ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ
ಚಿತ್ರ ಕೃಪೆ: ಎಕ್ಸ್ @siddaramaiah
ಬೆಂಗಳೂರು: ಭದ್ರಾ ಮೇಲ್ದಂಡೆ ಯೋಜನೆಗೆ 2023-24ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿದ ₹5,300 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರ ಘೋಷಿಸಿದ ಮೊತ್ತ ಬಿಡುಗಡೆ ಮಾಡದ ಕಾರಣ 29.90 ಟಿಎಂಸಿ ಅಡಿ ನೀರು ಬಳಸಿಕೊಂಡು (ತುಂಗಾ ನದಿಯಿಂದ 17.40 ಟಿಎಂಸಿ ಅಡಿ ಹಾಗೂ ಭದ್ರಾ ಜಲಾಶಯದಿಂದ 12.50 ಟಿಎಂಸಿ ಅಡಿ) ಮಧ್ಯ ಕರ್ನಾಟಕದ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ 2,25,515 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸಲು ಹಾಗೂ ಅಂತರ್ಜಲ ಹೆಚ್ಚಳಕ್ಕಾಗಿ ಈ ಜಿಲ್ಲೆಗಳ 367 ಕೆರೆಗಳನ್ನು ತುಂಬಿಸುವ ಯೋಜನೆಯ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ ರಾಷ್ಟ್ರೀಯ ಯೋಜನೆಯಾಗಲು ಅರ್ಹತೆ ಪಡೆದಿದೆ. ಈ ಸಂಬಂಧ ಜಲಶಕ್ತಿ ಸಚಿವಾಲಯದ ಉನ್ನತಾಧಿಕಾರ ಸಮಿತಿ ಸಹ ಶಿಫಾರಸು ಮಾಡಿದೆ. ಈ ಯೋಜನೆಗೆ ತಗಲುವ ಒಟ್ಟು ವೆಚ್ಚ ₹21,473 ಕೋಟಿ. ಯೋಜನೆಯನ್ನು 2008ರಲ್ಲಿ ಕೈಗೆತ್ತಿಕೊಳ್ಳಲಾಗಿತ್ತು. ರಾಜ್ಯ ಸರ್ಕಾರ ಯೋಜನೆಗೆ ₹10,121.75 ಕೋಟಿ ವೆಚ್ಚ ಮಾಡಿದೆ. ಯೋಜನೆಗೆ ಘೋಷಿಸಿದ ₹5,300 ಕೋಟಿ ಹಣಕಾಸಿನ ನೆರವಿನ ಒಂದು ಕಂತೂ ಸಹ ಇಲ್ಲಿಯವರೆಗೆ ಬಿಡುಗಡೆ ಆಗಿಲ್ಲ. ಇದರಿಂದ ರಾಷ್ಟ್ರೀಯ ಯೋಜನಾ ವ್ಯಾಪ್ತಿಗೆ ಸೇರಿಸುವ ಪ್ರಕ್ರಿಯೆಯೂ ವಿಳಂಬವಾಗಿದೆ ಎಂದಿದ್ದಾರೆ.
ಹಲವು ವರ್ಷ ಮಳೆಯ ಕೊರತೆಯಿಂದಾಗಿ ಕರ್ನಾಟಕದ ರೈತರು ನೀರಿನ ಅಭಾವ ಎದುರಿಸುತ್ತಿದ್ದಾರೆ. ರೈತರ ಹಿತಾಸಕ್ತಿಯನ್ನು ಕಾಪಾಡಲು ಮೇಲಿನ ಭದ್ರಾ ಯೋಜನೆಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕಿದೆ. ಹಾಗಾಗಿ, ಮುಂಬರುವ 2025–26ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ದೊರಕಿಸಬೇಕು. ಹಣಕಾಸು ಸಚಿವಾಲಯ ಮತ್ತು ಜಲಶಕ್ತಿ ಸಚಿವಾಲಯಕ್ಕೆ ನಿರ್ದೇಶನ ನೀಡಬೇಕು. ಬರಪೀಡಿತ ಜಿಲ್ಲೆಗಳ ರೈತರು ಮತ್ತು ಜನರಿಗೆ ನೆರವಾಗಬೇಕು ಎಂದು ವಿನಂತಿಸಿದ್ದಾರೆ.
ಪತ್ರದ ಪ್ರತಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಜಲಶಕ್ತಿ ಸಚಿವರಾದ ಸಿ.ಆರ್. ಪಾಟೀಲ್, ವಿ. ಸೋಮಣ್ಣ ಅವರಿಗೂ ಕಳುಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.