ADVERTISEMENT

ಸತತ 8ನೇ ಬಾರಿಗೆ ಬಜೆಟ್‌ ಮಂಡಿಸಿ ಚಾರಿತ್ರಿಕ ದಾಖಲೆ ಬರೆದ ನಿರ್ಮಲಾ ಸೀತಾರಾಮನ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಫೆಬ್ರುವರಿ 2025, 5:48 IST
Last Updated 1 ಫೆಬ್ರುವರಿ 2025, 5:48 IST
<div class="paragraphs"><p>ನಿರ್ಮಲಾ ಸೀತಾರಾಮನ್‌</p></div>

ನಿರ್ಮಲಾ ಸೀತಾರಾಮನ್‌

   

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು (ಶನಿವಾರ) ಸತತ ಎಂಟನೇ ಬಾರಿಗೆ ಬಜೆಟ್‌ ಮಂಡಿಸಿ ಚಾರಿತ್ರಿಕ ದಾಖಲೆ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ ಅನ್ನು ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ್ದಾರೆ. ಇದೇ ವೇಳೆ ‘ಮಧುಬನಿ’ ಕಲೆ ಇರುವ ಸೀರೆಯನ್ನು ಧರಿಸಿದ್ದ ಅವರು ಸಂಸತ್‌ ಭವನದಲ್ಲಿ ಗಮನ ಸೆಳೆದಿದ್ದಾರೆ.

ADVERTISEMENT

ಇದಕ್ಕೂ ಮುನ್ನ ನಿರ್ಮಲಾ ಸೀತಾರಾಮನ್‌ ಅವರು 2019, 2020, 2021, 2022, 2023, 2024, 2025ರಲ್ಲಿ ಏಳು ಬಾರಿ ಬಜೆಟ್ ಮಂಡಿಸಿದ್ದರು.

ಈ ಬಾರಿಯ ಬಜೆಟ್‌ನಲ್ಲಿ ಬಡತನ ನಿರ್ಮೂಲನೆಗೆ ಆದ್ಯತೆ ನೀಡಲಾಗಿದೆ. ಮಧ್ಯಮವರ್ಗ ಮತ್ತು ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲಾಗಿದೆ. 2047ಕ್ಕೆ ಬಡತನ ಮುಕ್ತ ಭಾರತ ನಿರ್ಮಿಸುವ ಸಂಕಲ್ಪ ಹೊಂದಲಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ವಿವಿಧ ಅವಧಿಗಳಲ್ಲಿ 10 ಬಜೆಟ್‌ಗಳನ್ನು ಮಂಡಿಸಿರುವ ದಾಖಲೆ ಹೊಂದಿದ್ದಾರೆ. ದೇಸಾಯಿ ಅವರು 1959ರಿಂದ 1964ರವರೆಗೆ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಒಟ್ಟು 6 ಬಜೆಟ್‌ಗಳನ್ನು ಮಂಡಿಸಿದ್ದರು. ಜತೆಗೆ, 1967 ಮತ್ತು 1969ರ ನಡುವೆ 4 ಬಜೆಟ್‌ಗಳನ್ನು ಮಂಡಿಸಿದ್ದರು.

ಮಾಜಿ ವಿತ್ತ ಸಚಿವರಾದ ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಅವರು ವಿವಿಧ ಅವಧಿಗಳಲ್ಲಿ ಕ್ರಮವಾಗಿ ಒಂಬತ್ತು ಮತ್ತು ಎಂಟು ಬಜೆಟ್‌ಗಳನ್ನು ಮಂಡಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಅವಧಿಯಲ್ಲಿ ನಿರ್ಮಲಾ ಸೀತಾರಾಮನ್ ಅವರು ಸತತ ಎಂಟು ಬಜೆಟ್‌ಗಳನ್ನು ಮಂಡಿಸಿದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಸ್ವತಂತ್ರ ಭಾರತದ ಮೊದಲ ಕೇಂದ್ರ ಬಜೆಟ್ ಅನ್ನು 1947ರ ನವೆಂಬರ್ 26ರಂದು ರಾಷ್ಟ್ರದ ಮೊದಲ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಅವರು ಮಂಡಿಸಿದ್ದರು.

ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ಗರಿಷ್ಠ ಸಂಖ್ಯೆಯ ಬಜೆಟ್‌ಗಳನ್ನು ಮಂಡಿಸಿದ ದಾಖಲೆ ಹೊಂದಿದ್ದಾರೆ. ಅವರು ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರೂ ಮತ್ತು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ ಒಟ್ಟು 10 ಬಜೆಟ್‌ಗಳನ್ನು ಮಂಡಿಸಿದ್ದಾರೆ. ಮೊರಾರ್ಜಿ ದೇಸಾಯಿ ಅವರು ತಮ್ಮ ಮೊದಲ ಬಜೆಟ್ ಅನ್ನು 1959ರ ಫೆಬ್ರುವರಿ 28ರಂದು ಮಂಡಿಸಿದ್ದರು.

ಮಾಜಿ ವಿತ್ತ ಸಚಿವ ಪಿ. ಚಿದಂಬರಂ ಅವರು ಒಂಬತ್ತು ಬಾರಿ ಬಜೆಟ್ ಮಂಡಿಸಿದ್ದಾರೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಯುನೈಟೆಡ್ ಫ್ರಂಟ್ ಸರ್ಕಾರದ ಅವಧಿಯಲ್ಲಿ 1996ರ ಮಾರ್ಚ್ 19ರಂದು ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.