
ಬಜೆಟ್ ಪ್ರತಿಯೊಂದಿಗೆ ನಿರ್ಮಲಾ ಸೀತಾರಾಮನ್
– ಪಿಟಿಐ ಚಿತ್ರ
ನವದೆಹಲಿ: ಫೆಬ್ರುವರಿ 1 ರಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸತತ 9ನೇ ಬಜೆಟ್ ಮಂಡಿಸಲಿದ್ದಾರೆ. ಕಳೆದ ವರ್ಷ ಜಿಎಸ್‌ಟಿ ಸರಳೀಕರಣ ಬಳಿಕ ಈಗ ಕಸ್ಟಮ್ ಸುಂಕ ಪದ್ಧತಿಯ ಪರಿಷ್ಕರಣೆಯನ್ನು ಈ ಬಜೆಟ್‌ನಲ್ಲಿ ನಿರೀಕ್ಷಿಸಲಾಗಿದೆ. ಜಾಗತಿಕ ಭೌಗೋಳಿಕ-ರಾಜಕೀಯ ಅನಿಶ್ಚಿತತೆ ಇರುವುದಿಂದ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಲು ಹಲವು ಸುಧಾರಣ ಕ್ರಮಗಳು ಇರಬಹುದು ಎನ್ನಲಾಗಿದೆ.
ಜಿಡಿಪಿ ಬೆಳವಣಿಗೆ ಹಾಗೂ ಸಾಲ ಇಳಿಕೆ ಬಗ್ಗೆಯೂ ಬಜೆಟ್‌ನಲ್ಲಿ ಮುನ್ನೋಟ ಇರುವ ಸಾಧ್ಯತೆ ಇದೆ.
ಕಳೆದ ವರ್ಷದ ಬಜೆಟ್‌ನಲ್ಲಿ ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಆದಾಯ ತೆರಿಗೆ ಮಿತಿಯನ್ನು ₹ 12 ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು. ಬಳಿಕ ಜಿಎಸ್‌ಟಿ ಸರಳೀಕರಣ ಆಗಿತ್ತು. ಈ ಬಾರಿ ಸ್ಟಾಂಡರ್ಡ್ ಡಿಡಕ್ಷನ್ ಮೊತ್ತ (ಪ್ರಮಾಣಿತ ಕಡಿತ) ಹೆಚ್ಚಿಸುವ ನಿರೀಕ್ಷೆ ಇದೆ. ಇದು ಹೊಸ ತೆರಿಗೆ ಪದ್ಧತಿ ಆಯ್ಕೆ ಮಾಡುವಂತೆ ತೆರಿಗೆದಾರರಿಗೆ ಪ್ರೋತ್ಸಾಹಿಸಿದಂತಾಗುತ್ತದೆ.
ಭೌಗೋಳಿಕ ರಾಜಕೀಯ ಅನಿಶ್ಚಿತತೆಯಲ್ಲಿರುವುದರಿಂದ ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ಮೀಸಲಿಡಬಹುದು. ನರೇಗಾ ಬದಲು ಇತ್ತೀಚೆಗೆ ಜಾರಿಗೆ ಬಂದ ವಿಬಿ–ಜಿ ರಾಮ್ ಜಿ ಯೋಜನೆ ಮೇಲೆಯೂ ಹೆಚ್ಚಿನ ಖರ್ಚು ನಿರೀಕ್ಷಿಸಬಹುದು.
2026ರ ಜನವರಿ 1 ರಿಂದಲೇ ಪೂರ್ವಾನ್ವಯವಾಗುವಂತೆ 8ನೇ ವೇತನಾ ಆಯೋಗದ ಘೋಷಣೆಯೂ ಈ ಬಜೆಟ್‌ನ ನಿರೀಕ್ಷೆಯಲ್ಲೊಂದು.
16ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಗಳಿಗೆ ತೆರಿಗೆ ಹಂಚಿಕೆಯ ಪ್ರಸ್ತಾಪವೂ ಬಜೆಟ್‌ನಲ್ಲಿ ನಿರೀಕ್ಷಿಸಬಹುದು.
ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ ಕೈಗಾರಿಕೆಗಳಿಗೆ ಪ್ರೋತ್ಸಾಹಕ ಯೋಜನೆಗಳು, ರತ್ನ ಮತ್ತು ಆಭರಣ, ಸಿದ್ಧ ಉಡುಪುಗಳು ಮತ್ತು ಚರ್ಮ ವಲಯಗಳಿಗೂ ಹೆಚ್ಚಿನ ಬೆಂಬಲ ದೊರಕುವ ಸಾಧ್ಯತೆ ಇದೆ.
ಲೀಥಿಯಂ ಹಾಗೂ ಕೋಬಾಲ್ಟ್ ಮುಂತಾದ ಅಪರೂಪದ ಖನಿಜಗಳ ಉತ್ಖನನ ಮತ್ತು ಸಂಸ್ಕರಣೆಗೆ ಹೆಚ್ಚಿನ ನಿಧಿ ಮೀಸಲಿಡಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.