ADVERTISEMENT

ಬಂಡವಾಳ ಮಾರುಕಟ್ಟೆ: ಹಣಕಾಸು ನಿರ್ವಹಣೆಗೆ ಸರಳ ಸೂತ್ರ

ಕಾವ್ಯ ಡಿ.
Published 24 ಮಾರ್ಚ್ 2024, 19:17 IST
Last Updated 24 ಮಾರ್ಚ್ 2024, 19:17 IST
<div class="paragraphs"><p>ಮುಂಬೈ ಷೇರು ಮಾರುಕಟ್ಟೆ</p></div>

ಮುಂಬೈ ಷೇರು ಮಾರುಕಟ್ಟೆ

   

ರಾಯಿಟರ್ಸ್‌

‘ದುಡ್ಡನ್ನು ನಾವು ನಿಯಂತ್ರಿಸಬೇಕೇ ಹೊರತು ದುಡ್ಡು ನಮ್ಮನ್ನು ನಿಯಂತ್ರಿಸಬಾರದು’ ಎನ್ನುವ ಮಾತಿದೆ. ಆದರೆ, ಹೀಗಾಗಬೇಕಾದರೆ ನಿಮಗೆ ಹಣಕಾಸು ನಿರ್ವಹಣೆ ಬಗ್ಗೆ ಗೊತ್ತಿರಬೇಕು.

ADVERTISEMENT

ಯಾರು ಆರ್ಥಿಕ ಶಿಸ್ತು ಹೊಂದಿರುತ್ತಾರೋ ಅವರು ಜೀವನದ ಏಳುಬೀಳುಗಳನ್ನು ಸರಾಗವಾಗಿ ನಿಭಾಯಿಸುತ್ತಾರೆ. ಬನ್ನಿ ಹಣಕಾಸು ನಿರ್ವಹಣೆ ಕಲಿತು ನೀವೂ ಹೇಗೆ ಯಶಸ್ಸಿನ ಹಾದಿಯಲ್ಲಿ ಸಾಗಬಹುದು ಎನ್ನುವುದನ್ನು ವಿವರವಾಗಿ ತಿಳಿಯೋಣ.

ಹೂಡಿಕೆ ಆರಂಭಿಸುವ ಮುನ್ನ ಜೀವನದ ಸುರಕ್ಷತೆಗೆ ಆದ್ಯತೆ ಕೊಡಿ: ವೈಯಕ್ತಿಕ ಹಣಕಾಸು ನಿರ್ವಹಣೆಯಲ್ಲಿ ಉಳಿತಾಯ ಮತ್ತು ಹೂಡಿಕೆಗೆ ಎಷ್ಟು ಆದ್ಯತೆ ಕೊಡುತ್ತೇವೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಜೀವನದ ಸುರಕ್ಷತೆಗೂ ಕೊಡಬೇಕು. ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಬೇಕಾದರೆ ಹೇಗೆ ಅಡಿಪಾಯ ಮುಖ್ಯವಾಗುತ್ತದೋ ಅದೇ ರೀತಿಯಲ್ಲಿ ಶ್ರೀಮಂತಿಕೆಯತ್ತ ಪಯಣ ಬೆಳೆಸಬೇಕಾದರೆ ಹಣಕಾಸಿನ ಸುರಕ್ಷತೆಯ ಬುನಾದಿ ಬಹಳ ಮುಖ್ಯವಾಗುತ್ತದೆ.

ನಿಮ್ಮ ವಯಸ್ಸು 20, 30 ಅಥವಾ 40 ಇರಲಿ. ಉಳಿತಾಯಕ್ಕೂ ಮೊದಲು ವೈಯಕ್ತಿಕ ಹಣಕಾಸಿನ ವಿಚಾರದಲ್ಲಿ ಪ್ರತಿಯೊಬ್ಬರು ಮೂರು ವಿಚಾರಗಳಿಗೆ ಗಮನಕೊಡಬೇಕು.

