ಬಜೆಟ್ ಪ್ರತಿ ಇರುವ ಟ್ಯಾಬ್‌ನೊಂದಿಗೆ ಸಂಸತ್ ಭವನಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ನವದೆಹಲಿ: ಮಹಿಳೆಯರ ಸಬಲೀಕರಣ ಹಾಗೂ ಅವರನ್ನು ವಿವಿಧ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವ ಸಲುವಾಗಿ ಉತ್ತೇಜಿಸುವ ನಿಟ್ಟಿನಲ್ಲಿ ಮಹಿಳೆಯರು ಹಾಗೂ ಹೆಣ್ಣುಮಕ್ಕಳಿಗೆ ಅನುಕೂಲವಾಗುವ ಯೋಜನೆಗಳಿಗೆ ₹3 ಲಕ್ಷ ಕೋಟಿಯನ್ನು ಮೀಸಲಿಡುವುದಾಗಿ ಬಜೆಟ್‌ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಇಂದು 18ನೇ ಲೋಕಸಭೆಯ ಮೊದಲ ಬಜೆಟ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದರು.
ದೇಶದ ಆರ್ಥಿಕತೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಬಜೆಟ್‌ನಲ್ಲಿ ₹3 ಲಕ್ಷ ಕೋಟಿಯನ್ನು ಘೋಷಿಸಲಾಗಿದೆ. ಉದ್ಯೋಗ ಕ್ಷೇತ್ರದಲ್ಲಿ ಮಹಿಳೆಯರನ್ನು ಭಾಗವಹಿಸಲು ಅನುಕೂಲವಾಗುವಂತೆ ಉದ್ಯೋಗಿ ಮಹಿಳಾ ವಸತಿ ನಿಲಯಗಳನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ.
ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಸ್ವಾಧಾರ್ ಗ್ರೆಹ್, ವಸತಿ ನಿಲಯ ಯೋಜನೆಗಳಿಗೆ ₹2,516 ಕೋಟಿ ಮೀಸಲಿಡಲಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಪ್ರಮುಖ ಯೋಜನೆಗಳಾದ ಸಕ್ಷಮ್ ಅಂಗನವಾಡಿ ಮತ್ತು ಪೋಷಣ 2.0, ಮಿಷನ್ ವಾತ್ಸಲ್ಯ ಮತ್ತು ಮಿಷನ್ ಶಕ್ತಿ, ಪೌಷ್ಟಿಕತೆ, ಮಕ್ಕಳ ರಕ್ಷಣೆ ಮತ್ತು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಮಹಿಳೆಯರಿಗೆ ಅನುದಾನ ಮೀಸಲಿಡಲಾಗಿದೆ.
ಮಿಷನ್ ವಾತ್ಸಲ್ಯ ಯೋಜನೆಗೆ ₹,472 ಕೋಟಿ, ಸಂಬಲ್ ಯೋಜನೆಯಡಿ ಬೇಟಿ ಬಚಾವೋ ಬೇಟಿ ಪಢಾವೋ ಮತ್ತು ಮಹಿಳಾ ಸುರಕ್ಷತೆಗಾಗಿ ಒನ್ ಸ್ಟಾಪ್ ಸೆಂಟರ್‌ಗಳಂತಹ ಯೋಜನೆಗಳಿಗೆ ₹629 ಕೋಟಿ ಘೋಷಸಲಿದೆ. ಮಿಷನ್ ಶಕ್ತಿ ಇನ್ನಿತರೆ ಯೋಜನೆಗಳಿಗೆ ₹3,145 ಕೋಟಿ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.