ಆರ್. ಆಶೋಕ, ಸಿದ್ದರಾಮಯ್ಯ
ಪ್ರಜಾವಾಣಿ ಚಿತ್ರ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕ, ಅಭಿವೃದ್ಧಿ ಶೂನ್ಯ, ದೂರದೃಷ್ಟಿ ರಹಿತ ಅಡ್ಡಕಸುಬಿ ಬಜೆಟ್ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬೊಗಳೆರಾಮಯ್ಯ_ಬಜೆಟ್ ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಸಿದ್ದರಾಮಯ್ಯನವರು Outgoing CM ಎಂದು ಜನಸಾಮಾನ್ಯರ ಮನಸ್ಸಿನಲ್ಲಿ ಗಟ್ಟಿಯಾದ ಅಭಿಪ್ರಾಯ ಮೂಡಿರುವುದರಿಂದ, ಈ ಬಜೆಟ್‌ನಿಂದ ಕನ್ನಡಿಗರಿಗೆ ಹೆಚ್ಚಿನ ನಿರೀಕ್ಷೆಗಳೇನೂ ಇರಲಿಲ್ಲ. ಆದರೂ ತಮ್ಮ ಕಡೆಯ ಬಜೆಟ್‌ನಲ್ಲಿ ಒಂದಿಷ್ಟಾದರೂ ಜನಪರ ಯೋಜನೆಗಳನ್ನು ಘೋಷಿಸುತ್ತಾರೆ ಎಂದು ಎದುರು ನೋಡುತ್ತಿದ್ದ ಜನರಿಗೆ ಈ ಬಜೆಟ್ ಸಂಪೂರ್ಣ ನಿರಾಸೆ ಮೂಡಿಸಿದೆ. ಇದು ಕೇವಲ 'ಬೊಗಳೆರಾಮಯ್ಯ ಬಜೆಟ್' ಎಂದು ಟೀಕಿಸಿದ್ದಾರೆ.
ಸಾಧನೆಯ ಬಲದಿಂದಾಗಲಿ, ದಿಟ್ಟ ನಾಯಕತ್ವದಿಂದಾಗಲಿ, ಅಹಿಂದ ನಾಮ ಜಪದಿಂದಾಗಲಿ ಚುನಾವಣೆಯನ್ನು ಎದುರಿಸಲು ಅಸಾಧ್ಯವೆಂದು ಗೊತ್ತಾದಾಗ ಅವಸರದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂತು. ಈ ಗ್ಯಾರಂಟಿಗಳು ಬಡವರ ಮೇಲಿನ ಪ್ರೀತಿ ಇಲ್ಲವೇ ಕಾಳಜಿಯಿಂದ ಘೋಷಿಸಿದ್ದಲ್ಲ, ಇದರ ಹಿಂದಿನ ದುರುದ್ದೇಶ ಜನರನ್ನು ದಿಕ್ಕು ತಪ್ಪಿಸಿ, ಮತಗಳಿಸಿ ಅಧಿಕಾರಕ್ಕೆ ಏರುವುದು ಮಾತ್ರ ಆಗಿತ್ತು ಎಂದು ಹೇಳಿದ್ದಾರೆ.
ಆದರೆ ಅಧಿಕಾರಕ್ಕೆ ಬಂದ ಮೇಲೆ ಬಿಸಿ ತುಪ್ಪದಂತಾಗಿರುವ ಗ್ಯಾರಂಟಿಗಳನ್ನು ಮುಂದುವರಿಸಲು ಆಗದೆ ನಿಲ್ಲಿಸಲೂ ಆಗದೆ ಕಾಂಗ್ರೆಸ್ ಸರ್ಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ ಎಂದು ಹೇಳಿದ್ದಾರೆ.
ಕೆಡಿಪಿ ಅಂಕಿ-ಅಂಶದ ಪ್ರಕಾರ, ಕಳೆದ ವರ್ಷದ ಅಂದರೆ 2024-25 ನೇ ಬಜೆಟ್ ವರ್ಷದ 10 ತಿಂಗಳಲ್ಲಿ ಶೇ.62 ರಷ್ಟು ಮಾತ್ರ ಪ್ರಗತಿ ಸಾಧಿಸಲಾಗಿದೆ. ಕಳೆದ ವರ್ಷದ ಅನುದಾನವೇ ಖರ್ಚು ಆಗದೆ ಇರುವಾಗ ಈಗ ಇನ್ನೊಂದು ಬಜೆಟ್ ಮಂಡಿಸಿದರೆ ಪ್ರಯೋಜನವೇನು? ಐದನೇ ಕ್ಲಾಸು ಪಾಸಾಗದ ವಿದ್ಯಾರ್ಥಿ ಆರನೇ ಕ್ಲಾಸಿನ ಪರೀಕ್ಷೆಗೆ ಕಟ್ಟಿದರೆ ಏನು ಪ್ರಯೋಜನ? ಹಾಗಾಗಿದೆ ಸಿದ್ದರಾಮಯ್ಯ ನವರ ಬಜೆಟ್‌ನ ಕಥೆ-ವ್ಯಥೆ ಎಂದು ವ್ಯಂಗ್ಯವಾಡಿದ್ದಾರೆ.
ಇದು ಕೇವಲ ನಾಮಕಾವಸ್ತೆ ಬಜೆಟ್. ಪಾಪರ್ ಸರ್ಕಾರದ ಪಾಪರ್ ಬಜೆಟ್. ನಿವೃತ್ತಿ ಆಗುತ್ತಿರುವ ಮುಖ್ಯಮಂತ್ರಿಗಳ ನಿರ್ಗಮನದ ಬಜೆಟ್. ಇದರಿಂದ ಕರ್ನಾಟಕಕ್ಕೆ, ಕನ್ನಡಿಗರಿಗೆ ನಯಾಪೈಸೆ ಉಪಯೋಗವಿಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.