ಕಾಡಾನೆ ಹಿಂಡು
ಬೆಂಗಳೂರು: ಅರಣ್ಯದಂಚಿನ ಪ್ರದೇಶಗಳಲ್ಲಿನ ಮಾನವ – ಪ್ರಾಣಿ ಸಂಘರ್ಷ ತಡೆಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲ ಘೋಷಣೆಗಳನ್ನು ಮಾಡಿದ್ದಾರೆ. ಜತೆಗೆ ಅರಣ್ಯ ಪ್ರದೇಶಗಳ ಹೆಚ್ಚಳಕ್ಕೆ ‘ಹಸಿರು ಕವಚ’ ಯೋಜನೆಯನ್ನೂ ಘೋಷಿಸಿದ್ದಾರೆ.
ರಾಜ್ಯದಲ್ಲಿ ಕಾಡಾನೆ ಹಾಗೂ ಚಿರತೆ ಹಾವಳಿಯನ್ನು ನಿಯಂತ್ರಿಸಲು ಈಗಾಗಲೇ ಎಂಟು ಆನೆ ಕಾರ್ಯಪಡೆ ಹಾಗೂ ಎರಡು ಚಿರತೆ ಕಾರ್ಯಪಡೆಗಳನ್ನು ರಚಿಸಿದ್ದು, 2025–26ನೇ ಸಾಲಿನಲ್ಲಿ ₹ 17 ಕೋಟಿ ಒದಗಿಸುವ ಮೂಲಕ ಕಾರ್ಯ ಯೋಜನೆಯನ್ನು ಮುಂದುವರೆಸಿಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.
* ಮಾನವ-ಆನೆ ಸಂಘರ್ಷ ತಡೆಗಟ್ಟಲು 2015ರಿಂದ ಇಲ್ಲಿಯವರೆಗೆ 392 ಕಿ.ಮೀ. ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಇನ್ನೂ 150 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಕಾಮಗಾರಿಗಳಿಗಾಗಿ 2025-26ನೇ ಸಾಲಿನಲ್ಲಿ ₹ 60 ಕೋಟಿ ಮೀಸಲಿಡಲಾಗಿದೆ.
* ಕರ್ನಾಟಕದಲ್ಲಿ ಮಾನವ-ಆನೆ ಸಂಘರ್ಷದ ಸಮಸ್ಯೆಯನ್ನು ಪರಿಹರಿಸಲು ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 20 ಚದರ ಕಿ.ಮೀ ವ್ಯಾಪ್ತಿಯಲ್ಲಿ ʻಕಾಡಾನೆ Soft Release ಕೇಂದ್ರʼ ವನ್ನು ಸ್ಥಾಪಿಸಲು ₹ 20 ಕೋಟಿ ನೀಡಲಾಗುವುದು.
* ಕೃಷಿ ಅರಣ್ಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಇಂಗಾಲದ ಸಂಗ್ರಹಣಾ ಸಾಮರ್ಥ್ಯ ಹೆಚ್ಚಾಗಿರುವ ಸಸ್ಯ ಪ್ರಭೇದಗಳನ್ನು ಬೆಳೆಸಲು ʻಕೃಷಿ ಅರಣ್ಯ ಮತ್ತು ಕಾರ್ಬನ್ ಕ್ರೆಡಿಟ್ʼ ನೀತಿಯ ಮೂಲಕ ರೈತರ ಆರ್ಥಿಕ ಬಲವರ್ಧನೆಗೆ ಕ್ರಮ.
* ವಿವಿಧ ಕಾರ್ಯಕ್ರಮದಡಿ ಅರಣ್ಯ ಪ್ರದೇಶದಲ್ಲಿ 28,494 ಹೆಕ್ಟೇರ್‌ನಲ್ಲಿ 213 ಲಕ್ಷ ಸಸಿಗಳನ್ನು ಹಾಗೂ ಅರಣ್ಯೇತರ ಪ್ರದೇಶದಲ್ಲಿ 1,200 ಹೆಕ್ಟೇರ್‌ನಲ್ಲಿ 3.50 ಲಕ್ಷ ಸಸಿಗಳನ್ನು ಬೆಳೆಸಿ ನೆಡುತೋಪುಗಳನ್ನು ನಿರ್ವಹಣೆ ಮಾಡುವ ಮೂಲಕ
ʻಹಸಿರು ಕವಚʼವನ್ನು ಹೆಚ್ಚಿಸಲಾಗುವುದು.
