ADVERTISEMENT

ಕೇಂದ್ರ ಬಜೆಟ್ ವಿಶ್ಲೇಷಣೆ: ರಕ್ಷಣಾ ಕ್ಷೇತ್ರದಲ್ಲಿ ಪರಿವರ್ತನೆಯ ಘಟ್ಟ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 23:17 IST
Last Updated 1 ಫೆಬ್ರುವರಿ 2026, 23:17 IST
ಆದ್ಯಾ ಮಾಧವನ್
ಆದ್ಯಾ ಮಾಧವನ್   

ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ಬದಲಾವಣೆಗಳು, ಭಾರತವು ಪಾಕಿಸ್ತಾನದ ಜೊತೆ ಹೊಂದಿರುವ ಸಂಘರ್ಷದ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್‌ನಲ್ಲಿ ರಕ್ಷಣಾ ವಲಯದ ಬಗ್ಗೆ ಯಾವ ಘೋಷಣೆಗಳು ಇರಬಹುದು ಎಂಬ ಕುರಿತಾಗಿ ಬಹಳಷ್ಟು ನಿರೀಕ್ಷೆಗಳಿದ್ದವು. ಮುಂಬರುವ ಹಣಕಾಸು ವರ್ಷಕ್ಕೆ ಕೇಂದ್ರ ಸರ್ಕಾರ ರಕ್ಷಣಾ ಕ್ಷೇತ್ರಕ್ಕೆ ನಿಗದಿ ಮಾಡಿರುವ ಒಟ್ಟು ಮೊತ್ತವು ₹7.84 ಲಕ್ಷ ಕೋಟಿ ಆಗಿದೆ.

ಕಳೆದ ಕೆಲವು ವರ್ಷಗಳಿಂದ ರಕ್ಷಣಾ ಕ್ಷೇತ್ರಕ್ಕೆ ನಿಗದಿ ಮಾಡುವ ಮೊತ್ತದಲ್ಲಿ ಸ್ಥಿರವಾಗಿ, ಹಂತ ಹಂತವಾಗಿ ಹೆಚ್ಚಳ ಮಾಡಲಾಗಿದೆ. ಆದರೆ ಜಿಡಿಪಿ ಜೊತೆ ಹೋಲಿಸಿದಾಗ ಕಳೆದ ವರ್ಷದವರೆಗೆ ರಕ್ಷಣಾ ಕ್ಷೇತ್ರಕ್ಕೆ ನಿಗದಿ ಮಾಡಿದ ಪ್ರಮಾಣ ನಿಧಾನವಾಗಿ ಕಡಿಮೆ ಆಗುತ್ತಿತ್ತು. ರಕ್ಷಣಾ ಕ್ಷೇತ್ರಕ್ಕೆ ಮಾಡುವ ವೆಚ್ಚವು ಜಿಡಿಪಿಯ ಶೇ 3ರಷ್ಟಕ್ಕೆ ನಿಗದಿ ಮಾಡಬೇಕು ಎಂದು ತಜ್ಞರು ಆಗ್ರಹಿಸುತ್ತಿದ್ದಾರೆ. ಈಗ, 2020ರ ನಂತರ ಇದೇ ಮೊದಲ ಬಾರಿಗೆ ‍ಪ್ರಮಾಣದಲ್ಲಿ ಗಣನೀಯ ಹೆಚ್ಚಳ ಆಗಿದೆ, ಅದು ಜಿಡಿಪಿಯ ಶೇ 1.91ರ ಮಟ್ಟದಿಂದ ಏರಿಕೆ ಕಂಡಿದೆ.

ಕುತೂಹಲಕರ ವಿಷಯವೆಂದರೆ, ವರ್ಷದಿಂದ ವರ್ಷಕ್ಕೆ ಏರಿಕೆಯು ಕಳೆದ ಒಂದು ದಶಕದಲ್ಲಿ ಹಂತ ಹಂತವಾಗಿ ಆಗುತ್ತಿದ್ದರೂ, ವಾರ್ಷಿಕ ಹಣದುಬ್ಬರ ಪ್ರಮಾಣಕ್ಕೆ ಸರಿಹೊಂದಿಸಿ ನೋಡಿದರೆ, ಏರಿಕೆಯ ಪ್ರಮಾಣ ಅಷ್ಟೊಂದು ಇಲ್ಲದಿರುವುದು ಗೊತ್ತಾಗುತ್ತದೆ.

