ADVERTISEMENT

ಸರಳ - ನಿರ್ಮಲ; ತೆರಿಗೆದಾರರ ಗೊಂದಲ

ಹಣಕಾಸು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2020, 19:49 IST
Last Updated 1 ಫೆಬ್ರುವರಿ 2020, 19:49 IST
   

ವೈಯಕ್ತಿಕ ತೆರಿಗೆದಾರರು ಸುಲಭವಾಗಿ ತಮ್ಮ ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ತಾವೇ ಭರಿಸಿ ಸಲ್ಲಿಸುವ ದೃಷ್ಟಿಯಿಂದ ‘ಸರಳೀಕೃತ’ ತೆರಿಗೆ ನಿಯಮಾವಳಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್ ಅನೇಕ ಹೊಸ ತೆರಿಗೆ ದರಗಳನ್ನು ಹಾಗೂ ಆದಾಯ ಮಿತಿಗಳನ್ನು ಪ್ರಸ್ತಾಪಿಸಿದ್ದಾರೆ. ಮೇಲ್ನೋಟಕ್ಕೆ ಭಾರೀ ತೆರಿಗೆ ದರ ಕಡಿತದಂತೆ ಕಂಡುಬಂದರೂ, ಅದರ ಹಿಂದೆ ಅನೇಕ ಕೂಲಂಕಶ ಅಂಶಗಳ ಪರಿಗಣನೆಯೊಂದಿಗಷ್ಟೇ ಹೊಸ ನಿಯಮಾವಳಿಗಳನ್ನು ಅರ್ಥೈಸಬಹುದಾಗಿದೆ. ಅವರ ಮೂಲ ಉದ್ದೇಶವಾದ ಸರಳೀಕೃತ ತೆರಿಗೆ ವಿಧಾನದ ಜಾರಿಗೆ ಇಂತಹ ಒಳ ಅಂಶಗಳು ಎಷ್ಟು ಉಪಯುಕ್ತವಾದೀತು ಎಂಬುದು ಇನ್ನೂ
ಸಾಬೀತಾಗಬೇಕಾಗಿದೆ.

ಆರ್ಥಿಕ ಸಚಿವರು ಪ್ರಸ್ತಾಪಿಸಿರುವಂತೆ ತೆರಿಗೆದಾರರಿಗೆ ಪ್ರಸ್ತುತ ಜಾರಿಯಲ್ಲಿರುವ ಅಥವಾ ಹೊಸ ತೆರಿಗೆ ನಿಯಮಾವಳಿಗಳಲ್ಲಿ ಯಾವುದು ಅನುಕೂಲಕರವೋ ಅದನ್ನು ಪರಿಗಣಿಸಿ ತಮ್ಮ ನಿರ್ಧಾರ ಕೈಗೊಳ್ಳುವ ಅವಕಾಶ ಕಲ್ಪಿಸಿ ಕೊಡಲಾಗಿದೆ. ಬಹುತೇಕ ಸಂದರ್ಭಗಳಲ್ಲಿ ಇಂತಹ ಎರಡೆರಡು ಅವಕಾಶಗಳನ್ನು ತೆರಿಗೆದಾರರಿಗೆ ಕೊಟ್ಟಾಗ ತಮ್ಮ ವೈಯಕ್ತಿಕ ನಿರ್ಧಾರ ಕೈಗೊಳ್ಳುವಲ್ಲಿ ಹಲವಾರು ಬಾರಿ ಗೊಂದಲಕ್ಕೀಡಾಗಿ ಕೊನೆಗೆ ‘ತೆರಿಗೆ ಸಲಹೆಗಾರ’ರ ಮೊರೆ ಹೋಗಬೇಕಾಗುವ ಹೊಸದೊಂದು ಸ್ಥಿತಿ ನಿರ್ಮಾಣವಾಗಿದೆ.