* ಹವಾಮಾನ ಬದಲಾವಣೆಯ ಪರಿಣಾಮವನ್ನು ನಿಯಂತ್ರಿಸಲು ಪರಿಸರದ ಮೇಲೆ ಕಾಳಜಿ ಹೊಂದಿರುವ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಸ್ವಯಂ ಸೇವಕರ ಸಹಯೋಗದೊಂದಿಗೆ ʻಕರ್ನಾಟಕ ಅರಣ್ಯ, ವನ್ಯಜೀವಿ ಮತ್ತು ಹವಾಮಾನ ಬದಲಾವಣೆ ಪ್ರತಿಷ್ಠಾನʼ (KFWCCMF) ವನ್ನು ರಚಿಸಿ, ಸಿಎಸ್‌ಆರ್ (CSR) ಕೊಡುಗೆ ಮತ್ತು ದೇಣಿಗೆ ಮೂಲಕ ಪರಿಸರ ಅಭಿವೃದ್ಧಿಗೆ ಅನುಕೂಲ ಕಲ್ಪಿಸಲಾಗುವುದು.
* ಹವಾಮಾನ ವೈಪರೀತ್ಯದ ಅಪಾಯಗಳನ್ನು ತಗ್ಗಿಸಲು ಮತ್ತು ಸುಸ್ಥಿರ ಅಭಿವೃದ್ಧಿಗೆ ʻಕರ್ನಾಟಕ ರಾಜ್ಯ ಸಮಗ್ರ ಹವಾಮಾನ ಬದಲಾವಣೆ ಕ್ರಿಯಾ ಯೋಜನೆʼಯನ್ನು ಪ್ರಸಕ್ತ ಸಾಲಿನಲ್ಲಿ ಜಾರಿಗೊಳಿಸಲಾಗುವುದು.
* ವನ್ಯ ಪ್ರಾಣಿಗಳ ದಾಳಿಯಿಂದ ಉಂಟಾಗುವ ಮಾನವ ಪ್ರಾಣ ಹಾನಿ ಪ್ರಕರಣಗಳಲ್ಲಿ ನೀಡಲಾಗುತ್ತಿರುವ ದಯಾತ್ಮಕ ಧನವನ್ನು ₹ 15 ಲಕ್ಷದಿಂದ ₹ 20 ಲಕ್ಷಗಳಿಗೆ ಹೆಚ್ಚಳ.
* ಕೃಷಿ ಭೂಮಿಯಲ್ಲಿ ಸಾಗುವಾನಿ ಮತ್ತು ಇತರೆ ಬೆಲೆ ಬಾಳುವ ಮರಗಳನ್ನು ಬೆಳೆಸಲು ಉತ್ತೇಜನ ನೀಡಲು
ಪ್ರಸ್ತುತ ಇರುವ ಸಾಗಾಣಿಕೆ ನಿಯಮಾವಳಿಗಳನ್ನು ಸರಳೀಕರಣ.
* ಬೆಂಗಳೂರು ನಗರದಲ್ಲಿರುವ 3,000 ಕೊಳಚೆ ನೀರು ಸಂಸ್ಕರಣಾ ಘಟಕಗಳ (STP) ಕಾರ್ಯಾಚರಣೆಯ ಮೇಲುಸ್ತುವಾರಿಯನ್ನು ತಂತ್ರಾಂಶದ ಮೂಲಕ ನಿರ್ವಹಿಸಿ ಸಾರ್ವಜನಿಕರಿಗೆ ದೈನಂದಿನ ಮಾಹಿತಿ ಲಭ್ಯಪಡಿಸಲಾಗುವುದು.
* ಕೈಗಾರಿಕೆಗಳ ನಿಯಂತ್ರಕ ಅನುಪಾಲನಾ ಹೊರೆಯನ್ನು ಸರಳೀಕರಣಗೊಳಿಸಲು, ಸ್ವಯಂ ಪ್ರಮಾಣೀಕರಣ ಮೂಲಕ ಸ್ವಯಂಚಾಲಿತ ಸಮ್ಮತಿ ನವೀಕರಣಗಳನ್ನು ನೀಡಲಾಗುವುದು.
ಅರಣ್ಯದಲ್ಲಿ ಬೆಳೆದಿರುವ ಲಂಟಾನ ಮತ್ತು ಯುಫಟೋರಿಯಂ ಕಳೆಗಳನ್ನು ನರೇಗಾ ಯೋಜನೆಯ ಸಹಯೋಗದೊಂದಿಗೆ ಸ್ವಚ್ಛಗೊಳಿಸಿ ವನ್ಯ ಪ್ರಾಣಿಗಳಿಗೆ ಪೂರಕವಾದ ಹುಲ್ಲು ಬೆಳೆಯಲು ಕ್ರಮಕೈಗೊಳ್ಳಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.