ADVERTISEMENT

ಈ ವರ್ಷದ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ನಿಗದಿ ಮಾಡಿರುವ ₹7.8 ಲಕ್ಷ ಕೋಟಿಯು ಕಳೆದ ವರ್ಷದ ₹6.81 ಲಕ್ಷ ಕೋಟಿಗಿಂತ ಶೇ 15.2ರಷ್ಟು ಹೆಚ್ಚು. ಇದನ್ನು 2025–26ನೇ ಸಾಲಿನ ಅಂದಾಜು ಹಣದುಬ್ಬರ ಪ್ರಮಾಣವಾದ ಶೇ 4ರ ಜೊತೆ ಹೋಲಿಸಿದಾಗ, ‘ನಿಜವಾದ’ ಖರೀದಿ ವೆಚ್ಚವು ಶೇ 11ರಷ್ಟು ಹೆಚ್ಚಾಗುತ್ತದೆ. ಇದು ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ವರ್ಷವೊಂದರಲ್ಲಿ ಆಗಿರುವ ದೊಡ್ಡ ಏರಿಕೆ.

ಈ ವರ್ಷದ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರದ ಪಾಲು ಶೇ 14.6ರಷ್ಟಿದೆ. ಇದರಲ್ಲಿ ₹2.19 ಲಕ್ಷ ಕೋಟಿ ಮೊತ್ತ ಬಂಡವಾಳ ವೆಚ್ಚಗಳಿಗೆ ವಿನಿಯೋಗವಾಗಲಿದೆ. ಪರಿಷ್ಕೃತ ಅಂದಾಜು ಮೊದಲ ಅಂದಾಜಿಗಿಂತ ಹೆಚ್ಚಾಗುತ್ತದೆಯಾದರೂ, 2025ರಲ್ಲಿ ‘ಸಿಂಧೂರ ಕಾರ್ಯಾಚರಣೆ’ಯ ನಂತರದ ತುರ್ತು ಖರೀದಿಗಳ ಕಾರಣದಿಂದಾಗಿ ವೆಚ್ಚಗಳು ತುಸು ಜಾಸ್ತಿ ಆಗಿರಬಹುದು. ಹಿಂದಿನ ವರ್ಷದ ಬಜೆಟ್‌ನಲ್ಲಿ ಬಂಡವಾಳ ವೆಚ್ಚಗಳಿಗೆ ಆರಂಭದಲ್ಲಿ ₹1.80 ಲಕ್ಷ ಕೋಟಿ ಇರಿಸಲಾಗಿತ್ತು. ನಂತರ ಇದು ₹1.86 ಲಕ್ಷ ಕೋಟಿಗೆ ಹೆಚ್ಚಾಯಿತು. ಆ ಮೊತ್ತಗಳಿಗೆ ಹೋಲಿಸಿದರೆ ಈ ಬಾರಿ ನಿಗದಿ ಮಾಡಿರುವ ಮೊತ್ತ ದೊಡ್ಡದು. ಈ ಬಾರಿಯದ್ದು ರಕ್ಷಣಾ ವಲಯದ ಆಧುನೀಕರಣಕ್ಕೆ ನಿಗದಿ ಮಾಡಿರುವ ಅತಿದೊಡ್ಡ ಮೊತ್ತ.

ಒಟ್ಟಾರೆ ಬಂಡವಾಳ ವೆಚ್ಚದಲ್ಲಿ ರಕ್ಷಣಾ ವಲಯದ ಬಂಡವಾಳ ವೆಚ್ಚವು ಶೇ 18ರಷ್ಟು ಇರಲಿದೆ. ಈ ಬಾರಿಯ ರಕ್ಷಣಾ ಬಜೆಟ್‌ನಲ್ಲಿ ಬಂಡವಾಳ ವೆಚ್ಚಕ್ಕಾಗಿನ ಮೊತ್ತವು ಶೇ 27.9ರಷ್ಟಾಗುತ್ತದೆ. ಪಿಂಚಣಿಗೆ ನೀಡುವ ಮೊತ್ತವು ನಿಧಾನವಾಗಿ ಹೆಚ್ಚುತ್ತಿದ್ದರೂ, ರಕ್ಷಣಾ ವಲಯಕ್ಕೆ ನೀಡಿರುವ ಒಟ್ಟು ಮೊತ್ತ ಹೆಚ್ಚಾಗಿರುವ ಪರಿಣಾಮವಾಗಿ ಪಿಂಚಣಿಗಾಗಿ ಮೀಸಲಾಗಿ ಇಟ್ಟಿರುವ ಪ್ರಮಾಣವು ಕಡಿಮೆ ಆದಂತಾಗುತ್ತದೆ. ಬದ್ಧ ವೆಚ್ಚಗಳಿಗಿಂತಲೂ ಬಂಡವಾಳ ವೆಚ್ಚವು ನಿಧಾನವಾಗಿಯಾದರೂ ಸುಧಾರಿಸುತ್ತಿದೆ.

