತ ಅಭಿವೃದ್ಧಿ, ಉತ್ಪಾದಕತೆ ಹೆಚ್ಚಳ, ಅಭಿವೃದ್ಧಿ ಅವಕಾಶ ಹೆಚ್ಚಳ, ಶಕ್ತಿ ಪರಿವರ್ತನೆ, ಹವಾಮಾನ ಸಂಬಂಧಿತ ಪ್ರಕ್ರಿಯೆ, ಹೂಡಿಕೆಗೆ ಹಣಕಾಸು ನೀಡಿಕೆ ಇದ್ದು ಇದೊಂದು ಆತ್ಮನಿರ್ಭರ ಬಜೆಟ್ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ಪಿಎಂ ಗತಿಶಕ್ತಿ ಯೋಜನೆಯನ್ನು ರಸ್ತೆ, ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಸಾರಿಗೆ ಮತ್ತು ಲಾಜಿಸ್ಟಿಕ್ ಇನ್‍ಫ್ರಾ ಎಂದು 7 ವಿಭಾಗಗಳನ್ನಾಗಿ ಮಾಡಿದ್ದು ಇದು ಸಮಗ್ರ ಪ್ರಗತಿಗೆ ಪೂರಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದಲ್ಲದೆ 14 ವಿವಿಧ ಕ್ಷೇತ್ರಗಳಲ್ಲಿ ಉತ್ಪಾದಕತೆಗೆ ಪೂರಕ ಹೂಡಿಕೆ (ಪಿಎಲ್‍ಐ) ಯೋಜನೆಗಳ ಮೂಲಕ 60 ಲಕ್ಷ ಹೊಸ ಉದ್ಯೋಗ ಸೃಷ್ಟಿಯಾಗಲಿದೆ. ಇದು ₹ 30 ಲಕ್ಷ ಕೋಟಿ ಹೆಚ್ಚುವರಿ ಹೊಸ ಉತ್ಪಾದಕತೆಗೆ ಪೂರಕ ಎಂದು ಅವರು ವಿವರಿಸಿದ್ದಾರೆ.

ADVERTISEMENT

ಸರ್ವಸ್ಪರ್ಶಿ ಸರ್ವವ್ಯಾಪಿ ಪ್ರಗತಿದಾಯಕ ಬಜೆಟ್ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ 5 ಟ್ರಿಲಿಯನ್ ಅಮೆರಿಕಾದ ಡಾಲರ್ ಆರ್ಥಿಕ ಶಕ್ತಿಯತ್ತ ಭಾರತ ಮುನ್ನಡೆಯುವುದು ಖಚಿತ ಎಂದು ಆಶಿಸಿದ್ದಾರೆ.

ಮುಂದಿನ 25 ವರ್ಷಗಳಲ್ಲಿ ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ದೇಶವಾಗುವತ್ತ ಭಾರತ ಮುನ್ನಡೆಯಲಿದೆ. ಇದರಿಂದ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದ್ದಾರೆ.

ಜಿಡಿಪಿಯ ಶೇ 35 ಅನ್ನು ಮೂಲಸೌಕರ್ಯ ಕ್ಷೇತ್ರಕ್ಕೆ ನೀಡಿರುವುದು ಅಭಿವೃದ್ಧಿಗೆ ಪೂರಕ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ನದಿ ಜೋಡಣೆಗೆ ಮುಂದಾಗಿರುವುದು ನೀರಿನ ಸದ್ಬಳಕೆಗೆ ಪೂರಕ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಕೃಷಿ ವಲಯದಲ್ಲಿ ಡ್ರೋನ್ ಬಳಕೆಗೆ ಕೇಂದ್ರ ಮುಂದಾಗಿದೆ. ಬೆಳೆ ದಾಖಲು, ಬೆಳೆ ಮೌಲ್ಯಮಾಪನಕ್ಕೆ ಹಾಗೂ ಕೀಟನಾಶಕಗಳನ್ನು ಸಿಂಪಡಿಸಲು ಕಿಸಾನ್ ಡ್ರೋನ್ ಬಳಕೆ ಉತ್ತೇಜಿಸಲು ಮುಂದಾಗಿರುವುದು ಮಹತ್ವದ ಕ್ರಮ ಎಂದು ಅವರು ತಿಳಿಸಿದ್ದಾರೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.