ADVERTISEMENT

Union Budget 2022: ಮಹಿಳಾ ಸಬಲೀಕರಣ, ಮಕ್ಕಳ ಆರೋಗ್ಯಕ್ಕೆ ಒತ್ತು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2022, 19:16 IST
Last Updated 1 ಫೆಬ್ರುವರಿ 2022, 19:16 IST
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್   

ನವದೆಹಲಿ: ‘ಸಕ್ಷಮ್‌ ಅಂಗನವಾಡಿಗಳ ಯೋಜನೆಯಡಿ ಎರಡು ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇದು ಹೊಸ ಪೀಳಿಗೆಯ ಅಂಗನವಾಡಿಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳು ಹಾಗೂ ಮಕ್ಕಳ ಆರಂಭಿಕ ಅಭಿವೃದ್ಧಿಗೆ ನೆರವಾಗಲು ಧ್ವನಿ–ದೃಶ್ಯ ಸಾಧನಗಳನ್ನು ಒದಗಿಸಲು ನೆರವಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆನಿರ್ಮಲಾ ಸೀತಾರಾಮನ್ ಅವರು ತಿಳಿಸಿದ್ದಾರೆ.

2022–23 ನೇ ಸಾಲಿನ ಬಜೆಟ್‌ ಮಂಡಿಸಿದ ಸೀತಾರಾಮನ್‌ ಅವರು,‘ ಭಾರತದ ಉಜ್ವಲ ಭವಿಷ್ಯದ ಮುಂಚೂಣಿಯಲ್ಲಿ ‘ನಾರಿ ಶಕ್ತಿ’ಯ ಮಹತ್ವ ಮತ್ತು ‘ಅಮೃತ ಕಾಲ’ ದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಗುರುತಿಸಿರುವ ಸರ್ಕಾರ,ಮಹಿಳಾ ಸಚಿವಾಲಯದ ಯೋಜನೆಗಳನ್ನು ಸಮಗ್ರವಾಗಿ ಪರಿಷ್ಕರಿಸಿದೆ’ ಎಂದರು.

ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ 3 ಯೋಜನೆಗಳನ್ನು ಆರಂಭಿಸಲಾಗಿದೆ. ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್‌ ಅಂಗನವಾಡಿ ಹಾಗೂ ಪೋಷಣ್‌ 2.0 ಯೋಜನೆಯನ್ನು ಜಾರಿಗೆ ತರಲಾಗಿದೆ.

ADVERTISEMENT

ಸಕ್ಷಮ್‌ ಅಂಗನವಾಡಿ ಹಾಗೂ ಪೋಷಣ್‌ 2.0 ಯೋಜನೆಗೆ2021-22 ರ ಸಾಲಿನಲ್ಲಿ ₹20,105 ಕೋಟಿ ನೀಡಲಾಗಿತ್ತು. ಇದನ್ನು ₹20,263ಕ್ಕೆ ಏರಿಸಲಾಗಿದೆ. ‘ಮಿಷನ್‌ ಶಕ್ತಿ’ಗೆ ಕಳೆದ ವರ್ಷ ₹3,109 ಕೋಟಿ ನೀಡಲಾಗಿತ್ತು. ಈ ವರ್ಷ ಅದನ್ನು ₹3,184 ಕೋಟಿಯಷ್ಟು ಹೆಚ್ಚಳ ಮಾಡಲಾಗಿದೆ. ಜತೆಗೆ, ಮಿಷನ್‌ವಾತ್ಸಲ್ಯಗೆ ₹1,472 ಕೋಟಿ ಬಜೆಟ್‌ ಹಂಚಿಕೆ ಮಾಡಲಾಗಿದೆ. ಕಳೆದ ವರ್ಷ ₹900 ಕೋಟಿ ನೀಡಲಾಗಿತ್ತು.

2022-23ರ ಬಜೆಟ್‌ನಲ್ಲಿಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಕಳೆದ ವರ್ಷಕ್ಕಿಂತ ಶೇಕಡ 3 ರಷ್ಟು ಹೆಚ್ಚು ಹಣ ಹಂಚಿಕೆ ಮಾಡಲಾಗಿದೆ. 2021-22ರ ಸಾಲಿನಲ್ಲಿ ₹24,435 ಕೋಟಿ ನೀಡಲಾಗಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ ಈ ಮೊತ್ತವನ್ನು ₹25,172.28 ಕೋಟಿಗೆ ಏರಿಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.