ಈತನಕ ಇದ್ದ ಶೇಕಡ 5 ರಿಂದ ಶೇಕಡ 30ರ ತೆರಿಗೆ ದರದಲ್ಲಿ ಮತ್ತಷ್ಟು ಹೊಸ ದರಗಳನ್ನು ಸೇರಿಸುವ ಮೂಲಕ ತೆರಿಗೆದಾರರು ಯಾವುದೇ ತೆರಿಗೆ ವಿನಾಯಿತಿಯ ಲಾಭ ಪಡೆಯದೆ, ತೆರಿಗೆ ದರ ಇಳಿಕೆಯ ಲಾಭ ಪಡೆಯುವ ವಿಧಾನವನ್ನು ಸರಕಾರ ಈ ಬಾರಿ ಪ್ರಸ್ತಾಪಿಸಿದೆ. ಇದರಂತೆ ತೆರಿಗೆದಾರರು ಉಳಿತಾಯಕ್ಕೆ ಸಂಬಂದಿಸಿದ ಯಾವುದೇ ಹೂಡಿಕೆಗಳ ಲಾಭ ಪಡೆಯುವಂತಿಲ್ಲ. ಬದಲಾಗಿ ತೆರಿಗೆ ದರ ಇಳಿಮುಖವಾದ ಪರಿಣಾಮವಾಗಿ ಉಂಟಾದ ಲಾಭವನ್ನುಪ್ರಸ್ತುತ ಜಾರಿಯಲ್ಲಿರುವ ನಿಯಮ ಹಾಗೂ ಹೊಸ ನಿಯಮಾವಳಿಗಳ ತುಲನೆಯ ನಂತರ ನಿರ್ಧರಿಸಬಹುದಷ್ಟೇ.

ADVERTISEMENT

ಹೊಸ ವಿಧಾನದ ಪ್ರಕಾರ, ಇಳಿಮುಖ ತೆರಿಗೆ ದರದ ಲಾಭ ಪಡೆಯಲು ಸೆಕ್ಷನ್ 80 ಸಿ ಯಡಿ ಸಿಗುವ ಉಳಿತಾಯಕ್ಕಿರುವ ತೆರಿಗೆ ಲಾಭ, 80 ಡಿ ಇದರಡಿ ಸಿಗುವ ಮೆಡಿಕೈಮ್ ಲಾಭ, ರಜಾ ಪ್ರವಾಸ ಭತ್ಯೆ, ರೂಪಾಯಿ 50000 ದ ಸ್ಟ್ಯಾಂಡರ್ಡ ಡಿಡಕ್ಷನ್, ಸೆಕ್ಷನ್ 80 ಇ ಇದರಡಿ ಸಿಗುವ ವಿದ್ಯಾಭ್ಯಾಸ ಸಾಲದ ಮೇಲಣ ಬಡ್ಡಿ ಪಾವತಿಗಿರುವ ವಿನಾಯಿತಿ ಇತ್ಯಾದಿಗಳನ್ನು ಬಿಟ್ಟು ಕೊಡಬೇಕಾಗುತ್ತದೆ. ಹೀಗಾಗಿ ಹಳೆಯ ವಿಧಾನ ಹಾಗೂ ಹೊಸ ತೆರಿಗೆ ನಿಯಮದಡಿಯಲ್ಲಿ ಯಾವುದು ನಿಜವಾಗಿ ಲಾಭದಾಯಕ ಎಂಬುದನ್ನು ಮೇಲ್ನೋಟದಿಂದ ನಿರ್ಧಸುವುದು ವಾಸ್ತವದಲ್ಲಿ ಕಷ್ಟಕರ. ಒಂದು ರೀತಿಯಲ್ಲಿ, ಕೇವಲ ತೆರಿಗೆ ಉಳಿಸುವ ದೃಷ್ಟಿಯಲ್ಲಷ್ಟೇ ಹೂಡಿಕೆ ಮಾಡುವ ತೆರಿಗೆದಾರರ ವರ್ಗದಿಂದ ಹೊಸ ಹೂಡಿಕೆಯ ಅವಕಾಶಗಳನ್ನು ಇದರ ಪರಿಣಾಮವಾಗಿ ನಿರೀಕ್ಷಿಸುವಂತಿಲ್ಲ. ಹೀಗಾಗಿ, ಇದು ತೆರಿಗೆ ಸಂಬಂಧಿತ ಮ್ಯೂಚುವಲ್ ಫಂಡ್, ಜೀವ ವಿಮಾ ಸಂಸ್ಥೆಗಳ ವ್ಯವಹಾರದ ಮೇಲೂ ಒಂದಿಷ್ಟು ಪರಿಣಾಮ ಬೀರಲಿದೆ.

