ADVERTISEMENT

Karnataka Budget 2025: ಗೃಹಲಕ್ಷ್ಮಿ ಯೋಜನೆಗೆ ₹28,608 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 7:14 IST
Last Updated 7 ಮಾರ್ಚ್ 2025, 7:14 IST
   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಿಕ್ಕಿದ್ದೇನು? ಎಂಬುದರ ಚಿತ್ರಣ ಇಲ್ಲಿದೆ.

ಗೃಹಲಕ್ಷ್ಮಿ ಯೋಜನೆಗೆ ₹28,608 ಕೋಟಿ ಅನುದಾನ

ಗೃಹಲಕ್ಷ್ಮಿ ಯೋಜನೆಯನ್ನು 2023-24ನೇ ಸಾಲಿನಿಂದ ಜಾರಿಗೊಳಿಸಲಾಗಿದೆ. 2024-25ನೇ ಸಾಲಿನಲ್ಲಿ 1.22 ಕೋಟಿ ಕುಟುಂಬಗಳ ಯಜಮಾನಿಯರಿಗೆ ಧನಸಹಾಯ ಒದಗಿಸಲಾಗಿತ್ತು. ಪ್ರಸಕ್ತ ವರ್ಷದಲ್ಲಿ ಈ ಯೋಜನೆಗೆ ₹28,608 ಕೋಟಿ ಒದಗಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಹೆಚ್ಚಳ

ರಾಜ್ಯದ 37 ಲಕ್ಷ ಮಕ್ಕಳ ಆರೈಕೆ ಮತ್ತು ಕಲಿಕೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ₹1,000 ಹಾಗೂ ಸಹಾಯಕಿಯರ ಗೌರವಧನವನ್ನು₹750 ಹೆಚ್ಚಿಸಲಾಗುವುದು.

ADVERTISEMENT

ಸಕ್ಷಮ ಅಂಗನವಾಡಿ ಯೋಜನೆಯಡಿ ರಾಜ್ಯದ 17,454 ಅಂಗನವಾಡಿ ಕೇಂದ್ರಗಳಿಗೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲು ತಲಾ ಒಂದು ಲಕ್ಷ ರೂ. ನಂತೆ ಒಟ್ಟು ₹175 ಕೋಟಿ ಒದಗಿಸಲಾಗುವುದು.

ಅಂಗನವಾಡಿ ಕಟ್ಟಡಗಳ ನಿರ್ಮಾಣಕ್ಕಾಗಿ ನಗರಸಭೆ/ ಪುರಸಭೆಗಳಲ್ಲಿ ಲಭ್ಯವಿರುವ 173 ಸಿ.ಎ ನಿವೇಶನಗಳನ್ನು ನಗರಾಭಿವೃದ್ಧಿ ಇಲಾಖೆಯಿಂದ ಶೇ50 ರಷ್ಟು ರಿಯಾಯಿತಿ ದರದಲ್ಲಿ ಖರೀದಿಸಲು ₹10 ಕೋಟಿ ಮೀಸಲಿರಿಸಲಾಗಿದೆ.

ವಿಕಲಚೇತನರ ಸಮೀಕ್ಷೆ

ವಿಕಲಚೇತನರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಲು ಹಾಗೂ ಅವರಿಗೆ ಸೂಕ್ತ ಸೌಲಭ್ಯ ಒದಗಿಸುವ ಹಿತದೃಷ್ಟಿಯಿಂದ ವಿಕಲಚೇತನರ ಸಮೀಕ್ಷೆ ನಡೆಸಲಾಗುವುದು.

ಮೈಸೂರು ಮತ್ತು ಬೆಳಗಾವಿಯಲ್ಲಿರುವ ವಿಶೇಷ ಮಕ್ಕಳ ಸರ್ಕಾರಿ ವಸತಿಯುತ ಶಾಲೆಗಳನ್ನು ಉನ್ನತೀಕರಿಸಲು ₹5 ಕೋಟಿ ನೀಡಲಾಗುವುದು. ಇವುಗಳ ನಿರ್ವಹಣೆಯನ್ನು ಸ್ವಯಂ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು.

Cerebral Palsy, Muscular Dystrophy, Parkinsons ಮತ್ತು Multiple Sclerosis ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆದಾರರಿಗೆ ನೀಡುತ್ತಿರುವ ಮಾಸಿಕ 1,000 ರೂ. ಪ್ರೋತ್ಸಾಹಧನ ಯೋಜನೆಯನ್ನು ಆಟಿಸಂ, ಬೌದ್ಧಿಕ ವಿಕಲತೆ ಮತ್ತು ಬಹುವಿಧ ಅಂಗವಿಕಲತೆ (ಶ್ರವಣ ಮತ್ತು ದೃಷ್ಟಿ ನ್ಯೂನ್ಯತೆ) ಕಾಯಿಲೆಗಳಿಂದ ಬಳಲುತ್ತಿರುವ ಆರೈಕೆದಾರರಿಗೂ ವಿಸ್ತರಿಸಲಾಗುವುದು.

ಬಳ್ಳಾರಿಯ ಸರ್ಕಾರಿ ಶ್ರವಣದೋಷವುಳ್ಳ ಮಕ್ಕಳ ಶಾಲೆ ಹಾಗೂ ಹುಬ್ಬಳ್ಳಿಯ ದೃಷ್ಟಿದೋಷವುಳ್ಳ ಮಕ್ಕಳ ಶಾಲೆಗಳನ್ನು ಪ್ರಾಥಮಿಕ ಶಾಲಾ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಮೇಲ್ದರ್ಜೆಗೇರಿಸಲಾಗುವುದು.

ವಿಶೇಷ ಪಾಲನಾ ಯೋಜನೆಯಡಿ ಹೆಚ್‌.ಐ.ವಿ. ಸೋಂಕಿತ ಮತ್ತು ಬಾಧಿತ ಮಕ್ಕಳ ಪೌಷ್ಟಿಕ ಆಹಾರ ಮತ್ತು ಶಿಕ್ಷಣವನ್ನು ಪ್ರೋತ್ಸಾಹಿಸಲು ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಧನಸಹಾಯವನ್ನು ₹1,000ನಿಂದ ₹2,000ಗೆ ಹೆಚ್ಚಿಸಲಾಗುವುದು.

ಪಥ್ಯಾಹಾರ ಭತ್ಯೆ ಹೆಚ್ಚಳ

ರಾಜ್ಯ ಅನುದಾನದಡಿಯಲ್ಲಿ ನಡೆಯುತ್ತಿರುವ ವಸತಿಯುತ ವಿಶೇಷ ಶಾಲೆಗಳ ಮಕ್ಕಳ ಪಥ್ಯಾಹಾರ ಭತ್ಯೆಯನ್ನು ಮಾಸಿಕ ₹1,750 ಗಳಿಗೆ ಹೆಚ್ಚಿಸಲಾಗುವುದು.

ಮಹಿಳಾ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 94,084 ಕೋಟಿ ರೂ. ಒದಗಿಸಲಾಗುವುದು.

ಮಕ್ಕಳ ಉದ್ದೇಶಿತ ಕಾರ್ಯಕ್ರಮಗಳಿಗಾಗಿ 2025-26ನೇ ಸಾಲಿನಲ್ಲಿ ಒಟ್ಟಾರೆಯಾಗಿ 62,033 ಕೋಟಿ ರೂ. ಒದಗಿಸಲಾಗುವುದು ಎಂದು ಸಿಎಂ ಬಜೆಟ್‌ ಭಾಷಣದಲ್ಲಿ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.