ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ಕಾಲು ನೋವಿನ ಕಾರಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ವರ್ಷಗಳಲ್ಲಿ ಇದೇ ಮೊದಲ ಬಾರಿ ಕುಳಿತುಕೊಂಡೇ ಬಜೆಟ್ ಭಾಷಣದ ಪ್ರತಿಯನ್ನು ಓದಿದರು. 178 ಪುಟಗಳ ಬಜೆಟ್ ಪ್ರತಿಯನ್ನು 3 ಗಂಟೆ 25 ನಿಮಿಷಗಳಲ್ಲಿ ಓದಿ ಮುಗಿಸಿದರು.
ಶುಕ್ರವಾರ ಬೆಳಿಗ್ಗೆ 10.10ರ ಸುಮಾರಿಗೆ ಸಚಿವರು, ಶಾಸಕರ ಗುಂಪಿನೊಂದಿಗೆ ಮುಖ್ಯಮಂತ್ರಿಯವರು ವಿಧಾನಸಭೆ ಪ್ರವೇಶಿಸಿದರು. ವಸತಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಅವರು ಬಜೆಟ್ ಭಾಷಣದ ಪ್ರತಿ ಇದ್ದ ಬ್ಯಾಗ್ ಹಿಡಿದು ಜೊತೆಯಲ್ಲೇ ಬಂದರು.
10.16ಕ್ಕೆ ಬಜೆಟ್ ಮಂಡನೆ ಆರಂಭಿಸಿದ ಸಿದ್ದರಾಮಯ್ಯ ಅವರು, ಎರಡು ಪುಟಗಳನ್ನು ಪೂರ್ಣಗೊಳಿಸಿದ ಬಳಿಕ ಕುಳಿತು ಓದಲು ಸಭಾಧ್ಯಕ್ಷ ಯು.ಟಿ. ಖಾದರ್ ಅವರ ಅನುಮತಿ ಕೋರಿದರು. ಸಭಾಧ್ಯಕ್ಷರು ಒಪ್ಪಿಗೆ ಸೂಚಿಸಿದರು. ಬಳಿಕ ಕುರ್ಚಿಯಲ್ಲಿ ಕುಳಿತ ಮುಖ್ಯಮಂತ್ರಿ ಮಧ್ಯಾಹ್ನ 1.41ರವರೆಗೂ ಬಜೆಟ್ ಮಂಡಿಸಿದರು. ಪ್ರಮುಖ ಯೋಜನೆಗಳು, ನಿರ್ಧಾರವನ್ನು ಪ್ರಕಟಿಸಿದಾಗ ಕಾಂಗ್ರೆಸ್ ಸದಸ್ಯರು ಮೇಜು ಕುಟ್ಟಿ ಅಭಿನಂದಿಸಿದರು.
ಸುದೀರ್ಘವಾಗಿ ಬಜೆಟ್ ಓದಿ ಮುಗಿಸುವಾಗ ಮುಖ್ಯಮಂತ್ರಿಯವರು ಬಳಲಿದಂತೆ ಕಂಡರು. ಬಜೆಟ್ ಮಂಡನೆ ಮುಕ್ತಾಯವಾದ ಬಳಿಕ ಸಚಿವರು, ಶಾಸಕರು ಮುಖ್ಯಮಂತ್ರಿಯವರ ಬಳಿ ತೆರಳಿ ಅಭಿನಂದಿಸಿದರು.
ನಿದ್ದೆಗೆ ಜಾರಿದ ಡಿಕೆಶಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯವರ ಪಕ್ಕದ ಆಸನದಲ್ಲೇ ಕುಳಿತಿದ್ದರು. ಮಧ್ಯಾಹ್ನ 12.25ರ ಸುಮಾರಿಗೆ ಶಿವಕುಮಾರ್ ನಿದ್ದೆಗೆ ಜಾರಿದರು. ಕೆಲ ಸಮಯದ ಬಳಿಕ ಎಚ್ಚರಗೊಂಡರು.
ಪ್ರತಿಪಕ್ಷಗಳಲ್ಲಿ ಮೌನ: ಬಜೆಟ್ ಮಂಡನೆಯುದ್ದಕ್ಕೂ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮೌನದಿಂದ ಇದ್ದರು. ಕೊನೆಯಲ್ಲಿ ಕೆಲವು ಸದಸ್ಯರಷ್ಟೇ ಬಜೆಟ್ ವಿರುದ್ಧ ಘೋಷಣೆ ಕೂಗುವ ಯತ್ನ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.