ADVERTISEMENT

Budget 2025: ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ; ರೈಲ್ವೆ ಯೋಜನೆಗಳಿಗೆ ₹600 ಕೋಟಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2025, 23:45 IST
Last Updated 7 ಮಾರ್ಚ್ 2025, 23:45 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ಮೂಲ ಸೌಕರ್ಯ ಕಲ್ಪಿಸುವ ಯೋಜನೆಗಳಿಗೆ ಬಜೆಟ್‌ನಲ್ಲಿ ಆದ್ಯತೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿವಿಧ ರೈಲ್ವೆ ಯೋಜನೆಗಳಿಗೆ ₹600 ಕೋಟಿಯನ್ನು ಮೀಸಲಿಟ್ಟಿರುವುದಾಗಿ ಘೋಷಿಸಿದ್ದಾರೆ.

ADVERTISEMENT

ವಿವಿಧ ರೈಲ್ವೆ ಯೋಜನೆಗಳ ಜೊತೆಗೆ, ₹219 ಕೋಟಿ ಅಂದಾಜು ವೆಚ್ಚದ ರಾಯಚೂರು ವಿಮಾನ ನಿಲ್ದಾಣದ ಕಾಮಗಾರಿಗಳಿಗೆ ಈವರೆಗೆ ₹53 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ವಿಜಯಪುರದಲ್ಲಿ ₹348 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ವಿಮಾನ ನಿಲ್ದಾಣದ ಕಾರ್ಯಾಚರಣೆ 2025-26ನೇ ಸಾಲಿನಲ್ಲಿ ಆರಂಭವಾಗಲಿದೆ ಎಂದಿದ್ದಾರೆ. 

ಮೈಸೂರು ವಿಮಾನ ನಿಲ್ದಾಣದ ರನ್‌ ವೇ ವಿಸ್ತರಿಸಲು ಭೂಸ್ವಾಧೀನಕ್ಕಾಗಿ ₹319 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ. ಕಾರವಾರದ ನೌಕಾನೆಲೆಯ ವಿಮಾನ ನಿಲ್ದಾಣದ ಭೂಸ್ವಾಧೀನ ಪ್ರಕ್ರಿಯೆಯು ಚಾಲ್ತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಅಗತ್ಯ ಅನುದಾನ ಒದಗಿಸಿ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು.

ವಾಹನ ದಟ್ಟಣೆಯಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ಬದಲಿಗೆ ರಸ್ತೆ ಮೇಲ್ಸೇತುವೆ/ಕೆಳಸೇತುವೆ ನಿರ್ಮಿಸಲು ಈಗಾಗಲೇ ಅನುಮೋದನೆ ನೀಡಿರುವ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ₹50 ಕೋಟಿಯನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ.

ಬೈಯಪ್ಪನಹಳ್ಳಿ–ಹೊಸೂರು ಹಾಗೂ ಯಶವಂತಪುರ-ಚನ್ನಸಂದ್ರ ದ್ವಿಪಥೀಕರಣಕ್ಕೆ ₹406 ಕೋಟಿ ಅನುದಾನ ಮೀಸಲಿರಿಸಿದೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆ ಅನುಷ್ಠಾನಕ್ಕಾಗಿ ₹15,767 ಕೋಟಿ ಅನುದಾನ ತೆಗೆದಿರಿಸಿದೆ.

ಜಲಸಾರಿಗೆ ಅಭಿವೃದ್ಧಿಗೆ ಆದ್ಯತೆ

ಜಲಸಾರಿಗೆ ಅಭಿವೃದ್ಧಿಗೆ ಪೂರಕವಾಗಿ ಮಂಗಳೂರು, ಉತ್ತರ ಕನ್ನಡ ಜಿಲ್ಲೆಯಲ್ಲಿ ಬಂದರು ಅಭಿವೃದ್ಧಿ ಮತ್ತು ಪ್ರವಾಸೋದ್ಯಮಕ್ಕೂ ಅನುಮೋದನೆ ನೀಡಿದೆ. ಮುಂಗಾರು ಮಳೆಯ ಸಮಯದಲ್ಲಿ ಕರಾವಳಿಯಲ್ಲಿ ಉಂಟಾಗುವ ಕಡಲು ಕೊರೆತ ತಡೆಕೆ ಕ್ರಮ ಕೈಗೊಳ್ಳುವುದು ಮತ್ತು ಪಿಪಿಪಿ ಮಾದರಿಯಲ್ಲಿ ಮಂಗಳೂರಿನಲ್ಲಿ ಜಲಸಾರಿಗೆ ಸಂಗ್ರಹಾಲಯ ಮತ್ತು ಅನುಭವ ಕೇಂದ್ರ ಸ್ಥಾಪನೆಯನ್ನೂ ಸರ್ಕಾರ ಘೋಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.