ADVERTISEMENT

Union Budget 2026: ಅಣು ಶಕ್ತಿಗೆ ಉತ್ತೇಜನ, ಇ.ವಿ ಬ್ಯಾಟರಿಗೆ ಸುಂಕ ವಿನಾಯಿತಿ

ಇಂಧನ ಹೆಚ್ಚಳಗೊಳಿಸಲು ಕ್ರಮ–ಅಣು ಶಕ್ತಿ, ಬಿಇಎಸ್‌ಎಸ್‌, ಸೋಡಿಯಂ ಅಂಟಿಮೊನೆಟ್‌ಗೆ ಸುಂಕ ವಿನಾಯಿತಿ

ಪಿಟಿಐ
Published 1 ಫೆಬ್ರುವರಿ 2026, 14:36 IST
Last Updated 1 ಫೆಬ್ರುವರಿ 2026, 14:36 IST
ಅಣು ಶಕ್ತಿ ಇಂಧನ 
ಅಣು ಶಕ್ತಿ ಇಂಧನ    

ನವದೆಹಲಿ: ಪಳೆಯುಳಿಕೆ ಅಲ್ಲದ ಇಂಧನ ಉತ್ಪಾದನೆಯನ್ನು ಪ್ರೋತ್ಸಾಹಿಸಲು ಅಣುಶಕ್ತಿ ಕ್ಷೇತ್ರ ಹಾಗೂ ಬ್ಯಾಟರಿ ಶಕ್ತಿ ಸಂಗ್ರಹಣೆ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸಲು ಕೇಂದ್ರ ಸರ್ಕಾರವು ಮೂಲ ಕಸ್ಟಮ್‌ ಸುಂಕದಲ್ಲಿ ವಿನಾಯಿತಿ ನೀಡಿದೆ. 

‘ಬ್ಯಾಟರಿಗಳಿಗಾಗಿ ಲಿಥಿಯಂ–ಐಯಾನ್‌ ಕೋಶಗಳನ್ನು ತಯಾರಿಸಲು  ಬಳಸುವ ಬಂಡವಾಳ ಸರಕುಗಳಿಗೆ ನೀಡುವ ಮೂಲ ಕಸ್ಟಮ್ಸ್‌ ಸುಂಕ ವಿನಾಯಿತಿಯನ್ನು ಬ್ಯಾಟರಿ ಸಂಗ್ರಹಣ ವ್ಯವಸ್ಥೆಗೂ ವಿಸ್ತರಿಸುವ ಪ್ರಸ್ತಾವವನ್ನು ಮುಂದಿಡುತ್ತಿದ್ದೇನೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ನಲ್ಲಿ ಪ್ರಕಟಿಸಿದರು.

ಇದರಿಂದ ಬ್ಯಾಟರಿ ಶಕ್ತಿ ಸಂಗ್ರಹ ವ್ಯವಸ್ಥೆಗೆ ಬಳಸುವ ಲಿಥಿಯಂ– ಐಯಾನ್‌ ಕೋಶಗಳ ಬಂಡವಾಳ ಸರಕುಗಳ ಮೇಲಿನ ಆಮದು ಸುಂಕ ಶೂನ್ಯ ಇರಲಿದೆ. 

ADVERTISEMENT

ಬ್ಯಾಟರಿ ದೇಶಿಯ ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದ್ಯುತ್‌ ವಾಹನಗಳ ಬ್ಯಾಟರಿ ತಯಾರಿಕೆಗೆ 35ಕ್ಕೂ ಹೆಚ್ಚು ಬಂಡವಾಳ ಸರಕುಗಳ ಮೇಲೆ ಹಾಗೂ ಮೊಬೈಲ್‌ ಬ್ಯಾಟರಿ ತಯಾರಿಕೆಗೆ ಬಳಸುವ 28ಕ್ಕೂ ಅಧಿಕ ವಸ್ತುಗಳ ಮೇಲೆ ತೆರಿಗೆ ವಿನಾಯಿತಿ ನೀಡಲಾಗಿದೆ.

ಅದೇ ರೀತಿ, ಸೌರ ಫಲಕಗಳ ತಯಾರಿಕೆಗೆ ಬಳಸುವ ‘ಸೋಡಿಯಂ ಅಂಟಿಮೊನೆಟ್‌’ ಮೇಲಿನ ಆಮದು ಕಸ್ಟಮ್‌ ಸುಂಕ ವಿನಾಯಿತಿ ನೀಡುವ ಪ್ರಸ್ತಾವ ಮಂಡಿಸಲಾಗಿದೆ.