ಒಂದನೆಯದ್ದು ತುರ್ತು ನಿಧಿ (ಎಮರ್ಜೆನ್ಸಿ ಫಂಡ್). ನಿಮ್ಮ ತಿಂಗಳ ಖರ್ಚಿನ ಕನಿಷ್ಠ 6 ಪಟ್ಟು ಹಣವನ್ನು ಉಳಿತಾಯ ಖಾತೆಯಲ್ಲಿ ಅಥವಾ ಲಿಕ್ವಿಡ್ ಫಂಡ್‌ಗಳಲ್ಲಿ ಇರಬೇಕು. ಕೆಲಸ
ಕಳೆದುಕೊಳ್ಳುವುದು, ಅನಾರೋಗ್ಯ, ತುರ್ತು ಪ್ರಯಾಣ ಹೀಗೆ ಧುತ್ತೆಂದು ಬರುವ
ಅನಿಶ್ಚಿತತೆಗಳಿಗೆ ನಮ್ಮ ಬಳಿ ಒಂದಿಷ್ಟು ಹಣ
ಕೂಡಿಟ್ಟುಕೊಂಡಿದ್ದರೆ ಸವಾಲುಗಳನ್ನು ಎದುರಿಸುವುದು ಸುಲಭವಾಗುತ್ತದೆ. ಒಂದೊಮ್ಮೆ ತುರ್ತು ನಿಧಿ ಸ್ಥಾಪಿಸಿಕೊಂಡಿಲ್ಲ ಎಂದಾದಲ್ಲಿ ಈ ಕೂಡಲೇ ಅದನ್ನು ಕಟ್ಟಿಕೊಳ್ಳುವ ಕೆಲಸ ಮಾಡಿ. ಯಾಕೆಂದರೆ ತುರ್ತು ನಿಧಿ ಆಪತ್ಕಾಲದ ಆಪ್ತಮಿತ್ರ.

ಎರಡನೆಯ ಮುಖ್ಯ ವಿಚಾರ ಅಂದ್ರೆ ಆರೋಗ್ಯ ವಿಮೆ. ನಮ್ಮ ಪರಿಶ್ರಮದ ದುಡ್ಡು ಆಸ್ಪತ್ರೆಯ ಪಾಲಾಗಬಾರದು ಎಂದರೆ ಒಂದು ಆರೋಗ್ಯ ವಿಮೆ ಕೊಂಡುಕೊಳ್ಳುವುದು ಬಹಳ ಮುಖ್ಯ. ವೈದ್ಯಕೀಯ ವೆಚ್ಚಗಳು ಪ್ರತಿವರ್ಷ ಶೇ 14ರಷ್ಟು
ಹೆಚ್ಚಳವಾಗುತ್ತಿವೆ. ಇದನ್ನು ನಿಭಾಯಿಸಲು ಆರೋಗ್ಯ ವಿಮೆ ಅನಿವಾರ್ಯವಾಗುತ್ತದೆ.
ಒಂದೊಮ್ಮೆ ಈಗಾಗಲೇ ಆರೋಗ್ಯ ವಿಮೆ ಇದ್ದರೆ ಅದರ ಕವರೇಜ್ ಮೊತ್ತ
ಹೆಚ್ಚಿಸಿಕೊಳ್ಳುವ ಅಗತ್ಯವಿದೆಯೇ ಎನ್ನುವುದನ್ನು
ಪರಾಮರ್ಶಿಸಿಕೊಳ್ಳಿ.

ಮೂರನೆಯ ಮುಖ್ಯ ವಿಚಾರ ಅಂದರೆ ಜೀವ ವಿಮೆ. ನಿಮ್ಮ ವಾರ್ಷಿಕ ಆದಾಯದ 10 ಪಟ್ಟು ಕವರೇಜ್ ಇರುವ ಟರ್ಮ್ ಲೈಫ್ ಇನ್ಶೂರೆನ್ಸ್ ಅನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಟರ್ಮ್ ಇನ್ಶೂರೆನ್ಸ್ ಅತ್ಯಂತ ಅಗ್ಗದ, ಹೆಚ್ಚು ಕವರೇಜ್ ಕೊಡುವ ಲೈಫ್ ಇನ್ಶೂರೆನ್ಸ್ ಆಗಿದೆ. ಕುಟುಂಬದ ದುಡಿಯುವ ವ್ಯಕ್ತಿಯ ಜೀವಕ್ಕೆ ತೊಂದರೆಯಾದರೆ ಟರ್ಮ್ ಇನ್ಶೂರೆನ್ಸ್ ಕರವೇಜ್‌ಗೆ ತಕ್ಕಂತೆ ನೊಂದ ಕುಟುಂಬಕ್ಕೆ ಹಣಕಾಸಿನ ಪರಿಹಾರ ದೊರೆಯುತ್ತದೆ. ₹25 ಲಕ್ಷ, ₹50 ಲಕ್ಷ, ₹75 ಲಕ್ಷ, ₹1 ಕೋಟಿ, ₹2 ಕೋಟಿ ಹೀಗೆ ನಿಮ್ಮ ಗಳಿಕೆ ಆಧರಿಸಿ ಟರ್ಮ್ ಇನ್ಶೂರೆನ್ಸ್ ಕವರೇಜ್ ಪಡೆಯಬಹುದು.

