ನಿರ್ಮಲಾ ಸೀತಾರಾಮನ್
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 8ನೇ ಬಾರಿ ಮಂಡಿಸುತ್ತಿರುವ ಬಜೆಟ್‌ನಲ್ಲಿ ಘೋಷಣೆಯಾದ ಅನುದಾನಗಳಲ್ಲಿ ಬಿಹಾರ ಸಿಂಹಪಾಲು ಪಡೆದಿದೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಹಾಗೂ ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಉತ್ತೇಜನ ದೊರೆತಿವೆ.
ಮಖಾನ ಮಂಡಳಿ ಸ್ಥಾಪನೆ: ಅಧಿಕ ಪೋಷಕಾಂಶಗಳ ಆಗರವಾಗಿರುವ ಹಾಗೂ ಅತಿ ಹೆಚ್ಚು ಬೇಡಿಕೆ ಹೊಂದಿರುವ ಕಮಲ ಹೂವಿನ ಬೀಜ (ಮಖಾನ) ಮಂಡಳಿಯನ್ನು ಬಿಹಾರಕ್ಕೆ ಕೇಂದ್ರ ಮಂಜೂರು ಮಾಡಿದೆ. ಈ ಉತ್ಪಾದನೆಯಲ್ಲಿ ತೊಡಗುವ ರೈತರಿಗೆ ರೈತ ಉತ್ಪಾದಕ ಸಂಸ್ಥೆಗಳ (FPO) ಮೂಲಕ ಉತ್ತೇಜನ ಸಿಗಲಿದೆ. ಜತೆಗೆ ಸರ್ಕಾರದಿಂದ ದೊರೆಯುವ ಎಲ್ಲಾ ಯೋಜನೆಗಳು ಇವರಿಗೆ ಸಿಗಲಿವೆ. ಆಹಾರ ಸಂಸ್ಕರಣೆಗೂ ಒತ್ತು.
ಆಹಾರ ತಂತ್ರಜ್ಞಾನ ಸಂಶೋಧನಾ ಸಂಸ್ಥೆ: ಪೂರ್ವೋದಯ ಯೋಜನೆ ಭಾಗವಾಗಿ ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ, ಉದ್ಯಮ ಮತ್ತು ನಿರ್ವಹಣಾ ಸಂಸ್ಥೆಯನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಐಐಟಿ ಪಟ್ನಾ ವಿಸ್ತರಣೆ: ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿಸುವ ಉದ್ದೇಶದಿಂದ ಐಐಟಿ ಪಟ್ನಾ ಸಾಮರ್ಥ್ಯ ಹೆಚ್ಚಿಸಲಾಗುವುದು ಎಂದು ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಗ್ರೀನ್ ಫೀಲ್ಡ್ ಏರ್‌ಪೋರ್ಟ್: ನಾಗರಿಕ ವಿಮಾನಯಾನಕ್ಕೆ ಇನ್ನಷ್ಟು ಉತ್ತೇನ ನೀಡುವುದರಿಂದ ಮುಂದಿನ 10 ವರ್ಷಗಳಲ್ಲಿ ಹೆಚ್ಚುವರಿ 4 ಕೋಟಿ ಪ್ರಯಾಣಿಕರು ಹೆಚ್ಚಳವಾಗುವ ನಿರೀಕ್ಷೆಯನ್ನು ಕೇಂದ್ರ ಹೊಂದಿದೆ. ಇದಕ್ಕೆ ಪೂರಕವಾಗಿ ಗ್ರೀನ್ ಫೀಲ್ಡ್ ಏರ್‌ಪೋರ್ಟ್ ಬಿಹಾರಕ್ಕೆ ಮಂಜೂರು ಮಾಡುತ್ತಿರುವುದಾಗಿ ಹೇಳಿದ್ದಾರೆ.
ಕೋಶಿ ಕಾಲುವೆ ಯೋಜನೆ: ಬಿಹಾರದ ಮಿಥಿಲಾಂಚಲದಲ್ಲಿರುವ ಕೋಶಿ ಕಾಲುವೆ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಘೋಷಣೆಯಾಗಿದೆ. ಗಂಗಾ, ಗಂಡಕಿ ಮತ್ತು ಮಹಾನಂದಾ ನದಿ ಹರಿಯುವ ಈ ಪ್ರದೇಶದ ನೀರಾವರಿ ಯೋಜನೆ ಉತ್ತೇಜನಕ್ಕೆ ವಿತ್ತಸಚಿವೆ ನಿರ್ಮಲಾ ಘೋಷಿಸಿದ್ದಾರೆ. ಈ ಯೋಜನೆ ಅನುಷ್ಠಾನದಿಂದ 50 ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದೆ ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.
