ADVERTISEMENT

Union Budget 2026 | ಎಂಎಸ್‌ಎಂಇ ಚಾಂಪಿಯನ್‌: ₹10 ಸಾವಿರ ಕೋಟಿ ಮೀಸಲು

ಎಂಎಸ್‌ಎಂಇ ಆರ್ಥಿಕಾಭಿವೃದ್ಧಿಯ ಪ್ರಮುಖ ಎಂಜಿನ್‌: ವಿತ್ತ ಸಚಿವೆ

ಪಿಟಿಐ
Published 1 ಫೆಬ್ರುವರಿ 2026, 14:24 IST
Last Updated 1 ಫೆಬ್ರುವರಿ 2026, 14:24 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳನ್ನು (ಎಂಎಸ್‌ಎಂಇ) ಚಾಂಪಿಯನ್‌ಗಳಾಗಿ ರೂಪಿಸಲು ಕೇಂದ್ರ ಬಜೆಟ್‌ನಲ್ಲಿ ₹10 ಸಾವಿರ ಕೋಟಿ ಮೀಸಲಿರಿಸಲಾಗಿದೆ.

ಎಂಎಸ್‌ಎಂಇ ಆರ್ಥಿಕಾಭಿವೃದ್ಧಿಯ ಪ್ರಮುಖ ಎಂಜಿನ್‌. ಹೀಗಾಗಿ, ಇವುಗಳನ್ನು ಚಾಂಪಿಯನ್‌ಗಳಾಗಿ ಬೆಳೆಸುವ ಉದ್ದೇಶದಿಂದ ಬಂಡವಾಳ ನೆರವು, ನಗದು ಲಭ್ಯತೆ ಮತ್ತು ವೃತ್ತಿಪರ ನೆರವು ಎಂಬ ಮೂರು ಹಂತದ ವಿಧಾನಗಳನ್ನು ಪರಿಚಯಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡನೆ ವೇಳೆ ಪ್ರಸ್ತಾಪಿಸಿದರು. ಇದಲ್ಲದೆ, ವಸ್ತುಗಳ ರಫ್ತು ಸಂಬಂಧ ಪ್ರತಿ ರವಾನೆಗೆ ಇರುವ ₹10 ಲಕ್ಷದ ಮಿತಿ ತೆರವುಗೊಳಿಸುವುದಾಗಿ ಘೋಷಿಸಿದರು.

ಬಂಡವಾಳ ನೆರವು: 2021ರಲ್ಲಿ ಸ್ಥಾಪಿಸಿದ ‘ಸ್ವಾವಲಂಬಿ ಭಾರತ ನಿಧಿ’ಗೆ ಹೆಚ್ಚುವರಿಯಾಗಿ ₹2,000 ಕೋಟಿ ನೀಡುವುದಾಗಿ ಘೋಷಿಸಿದರು. ಇದು ಸಣ್ಣ ಉದ್ಯಮಗಳಿಗೆ ಅಗತ್ಯ ಬೆಂಬಲವನ್ನು ಮುಂದುವರಿಸಲು ಸಹಾಯ ಮಾಡುತ್ತದೆ.

ADVERTISEMENT

ವೃತ್ತಿಪರ ನೆರವು: ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ಕಡಿಮೆ ಖರ್ಚಿನಲ್ಲಿ ಕಾನೂನು ಮತ್ತು ನಿಯಮಗಳ ಪಾಲನೆಗೆ ಸಹಾಯ ಮಾಡಲು ಸರ್ಕಾರವು ವೃತ್ತಿಪರ ಸಂಸ್ಥೆಗಳ ಮೂಲಕ ‘ಕಾರ್ಪೊರೇಟ್‌ ಮಿತ್ರ’ ಎಂಬ ಪರಿಕಲ್ಪನೆಯನ್ನು ವಿಶೇಷವಾಗಿ 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಅಭಿವೃದ್ಧಿಪಡಿಸಲು ಉತ್ತೇಜನ ನೀಡಲಿದೆ.