ಆಧುನೀಕರಣ ಹಾಗೂ ಖರೀದಿಗೆ ಗಮನ ನೀಡಲಾಗುತ್ತದೆ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಅದರಲ್ಲೂ ವಿಮಾನ ಹಾಗೂ ವಿಮಾನಗಳ ಎಂಜಿನ್‌ಗೆ ₹63,733 ಕೋಟಿ, ಯುದ್ಧ ನೌಕೆಗಳಿಗೆ ₹25,023 ಕೋಟಿ ನಿಗದಿ ಮಾಡಲಾಗಿದೆ. ಫ್ರಾನ್ಸ್‌ನಿಂದ 114 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸುವ ಘೋಷಣೆ ಆದ ನಂತರದಲ್ಲಿ ಈ ಕ್ರಮಗಳು ಬಂದಿವೆ. ಬಂಡವಾಳ ವೆಚ್ಚದಲ್ಲಿ ಹೆಚ್ಚಿನ ಪಾಲು ದೇಶಿ ಉತ್ಪಾದನೆಗೆ ಮತ್ತು ದೇಶಿ ಉದ್ಯಮಗಳಿಂದ ಖರೀದಿಗೆ ಮೀಸಲಾಗಿ ಇರಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ. ಜಾಗತಿಕ ಮಟ್ಟದಲ್ಲಿ ಪೂರೈಕೆ ವ್ಯವಸ್ಥೆಯಲ್ಲಿನ ಅಡಚಣೆಗಳ ಸಂದರ್ಭದಲ್ಲಿ ಈ ಕ್ರಮವು ನಿರೀಕ್ಷಿತವೇ.

2026–27ನೇ ಸಾಲಿನ ಬಜೆಟ್‌ ಒಂದು ಪರಿವರ್ತನೆಯ ಹಂತದಂತಿದೆ. ಆದರೆ ಬಜೆಟ್‌ನಲ್ಲಿ ಹೇಳಿದ ಮಾತುಗಳ ಅನುಷ್ಠಾನ, ಕಾಲಮಿತಿ, ವೆಚ್ಚ ಹೆಚ್ಚು ಮಾಡದೆ ಹೇಳಿದ್ದನ್ನು ತಯಾರಿಸಿಕೊಡುವ ದೇಶಿ ಕಂಪನಿಗಳ ಸಾಮರ್ಥ್ಯ ಆಧುನೀಕರಣದ ಗತಿಯನ್ನು ನಿರ್ಧರಿಸಲಿವೆ. ಚೀನಾ ಮತ್ತು ಪಾಕಿಸ್ತಾನದ ಕಡೆಯಿಂದ ಎದುರಾಗುವ ಸವಾಲುಗಳು ಇರುತ್ತವೆ. ಹೀಗಾಗಿ ಮುಂದಿನ ದಿನಗಳಲ್ಲಿ ರಕ್ಷಣಾ ಕ್ಷೇತ್ರಕ್ಕೆ ಎಷ್ಟು ವೆಚ್ಚ ಮಾಡಲಾಗುತ್ತದೆ ಎಂಬುದು ಕೂಡ ಈಗಿನ ಉಮೇದು ಉಳಿಯುತ್ತದೆಯೇ ಎಂಬುದನ್ನು ತೀರ್ಮಾನಿಸುತ್ತದೆ.

ಲೇಖಕಿ: ಬೆಂಗಳೂರಿನ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನಲ್ಲಿ ಸಂಶೋಧನಾ ವಿಶ್ಲೇಷಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.