ADVERTISEMENT

ಮಾರ್ಚ್ 5ರಂದು ರಾಜ್ಯ ಬಜೆಟ್‌: ಈಡೇರುವುದೇ ಜಿಲ್ಲೆಯ ನಿರೀಕ್ಷೆ?

ಸೋಗಾನೆ ಬಳಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆ, ಎಂಪಿಎಂ ಪುನಃಶ್ಚೇತನಕ್ಕೆ ಅನುದಾನ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 12:59 IST
Last Updated 4 ಮಾರ್ಚ್ 2020, 12:59 IST
ಬಿ.ವೈ. ರಾಘವೇಂದ್ರ
ಬಿ.ವೈ. ರಾಘವೇಂದ್ರ   

ಶಿವಮೊಗ್ಗ: ರಾಜ್ಯದಲ್ಲಿ ಬಿಜೆಪಿಯ ಎರಡನೇ ಅಧಿಕಾರದ ಪರ್ವ ಆರಂಭವಾದ ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಗುರುವಾರ ಮಂಡಿಸುತ್ತಿರುವ ಬಜೆಟ್‌ ಸಹಜವಾಗಿ ಜಿಲ್ಲೆಯ ಜನರಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

2006ರಲ್ಲಿ ರಾಜ್ಯದಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಯಡಿಯೂರಪ್ಪ ಅವರು ಮೊದಲ ಆದ್ಯತೆ ನೀಡಿದ್ದೇ ನಗರದ ರಸ್ತೆಗಳ ವಿಸ್ತರಣೆಗೆ. ಪ್ರಮುಖವಾದ ನೆಹರು ರಸ್ತೆ, ಬಿ.ಎಚ್‌.ರಸ್ತೆ, ಸವಳಂಗ ರಸ್ತೆ, ಬಾಲರಾಜ್ ಅಸರ್‌ ರಸ್ತೆ, ವಿನೋನನಗರ, ಗೋಪಾಳ, ಸಾಗರ ರಸ್ತೆಗಳು ಸಾಕಷ್ಟು ವಿಸ್ತಾರಗೊಂಡು ದ್ವಿಪಥ ರಸ್ತೆಗಳಾಗಿದ್ದವು.

2008ರಲ್ಲಿ ಶಿವಮೊಗ್ಗ ಜಿಲ್ಲೆಯ ಅದೃಷ್ಟದ ಬಾಗಿಲು ಮತ್ತೊಂದು ಸುತ್ತು ತೆರೆದುಕೊಂಡಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಅಧಿಕಾರಕ್ಕೇರಿದ್ದರು. ಅಲ್ಲಿಂದ ಮೂರು ವರ್ಷಗಳ ಕಾಲ ಅಭಿವೃದ್ಧಿಯದೇಮಂತ್ರ. ಬಸ್‌ ನಿಲುಗಡೆಗೂ ಸಮಸ್ಯೆ ಇದ್ದ ನಗರದಲ್ಲಿಂದುವಿಮಾನ ನಿಲ್ದಾಣ ಆರಂಭಕ್ಕೆ ಮುನ್ನುಡಿ ಬರೆದಿದ್ದರು. ಏಕಲಾಲಕ್ಕೆ ನೂರಾರು ಬಸ್‌ಗಳು ನಿಲುಗಡೆ ಮಾಡಬಹುದಾದ ಹೈಟೆಕ್‌ ನಿಲ್ದಾಣಗಳು ತಲೆ ಎತ್ತಿದ್ದವು.ಸುಸಜ್ಜಿತ ರೈಲು ನಿಲ್ದಾಣ ನಿರ್ಮಿಸಿದ್ದರು.

ADVERTISEMENT

ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾಲಯ, ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ, ಪಶು ವೈದ್ಯಕೀಯ ಕಾಲೇಜು, ಜಿಲ್ಲಾ ಆಯುರ್ವೇದ ಆಸ್ಪತ್ರೆ, ಸುಸಜ್ಜಿತ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ, ನೂತನ ಕೇಂದ್ರ ಕಾರಾಗೃಹ, ಶಿವಪ್ಪ ನಾಯಕ ಮಾರುಕಟ್ಟೆ ಸಂಕೀರ್ಣಕ್ಕೂ ಹೇರಳವಾಗಿ ಅನುದಾನ ನೀಡಿದ್ದರು.