ಪ್ರಸ್ತುತ ಆದಾಯ ತೆರಿಗೆ ನಿಯಮದಡಿ ಹೂಡಿಕೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ವಿನಾಯಿತಿಗಳಿವೆ ಹಾಗೂ ತೆರಿಗೆ ರಿಯಾಯಿತಿಗಳಿವೆ. ಇದರ ಪರಿಣಾಮವಾಗಿ ತೆರಿಗೆದಾರರು ಬಹಳಷ್ಟು ಗೊಂದಲದಲ್ಲಿದ್ದಾರೆಂದು ವಿತ್ತ ಸಚಿವರು ತಮ್ಮ ಬಜೆಟ್ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ತೆರಿಗೆ ಸಲಹೆಗಾರರ ನೆರವಿಲ್ಲದೆ ಯಾವುದರಲ್ಲಿ ಹೂಡಿಕೆ ಸೂಕ್ತ, ಯಾವೆಲ್ಲ ಭತ್ಯೆಗಳ ವಿನಾಯಿತಿ ಪಡೆಯಬಹುದು ಎಂಬಿತ್ಯಾದಿ ವಿಚಾರಗಳ ಬಗ್ಗೆ ಸ್ವಂತ ನಿರ್ಧಾರ ಕೈಗೊಳ್ಳುವುದು ಕಷ್ಟಕರ ಎಂಬ ಕಾರಣಕ್ಕೆ ಇಂತಹ ಹೊಸದೊಂದು ನಿಯಮದ ಪ್ರಸ್ತಾಪ ಮಾಡಲಾಗಿದೆ. ಇದು ಯಾವುದೇ ರೀತಿಯ ರಿಯಾಯಿತಿ-ವಿನಾಯಿತಿಗಳ ತಿಳುವಳಿಕೆಯ ಗೌಜಿಗೆ ಹೋಗದೆ, ಸಿಗುವ ಆದಾಯದ ಮೇಲೆ ನಿಗದಿಪಡಿಸಿದ ಹೊಸ ತೆರಿಗೆ ದರ ಅನ್ವಯಿಸಿ ರಿಟರ್ನ್ಸ್ ಸಲ್ಲಿಸಲು ಅನುಕೂಲ ಮಾಡಿಕೊಡುವ ಇನ್ನೊಂದು ವಿಧಾನವಷ್ಟೆ. ಆದರೆ, ನಿಜವಾಗಿ ತೆರಿಗೆ ಉಳಿಸುವ ಹಾಗೂ ಹೂಡಿಕೆಗಳಲ್ಲಿ ಆಸಕ್ತಿಉಳ್ಳ ವ್ಯಕ್ತಿಗಳು ಖಂಡಿತವಾಗಿ ಇದರ ಪ್ರಯೋಜನ ಪಡೆದಾರೆಂಬ ಹೇಳಿಕೆಯನ್ನು ಒಮ್ಮೆಲೆ ಹೀಳಲಾಗದು.