ಜಾಗತಿಕ ಮತ್ಸೋದ್ಯಮ ಬೆಳವಣಿಗೆಯ ಲಾಭವನ್ನು ಪಡೆಯುವ ಉದ್ದೇಶದಿಂದ ಸಾಗರಕ್ಕೆ ಹೊಂದಿಕೊಂಡಿರುವ ಭೂಪ್ರದೇಶಗಳಿಗೆ ಹೆಚ್ಚಿನ ಘೋಷಣೆ ಬಜೆಟ್‌ನಲ್ಲಿ ಮಾಡಲಾಗಿದೆ. ವಾರ್ಷಿಕ ₹60 ಸಾವಿರ ಕೋಟಿ ರಫ್ತು ವ್ಯವಹಾರನವ್ನು ಮತ್ಸೋದ್ಯಮ ಹೊಂದಿದೆ. ಇದಕ್ಕಾಗಿ ಭಾರತೀಯ ವಿಶೇಷ ಆರ್ಥಿಕ ವಲಯವನ್ನು ನಿರ್ಮಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರ ಭಾಗವಾಗಿ ಅಂಡಮಾನ್, ನಿಕೋಬಾರ್ ಮತ್ತು ಲಕ್ಷದ್ವೀಪಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಸಾರಜನಕ (ಯೂರಿಯಾ) ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಪೂರ್ವ ಭಾಗದಲ್ಲಿನ ಮೂರು ಯೂರಿಯಾ ಘಟಕಗಳನ್ನು ಮರಳಿ ತೆರೆಯುವುದಾಗಿ ಘೋಷಿಸಲಾಗಿದೆ. 12.7 ಲಕ್ಷ ಮೆಟ್ರಿಕ್ ಟನ್ ವಾರ್ಷಿಕ ಉತ್ಪಾದನಾ ಸಾಮರ್ಥ್ಯ ಹೊಂದಿರುವ ಘಟಕವನ್ನು ಅಸ್ಸಾಂನಲ್ಲಿ ಆರಂಭಿಸಲು ಅನುದಾನ ನೀಡುವುದಾಗಿ ಘೋಷಿಸಲಾಗಿದೆ.
ಪೋಷಣ್ 2.0: ದೇಶದ ಅಂಗವಾಡಿಯಲ್ಲಿ ಪೋಷಣ್ 2.0 ಯೋಜನೆಯನ್ನು ಜಾರಿಗೊಳಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದರಿಂದ 8 ಕೋಟಿ ಮಕ್ಕಳಿಗೆ ಹಾಗೂ 1 ಕೋಟಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ನೆರವಾಗಲಿದೆ. ಈಶಾನ್ಯ ರಾಜ್ಯಗಳನ್ನೂ ಒಳಗೊಂಡಂತೆ 20 ಲಕ್ಷ ವಯಸ್ಕ ಬಾಲಕಿಯರಿಗೆ ನೆರವಾಗಲಿದೆ ಎಂದು ಹೇಳಲಾಗಿದೆ.
ಉಡಾನ್ ಯೋಜನೆ: ಪ್ರಾದೇಶಿಕ ಸಂಪರ್ಕ ಯೋಜನೆಯ ಭಾಗವಾಗಿ ಜಾರಿಗೆ ಬಂದ ‘ಉಡಾನ್’ ಅನ್ನು 120 ಹೊಸ ಸ್ಥಳಗಳಿಗೆ ವಿಸ್ತರಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಮುಂದಿನ ಹತ್ತು ವರ್ಷಗಳಲ್ಲಿ ವಾಯುಯಾನ ಅಳವಡಿಸಿಕೊಳ್ಳುವ ಹೆಚ್ಚುವರಿ 4 ಕೋಟಿ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹಾಗೂ ಪರ್ವತ ಪ್ರದೇಶ ಒಳಗೊಂಡ ಈಶಾನ್ಯ ರಾಜ್ಯಗಳಿಗೆ ಈ ಯೋಜನೆ ವಿಸ್ತರಿಸುವ ಕುರಿತು ಪ್ರಸ್ತಾಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.