ಪ್ರಸಕ್ತ, ಸೋಡಿಯಂ ಅಂಟಿಮೊನೆಟ್‌ ಮೇಲೆ ಕಸ್ಟಂ ಸುಂಕ ಶೇಕಡ 7.5ರಷ್ಟಿದೆ. 

ಪರಮಾಣು ಇಂಧನಕ್ಕೆ ಒತ್ತು

ಕಲ್ಲಿದ್ದಲು ಆಧಾರಿತ ವಿದ್ಯುತ್‌ ಉತ್ಪಾದನೆಯನ್ನು ಬದಲಾಯಿಸುವ ಅಗತ್ಯತೆ ಹಿನ್ನೆಲೆಯಲ್ಲಿ ಪರಮಾಣು ಶಕ್ತಿ ಇಂಧನ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ. 

‘ದೇಶದ ಎಲ್ಲಾ ಪರಮಾಣುಗಳ ಈಗಿರುವ ಸಾಮರ್ಥ್ಯ ವಿಸ್ತರಿಸುವ ನಿಟ್ಟಿನಲ್ಲಿ  ಇಂಧನ ಯೋಜನೆಗಳಿಗೆ ಅಗತ್ಯವಾದ ಸರಕುಗಳ ಮೇಲಿನ ಮೂಲ ಕಸ್ಟಮ್‌ ಸುಂಕವನ್ನು 2035ರವರೆಗೆ ವಿಸ್ತರಿಸಲಾಗುತ್ತದೆ’ ಎಂದು ನಿರ್ಮಲಾ ಪ್ರಕಟಿಸಿದರು.

ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತವು 500 ಗಿಗಾವಾಟ್‌ ಉತ್ಪಾದನೆಯ ಗುರಿ ಹೊಂದಿದ್ದು, ಈ ಪ್ರೋತ್ಸಾಹವು ಮಹತ್ವ ಪಡೆದುಕೊಂಡಿದೆ. ಈ ಗುರಿ ತಲುಪಬೇಕಾದರೆ, ಈ ಕ್ಷೇತ್ರದಲ್ಲಿ ಪ್ರತಿ ವರ್ಷವೂ ಕೂಡ ಭಾರತ 50 ಗಿಗಾವಾಟ್‌ ಸೇರ್ಪಡೆ ಮಾಡಿಕೊಳ್ಳಬೇಕಿದೆ.  

ಜೈವಿಕ ಅನಿಲ ಮಿಶ್ರಿತ ಸಿಎನ್‌ಜಿ (ಸಾಂದ್ರಿಕೃತ ನೈಸರ್ಗಿಕ ಅನಿಲ) ಮೇಲೆ ಪಾವತಿಸಬೇಕಾದ ಕೇಂದ್ರ ಅಬಕಾರಿ ಸುಂಕ ಲೆಕ್ಕಾಚಾರ ಮಾಡುವ ವೇಳೆ ಜೈವಿಕ ಇಂಧನ ಸಂಪೂರ್ಣ ಮೌಲ್ಯವನ್ನು ಸುಂಕದಿಂದಲೇ ಹೊರಗಿಡಲು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.  ಸರ್ಕಾರದ ಈ ನಿರ್ಧಾರದಿಂದ ಜೈವಿನ ಇಂಧನ ಕ್ಷೇತ್ರಕ್ಕೆ ಅತೀ ದೊಡ್ಡ ಪ್ರೋತ್ಸಾಹ ದೊರೆತಂದಾಗಿದೆ. 

ಸರ್ಕಾರದ ಪ್ರಗತಿಪರ ನಿರ್ಧಾರದಿಂದ ಜೈವಿಕ ಅನಿಲ ಉತ್ಪಾದನಾ ಮಾರುಕಟ್ಟೆಯು ಮತ್ತಷ್ಟು ವಿಸ್ತರಣೆಯಾಗಲಿದ್ದು, ವ್ಯಾಪಾರ ಕೊರತೆಯನ್ನು ಕಡಿಮೆ ಮಾಡಲಿದೆ.
–ಗೌರವ್‌ ಕೇಡಿಯಾ, ಅಧ್ಯಕ್ಷ ಭಾರತೀಯ ಜೈವಿಕ ಇಂಧನ ಒಕ್ಕೂಟ
ಬ್ಯಾಟರಿ
ಬಯೋ ಸಿಎನ್‌ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.