ADVERTISEMENT

ಆರ್ಥಿಕತೆಗೆ ಬೂಸ್ಟರ್ ನೀಡುವ ಬಜೆಟ್: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 8:51 IST
Last Updated 1 ಫೆಬ್ರುವರಿ 2022, 8:51 IST
ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ   

ಬೆಳಗಾವಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ದೇಶದ ಆರ್ಥಿಕತೆಗೆ ಬೂಸ್ಟ್ ನೀಡಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿರುವ ಅವರು, ರೈತರಿಗೆ, ವ್ಯಾಪಾರಸ್ಥರಿಗೆ ಮತ್ತು ಜನ ಸಾಮಾನ್ಯರಿಗೆ ಹೆಚ್ಚಿನ ಆದ್ಯತೆಯನ್ನು ನೀಡಿದ್ದಾರೆ. ವಿಶೇಷವಾಗಿ ರೈತರು ಸಾವಯವ ಪದಾರ್ಥಗಳನ್ನು ಬೆಳೆಯಲು ಬಜೆಟ್‌ನಲ್ಲಿ ಉತ್ತೇಜನ ನೀಡಲಾಗಿದೆ. ಈ ಮೂಲಕ ರೈತರನ್ನು ಆರ್ಥಿಕವಾಗಿ ಸದೃಢವಾಗಿಸಲು ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ‌ ಎಂದಿದ್ದಾರೆ.

ಅಲ್ಲದೆ ಸಣ್ಣ ಉದ್ದಿಮೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗಿದೆ. ಅಲ್ಲದೆ ಕಾವೇರಿ–ಪೆನ್ನಾರ್‌ ಸೇರಿದಂತೆ ಐದು ನದಿ ಜೋಡಣೆಯ ನಿರ್ಧಾರ ರಾಷ್ಟ್ರವನ್ನು ಸಮೃದ್ಧ ಮಾಡುವಲ್ಲಿ ಮಹತ್ವ ಪಡೆದುಕೊಂಡಿದೆ. ಇದರೊಟ್ಟಿಗೆ ಸಹಕಾರಿ ಸಂಘಗಳ ಮೇಲಿನ ತೆರಿಗೆಯನ್ನು ಇಳಿಸಿರುವುದು, ಸೌರ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸಲು ಆದ್ಯತೆ ಕೊಟ್ಟಿರುವುದು, ಹೊಸ ಕಂಪನಿಗಳಿಗೆ ತೆರಿಗೆ ವಿನಾಯಿತಿ, ದೇಶದಲ್ಲಿ ಡಿಜಿಟಲ್ ರೂಪಾಯಿ ಘೋಷಣೆ, ಔಷಧಗಳ ಮೇಲಿನ ಸುಂಕ ಇಳಿಕೆಯಂತಹ ಜನಪರ ಘೋಷಣೆಗಳನ್ನು ಗಮನಿಸಿದರೆ ಇದೊಂದು ಜನಪ್ರಿಯ ಮತ್ತು ಜನಪರವಾದ, ರೈತಪರವಾದ ಬಜೆಟ್ ಎನ್ನುವುದರಲ್ಲಿ ಅನುಮಾನವಿಲ್ಲ. ಕೊರೊನಾ ವೇಳೆ ಮಕ್ಕಳು ಅನುಭವಿಸಿದ ಸಂಕಷ್ಟವನ್ನು ಗಮನದಲ್ಲಿಟ್ಟುಕೊಂಡು 'ಪಿಎಂ ಇ–ವಿದ್ಯಾ’ ಯೋಜನೆ ಅಡಿಯಲ್ಲಿ ‘ಒನ್ ಕ್ಲಾಸ್ ಒನ್ ಟಿವಿ ಚಾನೆಲ್’ ಅನ್ನು ವಿಸ್ತರಿಸಿದ್ದು ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ಮಾಡಿಕೊಟ್ಟಿದ್ದಾರೆ. 5ಜಿ ಹರಾಜಿಗೆ ಕ್ರಮ ಕೈಗೊಂಡಿರುವುದು ದೂರ ಸಂಪರ್ಕ ಕ್ಷೇತ್ರದಲ್ಲಿ ದೇಶವನ್ನು ಹೊಸ ಮೈಲಿಗಲ್ಲಿನತ್ತ ಕೊಂಡೊಯ್ಯಲಿದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.