ಹಣಕಾಸಿನ ಗುರಿಗಳು ಸ್ಪಷ್ಟವಾಗಿರಲಿ; ಹಣದುಬ್ಬರದ ಲೆಕ್ಕಾಚಾರವಿರಲಿ: ಮಕ್ಕಳ ಉನ್ನತ ಶಿಕ್ಷಣ, ಮಕ್ಕಳ ಮದುವೆ, ವಿದೇಶ ಪ್ರವಾಸ, ಕಾರು ಖರೀದಿ, ಮನೆ ಖರೀದಿ ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಹಣಕಾಸಿನ ಗುರಿಗಳು  ಇರುತ್ತವೆ. ಈ ಗುರಿಗಳನ್ನು ಕೇಂದ್ರೀಕರಿಸಿಕೊಂಡು ಹೂಡಿಕೆ ಮಾಡಿದಾಗ ಮಾತ್ರ ಗುರಿಗಳನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಉದಾಹರಣೆಗೆ ಏಳು ವರ್ಷಗಳ ಬಳಿಕ ನೀವು ವಿದೇಶ ಪ್ರವಾಸಕ್ಕೆ ಹೋಗಬೇಕು. ಅದಕ್ಕಾಗಿ ಉಳಿತಾಯ ಮಾಡಬೇಕು ಎಂದು ಭಾವಿಸುತ್ತೀರಿ ಎಂದುಕೊಳ್ಳಿ. ಇವತ್ತಿನ ಲೆಕ್ಕಾಚಾರದಲ್ಲಿ ವಿದೇಶ ಪ್ರವಾಸಕ್ಕೆ ₹10 ಲಕ್ಷ ಬೇಕಾಗುತ್ತದೆ ಎಂದುಕೊಳ್ಳಿ. ಶೇ 6ರ ಹಣದುಬ್ಬರ ಗಣನೆಗೆ ತೆಗೆದುಕೊಂಡಾಗ 7 ವರ್ಷಗಳ ಬಳಿಕ ವಿದೇಶ ಪ್ರವಾಸಕ್ಕೆ ₹10 ಲಕ್ಷದ ಜಾಗದಲ್ಲಿ ₹15 ಲಕ್ಷ ಬೇಕಾಗುತ್ತದೆ. ಹೀಗೆ ಉಳಿತಾಯ ಮಾಡುವಾಗ ಹಣದುಬ್ಬರದ ಅಂದಾಜು ಇಟ್ಟುಕೊಳ್ಳುವುದು ಬಹಳ
ಮುಖ್ಯವಾಗುತ್ತದೆ.

ಪ್ರತಿ ತಿಂಗಳು ಉಳಿತಾಯ, ಹೂಡಿಕೆ ಮಾಡಿ: ಹಣಕಾಸಿನ ಗುರಿಗಳನ್ನು ಕಂಡುಕೊಳ್ಳುವುದು ಎಷ್ಟು ಮುಖ್ಯವೋ ಅವನ್ನು ಕೇಂದ್ರೀಕರಿಸಿ
ಕೊಂಡು ಪ್ರತಿ ತಿಂಗಳೂ ನಿರ್ದಿಷ್ಟ ಮೊತ್ತ ಉಳಿತಾಯ ಮಾಡುವುದು ಅಷ್ಟೇ ಮುಖ್ಯ. ಉಳಿತಾಯ ಇದ್ದರೆ ಮಾತ್ರ ಹೂಡಿಕೆ ಸಾಧ್ಯವಾ ಗುತ್ತದೆ. ಹಾಗಾಗಿ, ಬಂದ ಆದಾಯದಲ್ಲಿ ಮೊದಲು ಉಳಿತಾಯ ಮಾಡಿ ನಂತರ ಖರ್ಚು ಮಾಡಿ.

