ಬೆಂಗಳೂರು: ನಮ್ಮ ಮೆಟ್ರೊ 79.65 ಕಿ.ಮೀ. ಸಂಪರ್ಕಜಾಲವನ್ನು ಹೊಂದಿದ್ದು, ಇನ್ನೆರಡು ವರ್ಷದಲ್ಲಿ ಮತ್ತೆ 98.60 ಕಿ.ಮೀ ಸೇರ್ಪಡೆಗೊಳ್ಳಲಿದೆ. ಪ್ರತಿನಿತ್ಯ ಸರಾಸರಿ 8.5 ಲಕ್ಷ ಪ್ರಯಾಣಿಕರು ಸಂಚರಿಸುತ್ತಿರುವ ಮೆಟ್ರೊ ಜಾಲವನ್ನು ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ.
ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ನಮ್ಮ ಮೆಟ್ರೊ ಜಾಲ ವಿಸ್ತರಣೆಯಾಗಲಿದೆ ಎಂದು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
ಉಪನಗರ ರೈಲು: ₹15,767 ಕೋಟಿ ಅಂದಾಜು ವೆಚ್ಚದಲ್ಲಿ ಬೆಂಗಳೂರು ಉಪನಗರ ರೈಲು ಯೋಜನೆ ಅನುಷ್ಠಾನಗೊಳ್ಳುತ್ತಿದೆ. 58 ನಿಲ್ದಾಣಗಳು ಹಾಗೂ 148 ಕಿ.ಮೀ ಉದ್ದದ ಈ ಜಾಲವು ನಾಲ್ಕು ಕಾರಿಡಾರ್‌ಗಳನ್ನು ಹೊಂದಿದೆ. ಎರಡು ಕಾರಿಡಾರ್‌ಗಳ ಕಾಮಗಾರಿಗ ಪ್ರಗತಿಯಲ್ಲಿದೆ. ಇನ್ನೆರಡು ಕಾರಿಡಾರ್‌ಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.
ಲೆವೆಲ್ ಕ್ರಾಸಿಂಗ್: ವಿಪರೀತ ವಾಹನಗಳು ಇರುವ ನಗರದಲ್ಲಿ ಕ್ರಾಸಿಂಗ್ ಗೇಟ್‌ಗಳು ದಟ್ಟಣೆಯನ್ನು ಇನ್ನಷ್ಟು ಹೆಚ್ಚಿಸಿವೆ. ರೈಲು ಬರುವ ಹೊತ್ತಿಗೆ ಗೇಟ್‌ಗಳು ಮುಚ್ಚುವುದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಇದನ್ನು ತಪ್ಪಿಸಲು ರಸ್ತೆ ಮೇಲ್ಸೇತುವೆ/ ಕೆಳಸೇತುವೆ ನಿರ್ಮಿಸಲು ₹ 50 ಕೋಟಿ ಒದಗಿಸಲಾಗಿದೆ.
ಬೈಯ್ಯಪ್ಪನಹಳ್ಳಿ-ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣ ಯೋಜನೆಯಡಿ 70 ಕಿ.ಮೀ ರೈಲು ಮಾರ್ಗಗಳನ್ನು ದ್ವಿಪಥಗೊಳಿಸಲು ಅಂದಾಜು ₹812 ಕೋಟಿ ವೆಚ್ಚವಾಗಲಿದೆ. ಇದಕ್ಕೆ ಸರ್ಕಾರ ₹ 406 ಕೋಟಿ ಒದಗಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.