
ನರೇಗಾ
ನವದೆಹಲಿ: ಹೆಸರು ಬದಲಾವಣೆಯಿಂದ ಇತ್ತೀಚೆಗೆ ಹೆಚ್ಚು ಚರ್ಚೆಗೆ ಒಳಗಾದ ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬದಲಾದ ಸ್ವರೂಪ (ಮನರೇಗಾ) ‘ವಿಬಿ–ಜಿ–ರಾಮ್–ಜಿ‘ಗೆ ಕೇಂದ್ರದ ಬಜೆಟ್‌ನಲ್ಲಿ ಹೆಚ್ಚಿನ ಹಣ ತೆಗೆದಿರಿಸಲಾಗಿದೆ.
ಮನರೇಗಾ ಯೋಜನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ವಿಬಿ–ಜಿ–ರಾಮ್–ಜಿ ಎಂದು ಹೆಸರು ಬದಲಾವಣೆ ಮಾಡಿ ಕೆಲವು ಮಾರ್ಪಾಡುಗಳನ್ನು ಮಾಡಿದೆ.
ಸದ್ಯ ಈ ಯೋಜನೆ ಹೊಸ ರೂಪದಲ್ಲಿ ಇನ್ನು ಅನುಷ್ಠಾನಗೊಂಡಿಲ್ಲ. ಅಲ್ಲಿವರೆಗೂ ಬಾಕಿ ಕಾಮಗಾರಿ, ಕೆಲಸಗಳು ಮನರೇಗಾ ಯೋಜನೆ ಹೆಸರಿನಲ್ಲಿಯೇ ಮುಂದುವರೆಯಲಿವೆ.
ಈ ಬದಲಾವಣೆ ರಾಷ್ಟ್ರದ ತುಂಬ ಕಳೆದ ಕೆಲವು ದಿನಗಳಿಂದ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅನುದಾನ ಕಡಿತಗೊಳಿಸಲಾಗುತ್ತದೆ, ರಾಜ್ಯಗಳಿಗೆ ಹೆಚ್ಚು ಹೊಣೆ ವರ್ಗಾಯಿಸಲಾಗುತ್ತದೆ ಎಂಬ ಆತಂಕ ರಾಜ್ಯಗಳನ್ನು ಕಾಡುತ್ತಿತ್ತು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಬಿ–ಜಿ–ರಾಮ್–ಜಿಗೆ ಬಜೆಟ್‌ನಲ್ಲಿ ಈ ಸಾರಿ ಗಮನಾರ್ಹವಾಗಿ ಅನುದಾನ ಹೆಚ್ಚಿಸಿದ್ದಾರೆ.
ಒಕ್ಕೂಟ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಡಿ ಕಾರ್ಯನಿರ್ವಹಿಸುವ ವಿಬಿ–ಜಿ–ರಾಮ್–ಜಿ ಯೋಜನೆಗೆ ಈ ಸಾರಿಯ ಬಜೆಟ್‌ನಲ್ಲಿ ₹95,692 ಕೋಟಿ ಹಣವನ್ನು ಮೀಸಲಿಟ್ಟಿದ್ದಾರೆ. 2025–26 ನೇ ಸಾಲಿನ ಬಜೆಟ್‌ನಲ್ಲಿ ₹88 ಸಾವಿರ ಕೋಟಿ ತೆಗೆದಿರಿಸಲಾಗಿತ್ತು. ಆದರೆ ಹಂಚಿಕೆಯಾಗಿದ್ದು 86 ಸಾವಿರ ಕೋಟಿ.
ಒಟ್ಟಾರೆ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಈ ಸಾರಿ ₹1.86 ಲಕ್ಷ ಕೋಟಿ ಹಂಚಿಕೆಯಾಗಿದೆ.
ವಿಬಿ–ಜಿ–ರಾಮ್–ಜಿ ಯೋಜನೆಯ ಹಂಚಿಕೆಯಾದ ₹95,692 ಕೋಟಿ ಹಣದಲ್ಲಿ ಬಾಕಿ ಇರುವ ಮನರೇಗಾ ಯೋಜನೆಯ ಕಾಮಗಾರಿ, ಕೆಲಸಗಳಿಗೆ ₹30 ಸಾವಿರ ಕೋಟಿ ಮೀಸಲಿದೆ.
ಕಳೆದ ಸಾರಿಯ ಬಜೆಟ್‌ಗಿಂತ ಈ ಸಾರಿ ಸುಮಾರು 10 ಸಾವಿರ ಕೋಟಿ ಹೆಚ್ಚು ಹಣವನ್ನು ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಒದಗಿಸಿದರೂ ಹೊಸ ನಿಯಮಾವಳಿಗಳ ಪ್ರಕಾರ ನಿಗದಿತ ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ ಎನ್ನಲಾಗಿದೆ.
ವಿಬಿ–ಜಿ–ರಾಮ್–ಜಿ ಯೋಜನೆಯಲ್ಲಿ ಈಶಾನ್ಯ ರಾಜ್ಯಗಳು ಹಾಗೂ ಹಿಮಾಲಯನ್ ರಾಜ್ಯಗಳನ್ನು ಹೊರತುಪಡಿಸಿ 60:40 ಅನುಪಾತದಲ್ಲಿ (60 ಭಾಗ ಕೇಂದ್ರ, 40 ಭಾಗ ರಾಜ್ಯ) ವೆಚ್ಚ ಮಾಡಬೇಕಾಗುತ್ತದೆ. ಮೊದಲು ಇದು 90:10 ರಷ್ಟಿತ್ತು. ಈಗ ಈಶಾನ್ಯ ರಾಜ್ಯಗಳು ಹಾಗೂ ಹಿಮಾಲಯನ್ ರಾಜ್ಯಗಳು ಮಾತ್ರ ಶೇ 10 ಖರ್ಚು ಮಾಡಬೇಕಾಗುತ್ತದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಹಂಚಿಕೆಯಾಗಿರುವ ಹಣದಲ್ಲಿ ಸುಮಾರು ಶೇ 50 ರಷ್ಟು ಉದ್ಯೋಗ ಖಾತ್ರಿ ಯೋಜನೆಗಾಗಿಯೇ ಖರ್ಚಾಗುತ್ತದೆ.
ಇನ್ನು, ಸಚಿವಾಲಯದ ಭೂ ಸಂಪನ್ಮೂಲ ಇಲಾಖೆಗೆ ₹2,654 ಕೋಟಿ, ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆಗೆ ₹19 ಸಾವಿರ ಕೋಟಿ, ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ಗಾಗಿ (DAY-NRLM) ₹19,200 ಕೋಟಿ ಹಾಗೂ ಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆಗಾಗಿ ₹54 ಸಾವಿರ ಕೋಟಿ ಹಣವನ್ನು ಈ ಬಜೆಟ್‌ನಲ್ಲಿ ಮೀಸಲಿಡಲಾಗಿದೆ.
ಹಿಂದಿನ ಅವಧಿಯ ಬಜೆಟ್‌ಗೆ ಹೋಲಿಸಿದರೆ ಈ ಇಲಾಖೆಗಳಿಗೆ ಹಣ ಹಂಚಿಕೆಯಲ್ಲಿ ಬಹುತೇಕ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲಾಗಿದೆ. ಯಾವುದೇ ಹೊಸ ಯೋಜನೆಗಳೂ ಸದ್ದು ಮಾಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.