ನವದೆಹಲಿ: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್, 'ಪ್ರಧಾನಿ ಎಂದಿಗೂ ಜನರ ಸಮಸ್ಯೆಗಳ ಕುರಿತು ಚರ್ಚಿಸುವುದಿಲ್ಲ. 'ಪಿತೂರಿ ಸಿದ್ಧಾಂತ'ದ ಮೂಲಕ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಾರೆ' ಎಂದು ಆರೋಪಿಸಿದೆ.
ಬಜೆಟ್ ಅಧಿವೇಶನಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಬಹುಶಃ 2014ರ ಬಳಿಕ ಇದೇ ಮೊದಲ ಬಾರಿ ಬಜೆಟ್‌ಗೂ ಮುನ್ನ ವಿದೇಶದಿಂದ 'ಬೆಂಕಿ ಹಚ್ಚುವ' ಪ್ರಯತ್ನ ನಡೆದಿಲ್ಲ ಎಂದಿದ್ದರು.
ಇದಕ್ಕೆ ತಿರುಗೇಟು ನೀಡಿರುವ ಖರ್ಗೆ, 'ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ದೇಶದ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದ್ದಾರೆ. ರಾಷ್ಟ್ರಪತಿಗಳ ಭಾಷಣದಲ್ಲಿ ಇಲ್ಲದ ವಿಷಯಗಳನ್ನು, ಸರ್ಕಾರದ ಅಧಿಕೃತ ಹೇಳಿಕೆಯಲ್ಲಿ ಇಲ್ಲದಿದ್ದರೂ ಈ ರೀತಿಯಾಗಿ ಮಾತನಾಡಿರುವುದು ತಪ್ಪು' ಎಂದು ಹೇಳಿದ್ದಾರೆ.
'ರಾಷ್ಟ್ರಪತಿ ಭಾಷಣದಲ್ಲಿ ಪ್ರಸ್ತಾಪಿಸಿದ್ದ ಆಧಾರ್, ಯುಪಿಐ, ಕಾಶ್ಮೀರದಲ್ಲಿ ರೈಲ್ವೆ, ಮೆಟ್ರೊ ನಿರ್ಮಾಣದಂತಹ ಯೋಜನೆಗಳೆಲ್ಲವೂ ಕಾಂಗ್ರೆಸ್ ಕಾಲದ ಯೋಜನೆಗಳು ಎಂದು ಹೇಳಲು ಪ್ರಧಾನಿ ಮರೆತಿದ್ದಾರೆ. ನಾನೇ ರೈಲ್ವೆ ಸಚಿವನಾಗಿದ್ದಾಗ ಕಾಶ್ಮೀರದಲ್ಲಿ ಎರಡು ರೈಲ್ವೆ ಯೋಜನೆಗಳನ್ನು ಉದ್ಘಾಟಿಸಿದ್ದೆ. ಮೋದಿ ಅವರು ಕಾಂಗ್ರೆಸ್‌ನ ಕೆಲಸವನ್ನು ತನ್ನೆಂದೆದು ಹೇಳಿಕೊಳ್ಳುತ್ತಾರೆ' ಎಂದು ತಿರುಗೇಟು ನೀಡಿದ್ದಾರೆ.
ಈ ವರ್ಷ ದೇಶದ ಅಭಿವೃದ್ಧಿಗಾಗಿ ಪ್ರಧಾನಿ ಮೋದಿ ಏನು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದರ ಕುರಿತು ಮಾತನಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
'ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ದೇಶದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ ಈ ವಿಷಯಗಳನ್ನು ಪ್ರಧಾನಿ ಮೋದಿ ಪ್ರಸ್ತಾಪಿಸಲಿಲ್ಲ. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಕೊಡುಗೆಯ ಬಗ್ಗೆಯೂ ಮಾತನಾಡಿಲ್ಲ' ಎಂದು ಅವರು ಕಿಡಿಕಾರಿದರು.
'ಯುವಜನತೆ, ದಲಿತರು, ನಿರುದ್ಯೋಗ ಮತ್ತು ಹಣದುಬ್ಬರ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಚರ್ಚಿಸಿಲ್ಲ. ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯ ವೇಳೆ ನಾನು ಈ ವಿಷಯಗಳ ಕುರಿತು ಪ್ರಸ್ತಾಪಿಸಲಿದ್ದೇನೆ' ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಹ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿದ್ದು, 'ಪ್ರಧಾನಿ ಎಂದಿಗೂ ಜನಸಾಮಾನ್ಯರ ಸಮಸ್ಯೆಗಳ ಕುರಿತು ಚರ್ಚಿಸುವುದಿಲ್ಲ. ಕಳೆದ ಬಾರಿಯೂ ಹಾಗೆಯೇ ಆಗಿತ್ತು' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.