ADVERTISEMENT

ತಂದೆ ಅಗಲಿಕೆ ಸುದ್ದಿ ಕೇಳಿಯೂ ಬಜೆಟ್‌ ಮುದ್ರಣ ಕೆಲಸದಿಂದ ಕದಲದ ಕುಲದೀಪ್‌

ಏಜೆನ್ಸೀಸ್
Published 1 ಫೆಬ್ರುವರಿ 2020, 7:09 IST
Last Updated 1 ಫೆಬ್ರುವರಿ 2020, 7:09 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ಬಜೆಟ್‌ ಎಂದಾಕ್ಷಣ ಏನೆಲ್ಲ ಏರಿಕೆ, ಇಳಿಕೆ ಆಗುತ್ತದೆ ಎಂಬ ಬಗ್ಗೆಯೇ ಎಲ್ಲರ ಚಿತ್ತನೆಟ್ಟಿರುತ್ತದೆ. ದೇಶದ ಪ್ರಮುಖ ದಿನ ಎಂದೇ ಕರೆಸಿಕೊಳ್ಳುವ ಇದಕ್ಕೆ ಯಾವುದೇ ತೊಡಕು ಆಗಬಾರದೆಂದು ಸಾಕಷ್ಟು ಅಧಿಕಾರಿಗಳು ಕೆಲಸ ಮಾಡಿರುತ್ತಾರೆ. ಅಂತಹವರಲ್ಲಿ ವಿತ್ತ ಸಚಿವಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕುಲದೀಪ್‌ ಕುಮಾರ್ ಶರ್ಮಾ ಸಹ ಒಬ್ಬರು.

ಜನವರಿ 20ರಂದು ಹಲ್ವಾ ಸಮಾರಂಭದ ಮೂಲಕ ಬಜೆಟ್‌ ದಾಖಲೆಗಳ ಮುದ್ರಣ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಇದರ ಕೆಲಸಗಳನ್ನು ನಿರ್ವಹಿಸುತ್ತಿದ್ದ ಕುಲದೀಪ್‌ ಕುಮಾರ್ ಶರ್ಮಾ ಅವರ ತಂದೆ ಗಣರಾಜ್ಯೋತ್ಸವದಂದು (ಜ.26) ಮೃತಪಟ್ಟರು. ಆ ಸಮಯದಲ್ಲಿ ಬಜೆಟ್‌ ಕೆಲಸಗಳು ಭರದಿಂದ ಸಾಗುತ್ತಿತ್ತು. ಈ ಸುದ್ದಿ ಕೇಳಿದ ಬಳಿಕವೂ ಕುಲದೀಪ್‌ ಒಂದು ನಿಮಿಷ ಕೂಡ ತಮ್ಮ ಕಾರ್ಯಸ್ಥಾನದಿಂದ ಹೊರಬರಲಿಲ್ಲ.

ಬಜೆಟ್ ದಾಖಲೆಗಳು ಬಹಳ ರಹಸ್ಯವಾದುದು. ಈ ದಾಖಲೆಗಳ ಗೋಪ್ಯತೆ ಕಾಪಾಡುವುದು ಅಧಿಕಾರಿಗಳ ಹೊಣೆಗಾರಿಕೆ. ಅಂತಹ ಮಹತ್ವದ ಜವಾಬ್ದಾರಿ ಹೊತ್ತಿದ್ದ ಮುದ್ರಣ ವಿಭಾಗದ ಉಪ ವ್ಯವಸ್ಥಾಪಕ ಕುಲದೀಪ್ ಕುಮಾರ್ ಶರ್ಮಾ ಕೆಲಸ ಪೂರ್ಣಗೊಳಿಸಿಯೇ ಮನೆಯತ್ತಾ ಸಾಗಿದರು. ದೇಶದ ಕೆಲಸ ಮೊದಲು ಎನ್ನುವ ಅವರ ಮನೋಭಾವವನ್ನು ಗುರುತಿಸಿ ವಿತ್ತ ಸಚಿವಾಲಯ ಶ್ಲಾಘನೆ ವ್ಯಕ್ತಪಡಿಸಿದೆ.

ADVERTISEMENT

ಮುದ್ರಣದಲ್ಲಿ 31 ವರ್ಷ ಅನುಭವ

ನಿಗದಿತ ಸಮಯದೊಳಗೆ ಬಜೆಟ್‌ ಪ್ರತಿಗಳ ಮುದ್ರಣ ಕೆಲಸವನ್ನು ಪೂರ್ಣಗೊಳಿಸಬೇಕು ಎನ್ನುವ ನಿಶ್ಚಯವನ್ನು ಕುಲದೀಪ್‌ ಹೊಂದಿದ್ದರು. ಇದಕ್ಕೆ ತಂದೆಯ ಅಗಲಿಕೆಯೂ ಅಡ್ಡಿಯಾಗಲಿಲ್ಲ. ಕುಲದೀಪ್‌ ಅವರಿಗೆ ಮುದ್ರಣ ಕೆಲಸದಲ್ಲಿ 31 ವರ್ಷಗಳ ಅನುಭವವಿದೆ. ದೇಶದ ಪ್ರಮುಖ ದಾಖಲೆ ಮುದ್ರಣವಾಗುವ ಸಮಯದಲ್ಲಿ ತಮ್ಮ ಹಾಜರಾತಿ ಹಾಗೂ ಸಚಿವಾಲಯದ ನಿಯಮಗಳ ಅರಿವು ಇದ್ದಿದ್ದರಿಂದ ಅವರು ಕೆಲಸಕ್ಕೆ ಪ್ರಾಮುಖ್ಯತೆ ನೀಡಿದರು.

ಬಜೆಟ್‌ ಮಂಡನೆಯಾಗುವವರೆಗೂ ಈ ಕೆಲಸಗಳಲ್ಲಿ ತೊಡಗಿಕೊಂಡವರು ತಮ್ಮ ಮನೆಯವರನ್ನಾಗಿ, ಸ್ನೇಹಿತರನ್ನಾಗಲಿ ಸಂಪರ್ಕಿಸುವ ಹಾಗಿಲ್ಲ. ಫೋನ್‌, ಇ–ಮೇಲ್‌ ಯಾವುದರ ಮೂಲಕವೂ ಸಂಭಾಷಣೆ ನಡೆಸುವುದಕ್ಕೆ ಅನುಮತಿಯಿರುವುದಿಲ್ಲ. ಬಜೆಟ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ಸೋರಿಕೆಯಾಗಬಾರದು ಎಂದು ಈ ನಿಯಮಗಳನ್ನು ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.