ಅಂದರೆ ‘ಆದಾಯ–ಉಳಿತಾಯ= ಖರ್ಚು’ ಎನ್ನುವುದು ನಿಮ್ಮ ಮಂತ್ರವಾಗಬೇಕು. ನಿಮ್ಮ ಆದಾಯದ ಶೇ 50ರಷ್ಟು ಹಣವನ್ನು ಅಗತ್ಯ ವಸ್ತುಗಳ ಖರೀದಿಗೆ ಖರ್ಚು ಮಾಡಿದರೆ,
ಶೇ 30ರಷ್ಟು ಹಣವನ್ನು ಬಯಕೆಗಳ ಈಡೇರಿಕೆಗೆ/ ಐಷಾರಾಮಿ ಖರೀದಿಗೆ ಮೀಸಲಿಡಿ. ಕನಿಷ್ಠ ಶೇ 20ರಷ್ಟು ಹಣವನ್ನಾದರೂ ಉಳಿತಾಯ ಮಾಡುವುದನ್ನು ಮರೆಯಬೇಡಿ. ಶೇ 20ರಷ್ಟು ಮಾತ್ರ ಉಳಿಸಿದರೆ ಸಾಕು ಎನ್ನುವ ಮನೋಭಾವ ಬೇಡ. ಎಷ್ಟು ಹೆಚ್ಚು ಉಳಿತಾಯ ಸಾಧ್ಯವೋ ಅಷ್ಟನ್ನು ಮಾಡಿದರೆ ಒಳಿತು.

ಹಣದುಬ್ಬರ ಮೀರಿ ಲಾಭ ಕೊಡುವ ಹೂಡಿಕೆಗಳನ್ನು ಪರಿಗಣಿಸಿ: ಉಳಿತಾಯದ ಹಣ ಹೂಡಿಕೆ ಮಾಡುವಾಗ ಹಣದುಬ್ಬರ ಅಥವಾ ಬೆಲೆ ಏರಿಕೆ ಮೀರಿ ಲಾಭ ಕೊಡುವ ಉತ್ಪನ್ನಗಳಲ್ಲಿ ಹೂಡಿಕೆ ಮಾಡಿದ್ದೀರಾ ಎನ್ನುವುದು ಬಹಳ ಮುಖ್ಯವಾಗುತ್ತದೆ. ಸದ್ಯ ಹಣದುಬ್ಬರ ಹೆಚ್ಚಿದೆ. ಬಹುಪಾಲು ಸಾಂಪ್ರದಾಯಿಕ ಹೂಡಿಕೆಗಳಾದ ಬ್ಯಾಂಕ್ ನಿಶ್ಚಿತ ಠೇವಣಿ
(ಎಫ್.ಡಿ), ಅಂಚೆ ಕಚೇರಿ ಹೂಡಿಕೆ, ಸಾಂಪ್ರದಾಯಿಕ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಬಡ್ಡಿದರ ಶೇ 5ರಿಂದ 7ರ ಆಸುಪಾಸಿನಲ್ಲಿದೆ. ಇಂತಹ ಹೂಡಿಕೆಗಳಲ್ಲಿ ನಮ್ಮ ಉಳಿತಾಯದ ಹಣ ಹಾಕಿದರೆ ಹಣದುಬ್ಬರ ಮೀರಿ ಲಾಭ ಗಳಿಸಲು ಸಾಧ್ಯವಿಲ್ಲ. ಹಣದುಬ್ಬರ ಮೀರಿ ಲಾಭ ಗಳಿಸಬೇಕಾದರೆ ಮ್ಯೂಚುಯಲ್ ಫಂಡ್, ಸ್ಟಾಕ್ ಮಾರ್ಕೆಟ್ ಹೂಡಿಕೆಗಳ ಬಗ್ಗೆ ತಿಳಿದುಕೊಂಡು ಹೂಡಿಕೆ ಮಾಡಬೇಕು. ಹೀಗೆ ಮಾಡಿದಾಗ ಸಂಪತ್ತು ಸೃಷ್ಟಿಸಲು ಸಾಧ್ಯವಾಗುತ್ತದೆ.

