ADVERTISEMENT

ಕಿವಿ ಮೇಲೆ ಹೂವು ಇಟ್ಕೊಂಡು ಸದನಕ್ಕೆ ಬಂದ ಸಿದ್ದರಾಮಯ್ಯ! ಬೊಮ್ಮಾಯಿ ಏನಂದ್ರು?

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2023, 6:16 IST
Last Updated 18 ಫೆಬ್ರುವರಿ 2023, 6:16 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಬಿಜೆಪಿ ಸರ್ಕಾರವು ಬಜೆಟ್‌ ಮೂಲಕ ಜನರನ್ನು ಮೋಸಗೊಳಿಸಲು ಹೊರಟಿದೆ ಎಂಬುದನ್ನು ಹೇಳುವುದಕ್ಕಾಗಿ ಕಾಂಗ್ರೆಸ್‌ ಸದಸ್ಯರು ಕಿವಿಗೆ ಹೂವು ಮುಡಿದುಕೊಂಡು ವಿಧಾನಸಭೆಗೆ ಬಂದಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ ಸದಸ್ಯರ ಕಿವಿಗಳಲ್ಲಿ ಚೆಂಡು ಹೂವು ಇರುವುದನ್ನು ಕಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷಣಕಾಲ ವಿಚಲಿತರಾದರು.

ಬಜೆಟ್‌ ಪುಸ್ತಕ ಓದುವುದನ್ನು ಬಿಟ್ಟ ಬೊಮ್ಮಾಯಿ, ‘ನೀವು ಕಿವಿಗೆ ಹೂವು ಮುಡಿದುಕೊಂಡಾದರೂ ಬನ್ನಿ, ಏನಾದರೂ ಮಾಡಿ. ನೀವು (ಕಾಂಗ್ರೆಸ್‌ನವರು) ಅಲ್ಲೇ (ಪ್ರತಿಪಕ್ಷದ ಸಾಲಿನಲ್ಲಿ) ಇರುತ್ತೀರಿ. ನಾವು (ಬಿಜೆಪಿಯವರು) ಇಲ್ಲೇ (ಆಡಳಿತ ಪಕ್ಷದ ಸಾಲಿನಲ್ಲಿ) ಇರುತ್ತೀವಿ’ ಎಂದರು.

‘ಅವರು ಹೇಳುವುದೆಲ್ಲಾ ಬಜೆಟ್‌ ಪುಸ್ತಕದಲ್ಲಿದೆಯಾ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ‘ಇಡೀ ರಾಜ್ಯದ ಜನರಿಗೆ ಹೂವು ಇಡಲು ಹೊರಟಿದ್ದೀರಿ. ಏಳು ಕೋಟಿ ಜನರಿಗೆ ಮೋಸ ಮಾಡುತ್ತಿದ್ದೀರಿ. ಅದಕ್ಕಾಗಿ ನಾವು ಹೂವು ಮುಡಿದು ಬಂದಿದ್ದೇವೆ’ ಎಂದರು.

ADVERTISEMENT

‘ಎಲ್ಲದಕ್ಕೂ ಸಾಕ್ಷ್ಯ ಇದೆ’ ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ವಾಕ್ಸಮರದಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಮಧ್ಯ ಪ್ರವೇಶಿಸಿದ ಸ್ಪೀಕರ್‌, ‘ನೀವೆಲ್ಲ (ಬಿಜೆಪಿಯವರು) ಸಂತೋಷಪಡಬೇಕು. ಕೇಸರಿ ಬಣ್ಣ ನಮ್ದೇ ಅಂತ ಇಷ್ಟು ದಿನ ಹೇಳುತ್ತಿದ್ದೀರಿ. ಈಗ ಅವರು (ಕಾಂಗ್ರೆಸ್‌ನವರು) ಕೇಸರಿ ಬಣ್ಣದ ಹೂವು ಮುಡಿದು ಬಂದಿದ್ದಾರೆ ಅಲ್ಲವೆ’ ಎಂದು ಕೇಳಿದರು.

‘ಕೇಸರಿ ಬಣ್ಣ ಯಾರಿಗೂ ಸೇರಿದ್ದಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಕೆಲಕಾಲದ ಗದ್ದಲದ ಬಳಿಕ ಪುನಃ ಬಜೆಟ್‌ ಪ್ರತಿ ಕೈಗೆತ್ತಿಕೊಂಡ ಮುಖ್ಯಮಂತ್ರಿ ಓದು ಮುಂದುವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.