ADVERTISEMENT

ಶಾಲಾ ಶಿಕ್ಷಣ: ವಿಜ್ಞಾನಕ್ಕೆ ʻಜ್ಞಾನಸೇತುʼ, ಹಾಜರಾತಿಗೆ ’Face Recognition’

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 13:09 IST
Last Updated 7 ಮಾರ್ಚ್ 2025, 13:09 IST
   

ಬೆಂಗಳೂರು: ಶಾಲೆಗಳಲ್ಲಿ ವಿಜ್ಞಾನ, ಗಣಿತ, ಕೋಡಿಂಗ್ ಮತ್ತು ಫೇಸ್ ರೆಕಗ್ನಿಶನ್ ಮೂಲಕ ಹಾಜರಾತಿ ದಾಖಲಾತಿ ಸೇರಿದಂತೆ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಕೆಲವು ಘೋಷಣೆಗಳನ್ನು ಬಜೆಟ್‌ನಲ್ಲಿ ಮಾಡಲಾಗಿದೆ.

ʻಜ್ಞಾನಸೇತುʼ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳಲ್ಲಿ ವಿಜ್ಞಾನ ಮತ್ತು ಗಣಿತ ವಿಷಯಗಳ ಬೋಧನಾ ವಿಧಾನದಲ್ಲಿ ನಾವೀನ್ಯತೆ ಅಳವಡಿಸಿ, ಖಾನ್‌ ಅಕಾಡೆಮಿ ಸಹಯೋಗದಲ್ಲಿ ಯೋಜನೆ ರೂಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ರಾಜ್ಯದ 5,000 ಸರ್ಕಾರಿ ಶಾಲೆಗಳ 20 ಲಕ್ಷ ವಿದ್ಯಾರ್ಥಿಗಳು ಹಾಗೂ 15,000 ಶಿಕ್ಷಕರು ಈ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

ಅಲ್ಲದೆ, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೋಡಿಂಗ್‌ ಕಲಿಕೆ ಪರಿಚಯಿಸಲು ಅಗಸ್ತ್ಯ ಫೌಂಡೇಶನ್‌ ಸಹಯೋಗದೊಂದಿಗೆ ಐ-ಕೋಡ್‌ ಲ್ಯಾಬ್‌ ಸ್ಥಾಪಿಸಲಾಗುವುದು. ಈ ನಿಟ್ಟಿನಲ್ಲಿ ಪ್ರಸಕ್ತ ವರ್ಷ ICT ಸೌಲಭ್ಯವಿರುವ ಆಯ್ದ 63 ಶಾಲೆಗಳನ್ನು ಹಬ್‌ಗಳೆಂದು ಪರಿಗಣಿಸಿ 756 ಸ್ಪೋಕ್‌ ಶಾಲೆಗಳಿಗೆ ಅನುಕೂಲ ಕಲ್ಪಿಸುವುದು ಎಂದು ತಿಳಿಸಿದ್ದಾರೆ.

ADVERTISEMENT

ʻನಿರಂತರʼ ಕಾರ್ಯಕ್ರಮದಡಿ Face Recognition ತಂತ್ರಜ್ಞಾನದ ಮೂಲಕ ಮಕ್ಕಳ ಹಾಜರಾತಿಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

‘ಕಲಿಕಾ ಚಿಲುಮೆʼ ಕಾರ್ಯಕ್ರಮದಡಿ ಒಂದರಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಸಂತಸದಾಯಕ ಕಲಿಕಾ ಅನುಭವ ಒದಗಿಸುವುದು.ʻಗಣಿತ ಗಣಕʼ ಕಾರ್ಯಕ್ರಮದಡಿ 3 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಫೋನ್‌ ಮೂಲಕ ವೈಯಕ್ತಿಕ ಬೋಧನೆಯೊಂದಿಗೆ ಬುನಾದಿ ಗಣಿತ ಕೌಶಲ್ಯವನ್ನು ಅಭಿವೃದ್ಧಿಪಡಿಸಿ ರಾಜ್ಯಾದ್ಯಂತ ವಿಸ್ತರಿಸುವುದು ಮತ್ತು ಸರ್ಕಾರಿ ಶಾಲೆಗಳಲ್ಲಿ ಅತೀ ಕಡಿಮೆ ಕಲಿಕಾ ಸ್ತರದಲ್ಲಿರುವ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯ ಹೆಚ್ಚಿಸುವ ʻಮರುಸಿಂಚನʼ ಕಾರ್ಯಕ್ರಮವನ್ನು ರಾಜ್ಯದಾದ್ಯಂತ ವಿಸ್ತರಿಸಲಾಗುವುದು ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.