(ಲೇಖಕಿ: ಚಾರ್ಟರ್ಡ್ ಅಕೌಂಟೆಂಟ್)

ಮತ್ತೆ ಗಳಿಕೆಯ ಲಯಕ್ಕೆ ಮರಳಿದ ಷೇರುಪೇಟೆ

ಕಳೆದ ವಾರ ಕುಸಿತ ಕಂಡಿದ್ದ ಷೇರುಪೇಟೆ ಸೂಚ್ಯಂಕಗಳು ಮಾರ್ಚ್ 22ಕ್ಕೆ ಕೊನೆಗೊಂಡ ವಾರದಲ್ಲಿ ಮತ್ತೆ ಜಿಗಿತ ಕಂಡಿವೆ.

ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಪುಟಿದೆದ್ದಿವೆ. 72,831 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ಶೇ 0.26ರಷ್ಟು ಹೆಚ್ಚಳ ಕಂಡಿದ್ದರೆ, 22,096 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.33ರಷ್ಟು ಜಿಗಿದಿದೆ.

ಅಮೆರಿಕ ಫೆಡರಲ್ ಬ್ಯಾಂಕ್ ಭವಿಷ್ಯದಲ್ಲಿ ಬಡ್ಡಿದರ ಇಳಿಕೆ ಮಾಡುವ ಮುನ್ಸೂಚನೆ ನೀಡಿರುವುದು, ತೈಲ ಬೆಲೆಯಲ್ಲಿ ಇಳಿಕೆ ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಪುಟಿದೇಳಲು ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಐಟಿ ವಲಯ ಶೇ 6.2, ಎಫ್‌ಎಂಸಿಜಿ ಶೇ 0.7ರಷ್ಟು ಕುಸಿದಿವೆ. ರಿಯಲ್ ಎಸ್ಟೇಟ್ ಶೇ 5.3, ಆಟೊ ಶೇ 4.2, ಲೋಹ ಶೇ 4.2, ಎನರ್ಜಿ ಶೇ 2.2, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 1.9, ಮೀಡಿಯಾ ಶೇ 1.5, ಅನಿಲ ಮತ್ತು ತೈಲ ವಲಯ
ಶೇ 1.5, ಫೈನಾನ್ಶಿಯಲ್ ಸರ್ವಿಸಸ್ ಶೇ 0.7, ಬ್ಯಾಂಕ್ 0.6 ಮತ್ತು ನಿಫ್ಟಿ ಫಾರ್ಮಾ ಶೇ 0.5ರಷ್ಟು ಹೆಚ್ಚಳವಾಗಿವೆ.

ನಿಫ್ಟಿಯಲ್ಲಿ ಮಾರುತಿ ಸುಜುಕಿ ಶೇ 7.48, ಟಾಟಾ ಸ್ಟೀಲ್ ಶೇ 7.35, ಬಜಾಜ್ ಆಟೊ ಶೇ 7.06, ಅಪೋಲೊ ಹಾಸ್ಪಿಟಲ್ಸ್ ಶೇ 6.46, ಐಷರ್ ಮೋಟರ್ಸ್ ಶೇ 6.32, ಜೆಎಸ್‌ಡಬ್ಲ್ಯು ಸ್ಟೀಲ್ ಶೇ 4.96 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 4.31ರಷ್ಟು ಜಿಗಿದಿವೆ. ಇನ್ಫೊಸಿಸ್ ಶೇ 7.71, ಟಾಟಾ ಕನ್ಸ್ಯೂಮರ್ ಶೇ 7.38, ಟಿಸಿಎಸ್ ಶೇ 7.22, ವಿಪ್ರೊ ಶೇ 5.76, ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 5.44, ಎಲ್‌ಟಿಐ ಮೈಂಡ್ ಟ್ರೀ ಶೇ 3.59 ಮತ್ತು ಎಚ್‌ಯುಎಲ್ ಶೇ 3.08ರಷ್ಟು ಕುಸಿದಿವೆ.

ಮುನ್ನೋಟ: ಇನ್ನೇನು ಕಂಪನಿಗಳ ತ್ರೈಮಾಸಿಕ ಫಲಿತಾಂಶದ ಅವಧಿ ಸಮೀಪಿಸುತ್ತಿದೆ. ಜನವರಿ– ಮಾರ್ಚ್ ತ್ರೈಮಾಸಿಕ ಸಾಧನೆ ವರದಿ ಮೇಲೆ ಹೂಡಿಕೆದಾರರು ಕಣ್ಣಿಡಲಿದ್ದಾರೆ. ಉಳಿದಂತೆ ಲೋಕಸಭಾ ಚುನಾವಣೆ, ಜಾಗತಿಕ ವಿದ್ಯಮಾನ ಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.