ಟಿಆರ್‌ಇಡಿಎಸ್‌ ಮೂಲಕ ನಗದು ಲಭ್ಯತೆ

* ಕೇಂದ್ರ ಸಾರ್ವಜನಿಕ ವಲಯದ ಉದ್ದಿಮೆಗಳು (ಸಿಪಿಎಸ್‌ಇ) ಎಂಎಸ್‌ಎಂಇಗಳಿಂದ ವಸ್ತುಗಳನ್ನು ಖರೀದಿಸಿದಾಗ, ಹಣವನ್ನು ಕಡ್ಡಾಯವಾಗಿ ಟ್ರೇಡ್‌ ರಿಸೀವಬಲ್ಸ್‌ ಡಿಸ್ಕೌಂಟಿಂಗ್‌ ಸಿಸ್ಟಮ್‌ (ಟಿಆರ್‌ಇಡಿಎಸ್‌) ಎಂಬ ಡಿಜಿಟಲ್‌ ವೇದಿಕೆ ಮೂಲಕವೇ ಪಾವತಿಸಬೇಕು. ಇತರ ಕಾರ್ಪೊರೇಟ್ ಸಂಸ್ಥೆಗಳಿಗೆ ಇದನ್ನು ಒಂದು ಮಾದರಿಯಾಗಿಸುವ ಗುರಿ ಹೊಂದಲಾಗಿದೆ.

* ಸಣ್ಣ ಉದ್ಯಮಗಳು ತಮ್ಮ ಬಿಲ್‌ಗಳನ್ನು ಬ್ಯಾಂಕ್‌ಗಳಲ್ಲಿ ರಿಯಾಯಿತಿ ದರದಲ್ಲಿ ನಗದೀಕರಿಸಿಕೊಳ್ಳುವಾಗ (ಇನ್‌ವಾಯ್ಸ್ ಡಿಸ್ಕೌಂಟಿಂಗ್‌) ಒಂದು ವೇಳೆ ಹಣ ಮರುಪಾವತಿಯಲ್ಲಿ ತೊಂದರೆಯಾದರೆ ಅದಕ್ಕೆ ಸಿಜಿಟಿಎಂಎಸ್‌ಇ ಸಂಸ್ಥೆಯ ಮೂಲಕ ಸರ್ಕಾರವೇ ಗ್ಯಾರಂಟಿ ನೀಡಲಿದೆ.

* ಅಗ್ಗದ ಮತ್ತು ತ್ವರಿತ ಹಣಕಾಸು ಸೌಲಭ್ಯವನ್ನು ಉತ್ತೇಜಿಸಲು ಜಿಇಎಂ ಪೋರ್ಟಲ್ಅನ್ನು ಟಿಆರ್‌ಇಡಿಎಸ್‌ ಜೊತೆಗೆ ಸಂಯೋಜಿಸಲಾಗುತ್ತದೆ.

* ಎಂಎಸ್‌ಎಂಇಗಳು ಪಡೆಯಬೇಕಾದ ಹಣದ ದಾಖಲೆಗಳನ್ನು ಹೂಡಿಕೆ ಮಾಡಬಹುದಾದ ಬಾಂಡ್‌ಗಳಂತೆ ಪರಿವರ್ತಿಸಿ ಮಾರುಕಟ್ಟೆಯಲ್ಲಿ ಚಲಾವಣೆಗೆ ತರುವುದು. ಇದರಿಂದ ಹಣದ ಹರಿವು ಹೆಚ್ಚುತ್ತದೆ.

* ಟಿಆರ್‌ಇಡಿಎಸ್‌ ಮೂಲಕ ಎಂಎಸ್‌ಎಂಇಗಳಿಗೆ ₹7 ಲಕ್ಷ ಕೋಟಿಗಳಿಗೂ ಹೆಚ್ಚು ಹಣ ಲಭ್ಯವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.