ಸೋಗಾನೆ ಬಳಿ ಆಯುರ್ವೇದ ವಿಶ್ವವಿದ್ಯಾಲಯ

ವಿಮಾನ ನಿಲ್ದಾಣದ ಕೆಲಸಗಳಿಗೆ ಈಗಾಗಲೇ ₹ 220 ಕೋಟಿ ಅನುದಾನ ನೀಡಿರುವ ಯಡಿಯೂರಪ್ಪ ಅವರು ಅದೇ ಸೋಗಾನೆ ಬಳಿ ಆಯುರ್ವೇದ ವಿಶ್ವವಿದ್ಯಾಲಯ ಸ್ಥಾಪನೆಗೂ ಒಲವು ತೋರಿದ್ದಾರೆ. ಅದಕ್ಕಾಗಿ ಬಜೆಟ್‌ನಲ್ಲಿ ₹ 100 ಕೋಟಿ ಮೀಸಲಿಡಬಹುದು ಎಂಬ ಸುಳಿವು ಇದೆ.

ಭದ್ರಾವತಿ ಎಂಪಿಎಂ ಪುನಃಶ್ಚೇತನ

ಭದ್ರಾವತಿ ನಗರದ ಆರ್ಥಿಕ ಬೆನ್ನೆಲುಬು ಮೈಸೂರು ಮೇಪರ್ ಮಿಲ್ಸ್. ಕೆಲವು ವರ್ಷಗಳಿಂದ ಆರ್ಥಿಕ ನಷ್ಟ ಅನುಭವಿಸುತ್ತಾ ಬಂದು ಈಗ ಸ್ಥಗಿತಗೊಂಡಿರುವ ಕಾರ್ಖಾನೆಯಪುನಃಶ್ಚೇತನಕ್ಕೆಯಡಿಯೂರಪ್ಪ ಅವರು ಬಜೆಟ್‌ನಲ್ಲಿ ಮರು ಜೀವ ನೀಡಬಹುದು ಎಂಬ ನಿರೀಕ್ಷೆ ಇದೆ. ಇದಕ್ಕೆ ಪೂರಕವಾಗಿ ಯಡಿಯೂರಪ್ಪ ಹಾಗೂ ಅವರ ಪುತ್ರ, ಸಂಸದ ಬಿ.ವೈ.ರಾಘವೇಂದ್ರ ಅವರು ಬಜೆಟ್‌ಗೂ ಮೊದಲುಪುನಃಶ್ಚೇತನ ಕುರಿತು ಅಧಿಕಾರಿಗಳ ಜತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದರು. ಹಾಗಾಗಿ, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬಹುದು ಎಂಬ ನಿರೀಕ್ಷೆ ಸಹಜವಾಗಿ ಹೆಚ್ಚಾಗಿದೆ.

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮೇಲ್ದರ್ಜೆಗೆ,ಕೌಶಲ ತರಬೇತಿ ಕೇಂದ್ರ, ಕೋಟೆ ಗಂಗೂರು ಬಳಿ ಕೋಚಿಂಗ್ ಘಟಕ, ಹೊರ ವರ್ತುಲ ರಸ್ತೆ, ತ್ಯಾವರೆಕೊಪ್ಪ ಹುಲಿಸಿಂಹ ಧಾಮದ ಉನ್ನತೀಕರಣ, ಎಲ್ಲ ಸರ್ಕಾರಿ ಕಚೇರಿಗಳನ್ನೂ ಒಂದೇ ಸೂರಿನಡಿ ತರುವ ನೂತನ ಜಿಲ್ಲಾಡಳಿತ ಭವನ, ಅಧಿಕ ಪ್ರಮಾಣದಲ್ಲಿ ಸರ್ಕಾರಿ ನೌಕರರ ವಸತಿ ಗೃಹಗಳ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ದೊರಕುವ ಸಾಧ್ಯತೆ ಇದೆ.

ಈಗಾಗಲೇ ಜಿಲ್ಲೆಯ ಶಿಕಾರಿಪುರ, ಸೊರಬ, ಶಿವಮೊಗ್ಗ ಗ್ರಾಮಾಂತರ ಭಾಗದ ನಿರೀರಾವರಿ ಯೋಜನೆಗಳಿಗೆ, ರೈಲ್ವೆ ಯೋಜನೆಗಳಿಗೆ ಸುಮಾರು 2 ಸಾವಿರ ಕೋಟಿ ಅನುದಾನ ಘೋಷಿಸಿದ್ದಾರೆ. ಬಜೆಟ್‌ನಲ್ಲಿ ಇನ್ನಷ್ಟು ನೀರಾವರಿ, ರೈಲ್ವೆ ಯೋಜನೆಗಳಿಗೆ ಹಣ ಮೀಸಲಿಡುವ ನಿರೀಕ್ಷೆ ಇದೆ. ರಸ್ತೆ, ಕುಡಿಯುವ ನೀರು ಮತ್ತಿತರ ಮೂಲ ಸೌಕರ್ಯಗಳಿಗೂ ಸಾಕಷ್ಟು ಅನುದಾನ ಹರಿದು ಬರುವನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.