ಹೀಗಾಗಿ ಈ ಎರಡು ತೆರಿಗೆ ವಿಧಾನಗಳಲ್ಲಿ ಸೂಕ್ತ ವಿಧಾನ ಅನುಸರಿಸುವ ಮೊದಲು, ಹೂಡಿಕೆ ಹಾಗೂ ವಿನಾಯಿತಿಗಳ ಲಾಭ ಪಡೆಯದೆ ಬರುವ ತೆರಿಗೆ ಹಾಗೂ ಪ್ರಸ್ತುತ ಜಾರಿಯಲ್ಲಿರುವ ಹೂಡಿಕೆಗಳ ಮೇಲಣ ತೆರಿಗೆ ಲಾಭ ಪಡೆದಾಗ ಬರುವ ತೆರಿಗೆ ಇವೆರಡನ್ನೂ ಪ್ರತ್ಯೇಕವಾಗಿ ಲೆಕ್ಕ ಹಾಕಿದಾಗ ಯಾವುದು ಲಾಭದಾಯಕವೋ ಅದನ್ನು ತೆರಿಗೆದಾರ ಪರಿಗಣಿಸಬೇಕು. ಅಧಿಕ ತೆರಿಗೆ ವಿನಾಯಿತಿ ಪಡೆಯುತ್ತಿರುವವರಿಗೆ ಹೊಸ ನಿಯಮಾವಳಿ ಎಲ್ಲ ದೃಷ್ಟಿಯಿಂದ ಲಾಭದಾಯಕ ಆಗಲಾರದು. ಒಂದುವೇಳೆ, ವರ್ಷದ ಕೊನೆಯೊಳಗೆ ನಿಗದಿಪಡಿಸಿದಂತೆ ಯಾವುದೇ ಕಾರಣಕ್ಕೆ ಹೂಡಿಕೆ ಮಾಡಲಾಗದಿದ್ದರೆ, ಹೊಸ ನಿಯಮಾವಳಿಯ ಪ್ರಕಾರ ತೆರಿಗೆ ಲಾಭ ಇದೆಯೆ ಎನ್ನುವುದನ್ನು ರಿಟರ್ನ್ಸ್ ಸಲ್ಲಿಕೆ ಮಾಡುವ ಮೊದಲು ನೋಡಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬಹುದು.

ಡಿವಿಡೆಂಡ್ ಆದಾಯದ ಮೇಲೆ ಈತನಕ ಕಂಪನಿಗಳೇ ಶೇಕಡ 15ರ ದರದಲ್ಲಿ ತೆರಿಗೆ ಕಡಿತಗೊಳಿಸಿ ಉಳಿದ ಮೊತ್ತವನ್ನು ಹೂಡಿಕೆದಾರರಿಗೆ ಕೊಡುತ್ತಿದ್ದವು. ಇದರಿಂದಾಗಿ ಶೇಕಡ 15 ಕ್ಕಿಂತ ಕಡಿಮೆ ದರದಲ್ಲಿ ತೆರಿಗೆ ಪಾವತಿಮಾಡುವ ತೆರಿಗೆದಾರರಿಂದ ಪರೋಕ್ಷವಾಗಿ ಅಧಿಕ ತೆರಿಗೆ ವಸೂಲಿ ಮಾಡಿದಂತಾಗುತ್ತಿತ್ತು. ಇದರ ಪರಿಣಾಮವನ್ನು ತಗ್ಗಿಸುವ ದೃಷ್ಟಿಯಲ್ಲಿ ಮುಂದಿನ ತೆರಿಗೆ ವರ್ಷದಿಂದ ಅನ್ವಯವಾಗುವಂತೆ, ಇನ್ನು ಮುಂದೆ ಕಂಪನಿಗಳು ಡಿವಿಡೆಂಡ್ ಮೇಲೆ ತೆರಿಗೆ ಕಡಿತಗೊಳಿಸುವ ಬದಲು ಪೂರ್ಣ ಮೊತ್ತವನ್ನು ಹೂಡಿಕೆದಾರರಿಗೆ ಹಂಚಿಕೆ ಮಾಡಲಿವೆ. ಹಾಗಾಗಿ ಹೂಡಿಕೆದಾರರು ಅವರವರ ತೆರಿಗೆ ದರಕ್ಕನುಗುಣವಾಗಿ ತೆರಿಗೆ ಪಾವತಿಸುವ ಅಗತ್ಯವಿದೆ. ಇದರ ಪರಿಣಾಮವಾಗಿ ಶೇಕಡ 15ರ ದರಕ್ಕಿಂತ ಅಧಿಕ ತೆರಿಗೆ ದರ ಹೊಂದಿದ ವ್ಯಕ್ತಿಗಳಿಗೆ ಒಂದಿಷ್ಟು ನಷ್ಟ ಹಾಗೂ ಅದಕ್ಕಿಂತ ಕಡಿಮೆ ತೆರಿಗೆ ಆದಾಯ ಇರುವವರಿಗೆ ಲಾಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.